Advertisement

ಹಾಳಾದ ರಸ್ತೆಗೆ ಜಲಜೀವನ್‌ ಪರಿಹಾರ!

01:31 PM Nov 18, 2021 | Team Udayavani |

ಸಿಂಧನೂರು: ಜಲಜೀವನ್‌ ಮಿಷನ್‌ ಯೋಜನೆಯಡಿ ಮನೆ-ಮನೆಗೆ ಗಂಗೆ ತಲುಪಿಸುವ ಯೋಜನೆಯಡಿ ಸಾರ್ವಜನಿಕ ಸ್ವತ್ತಿಗೆ ಹಾನಿಯಾದರೂ ಅದನ್ನು ಪುನರ್‌ ನಿರ್ಮಿಸುವ ಜವಾಬ್ದಾರಿ ವಹಿಸಲಾಗಿದ್ದು, ತಾಲೂಕಿನ ಸಾಲಗುಂದಾ ಗ್ರಾಮಸ್ಥರು ಹಾಳಾದ ಸಿಸಿ ರಸ್ತೆಗೆ ಮೋಕ್ಷ ಕಲ್ಪಿಸುತ್ತಾರೆಂಬ ನಿರೀಕ್ಷೆಯಲ್ಲಿದ್ದಾರೆ.

Advertisement

ಕೇಂದ್ರ ಸರ್ಕಾರದ ಜಲಜೀವನ್‌ ಮಿಷನ್‌ ಯೋಜನೆಯಡಿ 1500ಕ್ಕೂ ಹೆಚ್ಚು ಕುಟುಂಬಗಳಿಗೆ ಶುದ್ಧ ಕುಡಿವ ನೀರು ಕಲ್ಪಿಸುವ ಯೋಜನೆ ಕೈಗೆತ್ತಿಕೊಳ್ಳಲಾಗಿದೆ. ಅಂದಾಜು 2.24 ಕೋಟಿ ರೂ. ವೆಚ್ಚದಲ್ಲಿ ಪೈಪ್‌ಲೈನ್‌ ಯೋಜನೆ ಗ್ರಾಮದಲ್ಲಿ ಕೈಗೆತ್ತಿಕೊಳ್ಳಲಾಗಿದೆ. ಪೈಪ್‌ ಲೈನ್‌ ನಿರ್ಮಾಣ ಹಂತದಲ್ಲೇ ಗ್ರಾಮಸ್ಥರಲ್ಲಿ ನಿರಾಸೆ ಮೂಡಿದೆ.

ಸರ್ಕಾರದ ಯೋಜನೆಯಡಿ ಲಕ್ಷಾಂತರ ರೂ. ವ್ಯಯಿಸಿ ಇಲ್ಲಿ ಬೃಹತ್‌ ಕುಡಿವ ನೀರಿನ ಟ್ಯಾಂಕ್‌ ನಿರ್ಮಿಸಿ ಹಲವು ವರ್ಷ ಗತಿಸಿವೆ. ಹಾಗೆ ಕೆಲವೇ ವರ್ಷಗಳ ಹಿಂದೆ ಶುದ್ಧೀಕರಣ ಘಟಕ 25 ಲಕ್ಷ ರೂ. ಅಂದಾಜು ವೆಚ್ಚದಲ್ಲಿ ನಿರ್ಮಿಸಲಾಗಿದೆ. ಇದಕ್ಕೂ ಕೂಡ ಪೈಪ್‌ಲೈನ್‌-ಮೋಟರ್‌ ಹಾಕಲಾಗಿದೆ. ಈ ಯೋಜನೆಯಿಂದ ಹನಿ ನೀರು ಕೂಡ ಸಾಲಗುಂದಾ ಗ್ರಾಮಸ್ಥರಿಗೆ ತಲುಪಿಲ್ಲ. ಬಿಲ್‌ ಪಾವತಿಯಾದ ನಂತರ ಗುತ್ತಿಗೆದಾರರು ಕೂಡ ಗ್ರಾಮದ ಕಡೆಗೆ ತಲೆ ಹಾಕಿ ನೋಡಿಲ್ಲ. ಭೌತಿಕ ಪ್ರಗತಿ ತೋರಿಸಿ ಬಿಲ್‌ ವಿದ್ಯೆ ಪ್ರದರ್ಶನ ಮಾಡಿದ್ದಾರೆ. ಇದೀಗ ಕೋಟ್ಯಂತರ ರೂ. ವೆಚ್ಚದ ಯೋಜನೆ ಕೈಗೆತ್ತಿಕೊಂಡಾಗಲೂ ಅದೇ ಹಾದಿ ಹಿಡಿಯುತ್ತಾರೆಂಬ ಅನುಮಾನ ಗ್ರಾಮಸ್ಥರನ್ನು ಕಾಡಲಾರಂಭಿಸಿದೆ.

