ಗೊರೇಬಾಳ: ಪ್ರತಿಯೊಬ್ಬ ವಾಹನ ಸವಾರರು ಮತ್ತು ನಾಗರಿಕರು ರಸ್ತೆ ನಿಯಮಗಳನ್ನು ಪಾಲಿಸಿದಲ್ಲಿ ರಸ್ತೆ ಅಪಘಾತ ತಗ್ಗಿಸಲು ಅನುಕೂಲವಾಗುತ್ತದೆ ಎಂದು ತುರ್ವಿಹಾಳ ಪೊಲೀಸ್ ಠಾಣೆ ಮುಖ್ಯಪೇದೆ ಬಸವರಾಜ ಹೇಳಿದರು.
ಸಿಂಧನೂರು ತಾಲೂಕಿನ ಕಲಮಂಗಿ ಗ್ರಾಮದ ಸರ್ಕಾರಿ ಪ್ರೌಢಶಾಲೆಯಲ್ಲಿ ಪೊಲೀಸ್ ಇಲಾಖೆಯಿಂದ ಹಮ್ಮಿಕೊಂಡಿದ್ದ ಸಂಚಾರ ನಿರ್ವಹಣೆ ಮತ್ತು ರಸ್ತೆ ಸುರಕ್ಷತಾ ಮಾಸಾಚರಣೆ ಹಾಗೂ ಜಾಗೃತಿ ಜಾಥಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ವಿದ್ಯಾರ್ಥಿಗಳು, ಯುವಜನರು ಅತೀ ವೇಗದಿಂದ ವಾಹನ ಚಲಾಯಿಸುತ್ತಿದ್ದು, ಇದರಿಂದ ಅಪಘಾತ ಹೆಚ್ಚುತ್ತಿವೆ. ಜಾಗರೂಕತೆಯಿಂದ ವಾಹನ ಚಲಾಯಿಸುವ ಮೂಲಕ ವೈಯಕ್ತಿಕ ಸೇರಿ ಇತರರ ಜೀವ ರಕ್ಷಣೆಗೆ ಮುಂದಾಗಬೇಕು.
ಸಂಚಾರ ನಿಯಮ ಅರಿತು ವಾಹನ ಚಲಾಯಿಸಬೇಕು. ವಾಹನ ಚಾಲನೆ ಪರವಾನಗಿ ಮತ್ತು ವಾಹನಕ್ಕೆ ಸಂಬಂಧಿಸಿದ ದಾಖಲೆಗಳನ್ನು ಇರಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು. ಪೇದೆ ಮಲ್ಲಿಕಾರ್ಜುನ ಸಂಚಾರ ನಿಯಮ ಮತ್ತು ರಾಜ್ಯ ಮತ್ತು ದೇಶದಲ್ಲಿ ನಡೆದ ಅಪಘಾತಗಳ ಅಂಕಿ-ಅಂಶ ವಿವರಿಸಿದರು.
ಮುಖ್ಯಗುರು ಸಿ. ಪ್ರಕಾಶ ಅಧ್ಯಕ್ಷತೆ ವಹಿಸಿದ್ದರು. ಎಎಸ್‌ಐ ಹನುಮಂತಪ್ಪ, ವೀರೇಶ, ಪೇದೆಗಳಾದ ಖಲೀಲ್ ಪಾಷಾ, ಗೋಪಾಲ ಮತ್ತು ಶಿಕ್ಷಕರಾದ ಅಕ್ಕಮಹಾದೇವಿ, ಜಯಶ್ರೀ ಆಶ್ರಿತ್, ಶರಣಪ್ಪ ಮುಳ್ಳೂರು, ವೀರೇಶ ಗೋನವಾರ, ಸುಭಾಷ ಪತ್ತಾರ, ಅರುಣ, ರೂಪಾ ಕರ್ಣೆ ಇದ್ದರು.
ಜಾಗೃತಿ ಜಾಥಾ: ಕಾರ್ಯಕ್ರಮದ ನಂತರ ಶಾಲಾ ಮಕ್ಕಳು, ಶಿಕ್ಷಕರು, ಗ್ರಾಮದ ಯುವಕರು ಮತ್ತು ನಾಗರಿಕರೊಂದಿಗೆ ಗ್ರಾಮದ ಮುಖ್ಯ ರಸ್ತೆ ಮತ್ತು ವಿವಿಧ ಬಡಾವಣೆಗಳಲ್ಲಿ ರಸ್ತೆ ಸಂಚಾರ ಮತ್ತು ರಸ್ತೆ ಸುರಕ್ಷತೆ ಕುರಿತು ಘೋಷಣೆ ಕೂಗುತ್ತ ಜಾಥಾ ನಡೆಸಲಾಯಿತು.