Advertisement

ರಸ್ತೆ ದುರವಸ್ಥೆ: ಅಧಿಕಾರಿಗಳ ವಿರುದ್ಧ ಗರಂ

11:04 AM Dec 06, 2019 | Team Udayavani |

ಹುಬ್ಬಳ್ಳಿ: ತಾಲೂಕಿನಾದ್ಯಂತ ಮಳೆಗೆ ಎಲ್ಲ ರಸ್ತೆಗಳು ಹಾಳಾಗಿದ್ದು, ಸಮರ್ಪಕ ದುರಸ್ತಿ ಕಾರ್ಯ ಕೈಗೊಳ್ಳದ ಬಗ್ಗೆ ತಾಪಂ ಸದಸ್ಯರು ಪಕ್ಷಭೇದ ಮರೆತು ಆಕ್ರೋಶ ವ್ಯಕ್ತಪಡಿಸಿದರು.

Advertisement

ಗುರುವಾರ ನಡೆದ ತಾಪಂ ಸಾಮಾನ್ಯ ಸಭೆಯಲ್ಲಿ ವಿಷಯ ಪ್ರಸ್ತಾಪಿಸಿದ ಸದಸ್ಯರು, ರಸ್ತೆ ದುರಸ್ತಿಗೆ ಕೈಗೊಂಡ ಕ್ರಮಗಳ ಬಗ್ಗೆ ಮಾಹಿತಿ ನೀಡಬೇಕೆಂದು ಒತ್ತಾಯಿಸಿದರು. ರಸ್ತೆ ದುರಸ್ತಿ ಕಡೆಗೆ ಅಧಿಕಾರಿಗಳು ಗಮನ ಹರಿಸದ ಪರಿಣಾಮ ಹದಗೆಟ್ಟಿದ್ದರಿಂದ ಸಂಚಾರಕ್ಕೆ ತೀವ್ರ ತೊಂದರೆ ಆಗುತ್ತಿದ್ದು, ಕೂಡಲೇ ದುರಸ್ತಿ ಕೈಗೊಳ್ಳಬೇಕೆಂದು ಆಗ್ರಹಿಸಿದರು.

ನೀವೇ ಜವಾಬ್ದಾರಿ: ಅದರಗುಂಚಿ ಗ್ರಾಮದಲ್ಲಿ ಜಿಎಂಪಿಎಸ್‌ ಶಾಲೆಯಲ್ಲಿ ಎರಡು ಕೊಠಡಿ ನಿಮಾರ್ಣಕ್ಕೆ ಗುಂಡಿ ತೋಡಿ ಹಾಗೇ ಬಿಟ್ಟಿದ್ದಾರೆ. ಈ ಹಿಂದೆ ಕೊಠಡಿಗಳ ಅಳತೆ ಸರಿ ಇಲ್ಲ ಎಂದು ಮುಖೋಪಾಧ್ಯಾಯರು ತಡೆ ಮಾಡಿದ್ದಾರೆ ಎಂದು ಅಧಿಕಾರಿಗಳು ಸಬೂಬು ಹೇಳಿದರು. ಆಗ ಪ್ರತಿಕ್ರಿಯಿಸಿದ ತಾಪಂ ಉಪಾಧ್ಯಕ್ಷ ಗುರುಪಾದಪ್ಪ ಕಮಡೊಳ್ಳಿ, ಅಷ್ಟು ಚಿಕ್ಕ ಕೊಠಡಿಯಲ್ಲಿ ಮಕ್ಕಳು ಅಧ್ಯಯನ ಮಾಡಲು ಸಾಧ್ಯವೇ.

ಶಾಲೆಯ ಆವರಣದಲ್ಲಿ ಏನಾದರೂ ಅವಘಡಗಳು ಸಂಭವಿಸಿದರೇ ಅದಕ್ಕೆ ನೀವೇ ಜವಾಬ್ದಾರಿ ಹೊರಬೇಕಾಗುತ್ತದೆ ಎಂದು ಎಚ್ಚರಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಲೋಕೋಪಯೋಗಿ ಇಲಾಖೆ ಸಹಾಯಕ ಕಾರ್ಯನಿರ್ವಾಹಕ ಅಭಿಯಂತ ಗುಂಡಳ್ಳಿ, ಈಗಾಗಲೇ ಮುಖೋಪಾಧ್ಯಾಯರು ತಡೆ ನೀಡಿರುವ ಹಿನ್ನೆಲೆಯಲ್ಲಿ ಸಂಬಂಧಿಸಿದ ಇಲಾಖೆಯ ಗಮನಕ್ಕೆ ತರಲಾಗಿದೆ. ಅಳತೆಯಲ್ಲಿ ಹೆಚ್ಚಳ ಮಾಡಲಾಗಿದ್ದು, ಕೂಡಲೇ ಕೆಲಸ ಆರಂಭಿಸುವುದಾಗಿ ಹೇಳಿದರು. ಕುಡಿವ ನೀರು ಹಾಗೂ ನೈರ್ಮಲ್ಯ ಇಲಾಖೆ ಅಧೀನದ ಎಲ್ಲ ಶುದ್ದ ಕುಡಿಯುವ ನೀರಿನ ಘಟಕಗಳನ್ನು ಪರಿಶೀಲನೆ ನಡೆಸಬೇಕು. ಎಲ್ಲೂ ನೀರಿನ ತೊಂದರೆಯಾಗದಂತೆ ನೋಡಿಕೊಳ್ಳಬೇಕು ಎಂದು ಅಧಿಕಾರಿಗಳನ್ನು ಸದಸ್ಯ ಫ‌ಕೀರಪ್ಪ ಚಾಕಲಬ್ಬಿ ಒತ್ತಾಯಿಸಿದರು.

