ವಿಟ್ಲ: ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದ ವಿಟ್ಲ ಪ.ಪಂ. ವ್ಯಾಪ್ತಿಯ ಬೊಳಂತಿಮೊಗರು- ಮಾಡ್ತೇಲು – ಪಳೇರಿ- ಕಾಮಟ- ಬಸವಳಚ್ಚಿಲ್ ರಸ್ತೆ ಕೆಸರುಗದ್ದೆಯಾಗಿ ವಾಹನಗಳು ಹೂತು ಹೋಗಿ, ಸಂಚಾರ ಸ್ಥಗಿತಗೊಂಡಿದೆ. ಪರಿಣಾಮವಾಗಿ ಗ್ರಾಮಸ್ಥರು ಹಾಗೂ ವಿದ್ಯಾರ್ಥಿಗಳು ತೊಂದರೆ ಅನುಭವಿಸುತ್ತಿದ್ದಾರೆ. ವಿಟ್ಲ ಸಮೀಪದ ಬೊಳಂತಿಮೊಗರುವಿನಿಂದ ಮಾಡ್ತೇಲು- ಪಳೇರಿ- ಕಾಮಟ – ಬಸವಳಚ್ಚಿಲ್ ಮೊದಲಾದ ಕಡೆಗಳಿಗೆ ಈ ರಸ್ತೆ ಸಂಪರ್ಕ ಕಲ್ಪಿಸುತ್ತದೆ. ಆದರೆ ಕಳೆದ ಎರಡು ದಿನಗಳಿಂದ ಸುರಿಯುತ್ತಿರುವ ಮಳೆಯಿಂದಾಗಿ ನೀರು ರಸ್ತೆಯಲ್ಲೇ ಹರಿಯುತ್ತಿದೆ. ರಸ್ತೆ ಬದಿಯಲ್ಲಿ ಸಮರ್ಪಕ ಚರಂಡಿ ವ್ಯವಸ್ಥೆ ಇಲ್ಲ. ಅದು ಇರುವ ರಸ್ತೆಯನ್ನು ಹಾಳುಗೆಡವಲು ಕಾರಣವಾಗಿದೆ.
40ಕ್ಕೂ ಅಧಿಕ ಕುಟುಂಬಗಳು ಈ ರಸ್ತೆಯನ್ನು ಅವಲಂಬಿಸಿವೆ. ಸುಮಾರು 40 ವರ್ಷಗಳ ಹಿಂದೆ ಈ ಮಣ್ಣಿನ ರಸ್ತೆ ನಿರ್ಮಾಣಗೊಂಡಿತ್ತು. ಇದುವರೆಗೂ ಡಾಮರು ಕಾಮಗಾರಿ ನಡೆದಿಲ್ಲ. ಜನರು ಈ ಮಣ್ಣಿನ ರಸ್ತೆಯನ್ನೇ 40 ವರ್ಷಗಳಿಂದ ಅವಲಂಬಿಸಿಕೊಂಡಿದ್ದಾರೆ. ಸ್ವಲ್ಪ ಕಾಂಕ್ರೀಟ್ ರಸ್ತೆಯಾಗಿದ್ದರೂ ಉಳಿದ ಭಾಗದಲ್ಲಿ ಪೂರ್ತಿಯಾಗದೇ ಇರುವುದರಿಂದ ಸರ್ವಋತು ರಸ್ತೆಯಾಗಿಲ್ಲ.
ರವಿವಾರ ಬೆಳಗ್ಗೆ ಮಾರುತಿ ಕಾರೊಂದು ರಸ್ತೆಯಲ್ಲಿ ಹೂತು ಹೋಗಿದೆ. ಮುಂದೆಯೂ ಹಿಂದೆಯೂ ಹೋಗಲಾಗದೇ ಇತರರಿಗೂ ಹೋಗಲಾಗದಂತೆ ತಡೆಯೊಡ್ಡಿತ್ತು. ಇದು ಇಂದು ನಿನ್ನೆಯ ಸಮಸ್ಯೆಯಲ್ಲ. ಇದೇ ರೀತಿಯ ಘಟನೆಗಳು ನಿರಂತರವಾಗಿ ನಡೆಯುತ್ತಿರುವುದರಿಂದ ಬೊಳಂತಿಮೊಗರು, ಮಂಗಳಪದವು, ಕಂಬಳಬೆಟ್ಟು ಕಡೆಗಳ ಸಂಪರ್ಕ ಕಡಿತಗೊಂಡಿದೆ. ಈ ರಸ್ತೆಯಲ್ಲಿ ನಡೆದುಕೊಂಡು ಹೋಗಲೂ ಆಗುತ್ತಿಲ್ಲ. ಕಾಲು ಕೂಡ ಕೆಸರಿನಲ್ಲಿ ಹೂತು ಹೋಗಿ, ಗ್ರಾಮಸ್ಥರು ತೊಂದರೆ ಅನುಭವಿಸುತ್ತಿದ್ದಾರೆ. ರಸ್ತೆಯಿದ್ದೂ ಇಲ್ಲದಂತಾಗಿದೆ. ವಾಹನ ಸಂಚಾರವೂ ಇಲ್ಲದ, ನಡೆದಾಡಲೂ ಆಗದ ಈ ರಸ್ತೆಯನ್ನು ಅಭಿವೃದ್ಧಿಪಡಿಸಬೇಕೆಂದು ಗ್ರಾಮಸ್ಥರು ಪ.ಪಂ.ಗೆ ಮನವಿ ಮಾಡಿದ್ದಾರೆ.
ಶೀಘ್ರ ರಸ್ತೆ ಅಭಿವೃದ್ಧಿ
ಗ್ರಾಮಸ್ಥರು ಮನವಿ ಮಾಡಿರುವ ಪ್ರಕಾರ ಪ.ಪಂ. 8 ಲಕ್ಷ ರೂ.ಅನುದಾನ ಮಂಜೂರು ಮಾಡಿದೆ. ಆದುದರಿಂದ ಶೀಘ್ರದಲ್ಲೇ ರಸ್ತೆ ಅಭಿವೃದ್ಧಿಯಾಗಲಿದೆ. ರವಿವಾರ ಕೆಲವು ಲೋಡು ಜಲ್ಲಿ ಹುಡಿ ಕಳುಹಿಸಿ, ಸಂಚಾರಕ್ಕೆ ಅಡ್ಡಿಯಾಗದಂತೆ ಕ್ರಮ ಕೈಗೊಳ್ಳಲಾಗಿದೆ.
– ಅರುಣ್ ಎಂ.ವಿಟ್ಲ, ಅಧ್ಯಕ್ಷರು, ವಿಟ್ಲ ಪ.ಪಂ.
— ಉದಯಶಂಕರ್ ನೀರ್ಪಾಜೆ