ಸಿಸಿ ರಸ್ತೆ ದಿವಾಳಿ

ಸಾಲಗುಂದಾ ಗ್ರಾಮದಲ್ಲಿ ಲಕ್ಷಾಂತರ ರೂ. ಸರ್ಕಾರಿ ಅನುದಾನ ಬಳಸಿಕೊಂಡು ನಿರ್ಮಿಸಿದ ಸಿಸಿ ರಸ್ತೆ ಅಗೆಯಲಾಗಿದೆ. ಹೀಗೆ ಅಗೆದ ಬಳಿಕ ಹಲವರು ಅಪಘಾತಕ್ಕೆ ಸಿಲುಕಿದ್ದರಿಂದ ಪೈಪ್‌ ಹಾಕುವ ಮುನ್ನವೇ ಸಿಸಿ ರಸ್ತೆಯ ತಗ್ಗು ಮುಚ್ಚಲಾಗಿದೆ. ಸಹಜವಾಗಿಯೇ ಈ ಬೆಳವಣಿಗೆ ಗ್ರಾಮಸ್ಥರಲ್ಲಿ ಆಕ್ರೋಶ ಮೂಡಿಸಿದೆ. ಗ್ರಾಮದ 6ನೇ ವಾರ್ಡಿನಲ್ಲಿ ಅಗೆದಿರುವ ರಸ್ತೆಯಿಂದ ಹಲವು ಸಂಕಷ್ಟ ಎದುರಾಗಿವೆ. ವೃದ್ಧರು ಬಿದ್ದ ಬಳಿಕ ಆಕ್ರೋಶ ವ್ಯಾಪಕವಾಗಿ ಪೈಪ್‌ ಹಾಕುವ ಮುನ್ನ ತೆಗೆದ ಗುಂಡಿ ಮುಚ್ಚಲಾಗಿದೆ. ಆದರೆ, ದಿವಾಳಿಯಾಗಿರುವ ಸಿಸಿ ರಸ್ತೆ ಯಾರು ನಿರ್ಮಿಸುತ್ತಾರೆಂಬ ಪ್ರಶ್ನೆ ಎದುರಾಗಿದೆ.

Advertisement

ಉಪಗುತ್ತಿಗೆಯೇ ಪರಿಹಾರ

ಸಂಕಷ್ಟ ಎದುರಾಗಿರುವ ಬಗ್ಗೆ ಸಂಕಷ್ಟ ಹೇಳಿಕೊಳ್ಳುವ ಗ್ರಾಮಸ್ಥರು ಕೂಡ ಲಿಖೀತವಾಗಿ ಹೇಳಿಕೆ ನೀಡಲು ಹಿಂದೇಟು ಹಾಕಿದ್ದಾರೆ. ಹಬೀದ್‌ ಖಾದ್ರಿ ಎನ್ನುವ ಗುತ್ತಿಗೆದಾರರಿಗೆ ಈ ಕಾಮಗಾರಿ ಹಂಚಿಕೆಯಾಗಿದ್ದರೂ ಗುತ್ತಿಗೆ ಕೆಲಸದ ಅನುಭವ ಇಲ್ಲದ ಸ್ವಗ್ರಾಮದ ಒಂದಿಬ್ಬರು ಉಸ್ತುವಾರಿ ವಹಿಸಿದ್ದಾರೆ ಎಂದು ಸ್ಥಳೀಯರು ದೂರುತ್ತಾರೆ. ಆದರೆ, ಮನಬಂದಂತೆ ಪೈಪ್‌ ಹಾಕಿ ಮುಚ್ಚಿ ಹಾಕಲು ಹೊರಟ ಪರಿಣಾಮ ಜಲಜೀವನ್‌ ಯೋಜನೆ ಬಗ್ಗೆಯೂ ಗ್ರಾಮಸ್ಥರಲ್ಲಿ ನಿರಾಸೆ ಮೂಡಲಾರಂಭಿಸಿದೆ. ಮೂಲ ಗುತ್ತಿಗೆದಾರರೇ ಗ್ರಾಮಕ್ಕೆ ಹೋಗಿ ನೋಡಿದಾಗಲೇ ಇದರ ಕರ್ಮಕಾಂಡ ಬಯಲಾಗಲಿದ್ದು, ಮನೆ-ಮನೆಗೆ ಗಂಗೆ ಯೋಜನೆ ಬಗ್ಗೆ ಗ್ರಾಮಸ್ಥರನ್ನೇ ವಿಚಾರಿಸಬೇಕಿದೆ. ಅರ್ಧ ಕೋಟಿ ರೂ. ಸುರಿದ ಮೇಲೂ ಹನಿ ನೀರು ಕಾಣದ ಗ್ರಾಮಸ್ಥರಲ್ಲಿ ಆಕ್ರೋಶ ಮಡುಗಟ್ಟಿದ್ದು, ಇದಕ್ಕೆ ಅಧಿಕಾರಿಗಳೇ ಉತ್ತರಿಸಬೇಕಿದೆ.

ನಾವು ಕೂಡ ಸಾಲಗುಂದಾ ಗ್ರಾಮಕ್ಕೆ ಹೋಗಿ ಬಂದಿದ್ದು, ಒಡೆದು ಹೋಗಿರುವ ಸಿಸಿ ರಸ್ತೆ ನಿರ್ಮಿಸಲು ಗುತ್ತಿಗೆದಾರರಿಗೆ ಹೇಳಲಾಗಿದೆ. ಹೀಗಾಗಿ, ಗ್ರಾಮಸ್ಥರು ಆತಂಕ ಪಡಬೇಕಿಲ್ಲ. ಸಿಸಿ ರಸ್ತೆ ಮರು ನಿರ್ಮಿಸಿ ಕೊಡಲಾಗುವುದು. -ಅಶೋಕರೆಡ್ಡಿ, ಎಇಇ, ಗ್ರಾಮೀಣ ನೀರು ಪೂರೈಕೆ ವಿಭಾಗ, ಸಿಂಧನೂರು

-ಯಮನಪ್ಪ ಪವಾರ

Advertisement

Udayavani is now on Telegram. Click here to join our channel and stay updated with the latest news.

Next