ಗ್ರಾಮೀಣ ಶಿಕ್ಷಣ ಇಲಾಖೆ: ಮಳೆಯಿಂದಾಗಿ ಶಾಲಾ ಕಟ್ಟಡಗಳು ಹಾನಿಗೀಡಾಗಿದ್ದು, ದುರಸ್ತಿ ಬಗ್ಗೆ ವರದಿ ಸಲ್ಲಿಸಲಾಗಿದೆ. ಅಭಿವೃದ್ಧಿಗೆ ಆದ್ಯತೆ ನೀಡಲಾಗಿದೆ ಎಂದು ಶಹರ ಹಾಗೂ ಗ್ರಾಮೀಣ ಕ್ಷೇತ್ರ ಶಿಕ್ಷಣಾಧಿಕಾರಿ ಶ್ರೀಶೈಲ ಕರಿಕಟ್ಟಿ ಹೇಳಿದರು. ಗ್ರಾಮೀಣ ಭಾಗದ 69 ಶಾಲೆಗಳಿಗೆ 2 ಲಕ್ಷ ರೂ. ವಿಶೇಷ ಅನುದಾನ ಬಿಡುಗಡೆ ಮಾಡಲಾಗಿದೆ ಎಂದರು.

Advertisement

3 ವರ್ಷದ ವರದಿಗೆ ಒತ್ತಾಯ: ತಾಲೂಕಿನಲ್ಲಿ ಭೂಸೇನಾ ನಿಗಮದಿಂದ ಕೈಗೊಂಡ ಕಾಮಗಾರಿ ಮಾಹಿತಿ ನೀಡುವಂತೆ ಕೆಲ ಸದಸ್ಯರು ಒತ್ತಾಯಿಸಿದರು. ಹಳೇ ಕಾಮಗಾರಿ ಹಾಗೂ ಮುಕ್ತಾಯವಾದ ಕಾಮಗಾರಿ ಕುರಿತು ಮಾಹಿತಿ ತಂದಿಲ್ಲ. ಸದ್ಯ ಕೆಲಸ ನಡೆಯುತ್ತಿರುವ ಕಾಮಗಾರಿ ಕುರಿತು ಮಾಹಿತಿ ನೀಡಬಹುದು ಎಂದು ಅಧಿಕಾರಿ ಲಕ್ಷ್ಮಣ ನಾಯ್ಕ ಹೇಳಿದಾಗ, ಸದಸ್ಯರು ಸುತಾರಾಂ ಒಪ್ಪಲಿಲ್ಲ.

ಭೂಸೇನಾ ನಿಗಮದ ಕಾಮಗಾರಿ ಕುರಿತು ಒಳ್ಳೆಯ ಅಭಿಪ್ರಾಯಗಳಿಲ್ಲ, ಇಲಾಖೆಯಿಂದ ಕಳೆದ ಮೂರು ವರ್ಷಗಳಲ್ಲಿ ಕೈಗೊಂಡ ಕಾಮಗಾರಿಗಳ ಹಾಗೂ ಮುಕ್ತಾಯಗೊಂಡ ಕಾಮಗಾರಿಗಳ ಸಂಪೂರ್ಣ ವರದಿ ನೀಡಬೇಕು ಎಂದು ಸದಸ್ಯ ಫರ್ವೇಜ್‌ ಬ್ಯಾಹಟ್ಟಿ ಒತ್ತಾಯಿಸಿದಾಗ, ಎಲ್ಲ ಸದಸ್ಯರು ಸಹಮತ ವ್ಯಕ್ತಪಡಿಸಿದರು. ತಾಪಂ ಅಧ್ಯಕ್ಷೆ ಚನ್ನಮ್ಮ ಗೋರ್ಲ ಅಧ್ಯಕ್ಷತೆ ವಹಿಸಿದ್ದರು. ತಾಪಂ ಸದಸ್ಯರು, ಇಒ ಎಂ.ಎಂ. ಸವದತ್ತಿ, ವಿವಿಧ ಇಲಾಖೆ ಅಧಿಕಾರಿಗಳು ಇದ್ದರು. ಸಿ.ಎಚ್‌. ಅದರಗುಂಚಿ ನಿರೂಪಿಸಿದರು

Advertisement

Udayavani is now on Telegram. Click here to join our channel and stay updated with the latest news.

Next