ಯಡ್ರಾಮಿ: ತಾಲೂಕು ಕೇಂದ್ರದಿಂದ 12 ಕಿ.ಮೀ. ದೂರದಲ್ಲಿರುವ ಮಳ್ಳಿ-ನಾಗರಳ್ಳಿ ಗ್ರಾಮಗಳಿಗೆ ಸಂಪರ್ಕಿಸುವ ಅಂದಾಜು 4 ಕಿ.ಮೀ ರಸ್ತೆ ತೀರಾ ಹದಗೆಟ್ಟು, ಸಂಚಾರಕ್ಕೆ ಸಂಚಕಾರ ಉಂಟು ಮಾಡುತ್ತಿದೆ. ಕಳೆದ ಒಂದು ವರ್ಷದಲ್ಲಿ ಕೇವಲ 8 ಕಿ.ಮೀ ರಸ್ತೆ ಮಾತ್ರ ಡಾಂಬರೀಕರಣ ಕಂಡಂತಾಗಿದೆ.
ಪಟ್ಟಣದ ಡಾ| ಅಂಬೇಡ್ಕರ್ ವೃತ್ತದಿಂದ ಕಾಚಾಪೂರ ಕ್ರಾಸ್‌ನ ವರೆಗೆ ಡಾಂಬರ ರಸ್ತೆ ಆಗಿದ್ದು, ಕಾಚಾಪೂರ ಕ್ರಾಸ್‌ದಿಂದ ಮಳ್ಳಿ ಗ್ರಾಮಕ್ಕೆ ಬರುವ ದಾರಿ ಮಧ್ಯೆ ಇನ್ನೂ 4ಕಿ.ಮೀ ರಸ್ತೆ ದುರಸ್ತಿ ಆಗದೆ ಅಪಘಾತಗಳಿಗೆ ಅನುವು ಮಾಡಿಕೊಡುವಂತಾಗಿದೆ. ಈ 4 ಕಿ.ಮೀ. ರಸ್ತೆ ದೊಡ್ಡದಾದ ತಗ್ಗು ದಿನ್ನೆಗಳಿಂದ ಕೂಡಿದೆ. ಇರುವ ಒಟ್ಟು 12 ಕಿ.ಮೀ ರಸ್ತೆಯಲ್ಲಿ ಕೇವಲ 8 ಕಿ.ಮೀ ರಸ್ತೆ ಮಾತ್ರ ಡಾಂಬರೀಕರಣ ಮಾಡಲು ಸುಮಾರು ವರ್ಷಗಳ ಸಮಯ ಪಡೆದ ತಾಲೂಕಿನ ಶಾಸಕರ, ಅಧಿಕಾರಿಗಳ ಕಾರ್ಯಕ್ಕೆ ಇಲ್ಲಿನ ಜನತೆ ಹಿಡಿಶಾಪ ಹಾಕುತ್ತಿದ್ದಾರೆ.
ತಾಲೂಕು ಕೇಂದ್ರದಿಂದ ಬೇರೆಡೆ ಹೋಗುವ ಪ್ರಯಾಣಿಕರಿಗೆ ಅತ್ಯಂತ ಕಡಿಮೆ ದೂರದಲ್ಲಿ ರಾಜ್ಯ ಹೆದ್ದಾರಿ (ಶಹಾಪುರ-ಸಿಂದಗಿ) ಸಂಪರ್ಕಿಸುವ ರಸ್ತೆ ಇದಾಗಿದೆ. ಬೇಸಿಗೆ ಕಾಲದಲ್ಲಿಯೇ ಪ್ರಾಣಕ್ಕೆ ಕುತ್ತು ತರುವ ಈ ರಸ್ತೆ, ಮಳೆಗಾಲದಲ್ಲಿ ದೊಡ್ಡ ಅನಾಹುತಗಳನ್ನೆ ಮಾಡಬಹುದೆಂಬ ಆತಂಕ ನಿತ್ಯ ಪ್ರಯಾಣಿಕರದ್ದಾಗಿದೆ. ಕೂಡಲೇ ಕ್ಷೇತ್ರದ ಶಾಸಕರು, ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ಈ ಸಮಸ್ಯೆಗೆ ಪರಿಹಾರ ಹುಡುಕುವ ನಿಟ್ಟಿನಲ್ಲಿ ಕ್ರಮಕ್ಕೆ ಮುಂದಾಗಬೇಕಿದೆ.
ಹದಗೆಟ್ಟ ರಸ್ತೆ ದುರಸ್ತಿ ಯಾದರೆ ಮಳ್ಳಿ-ನಾಗರಳ್ಳಿ, ಬಿರಾಳ (ಹಿಸ್ಸಾ), ಮಾಗಣಗೇರಿ, ಅಲ್ಲಾಪೂರ, ಕೊಂಡಗೂಳಿ, ಕಣಮೇಶ್ವರ, ಐನಾಪೂರ ಗ್ರಾಮಗಳಿಂದ ನಿತ್ಯ ಓಡಾಡುವ ಪ್ರಯಾಣಿಕರಿಗೆ, ವಾಹನ ಸಂಚಾರರಿಗೆ ಕಡಿಮೆ ಸಮಯದಲ್ಲಿ ತಾಲೂಕು ಕೇಂದ್ರಕ್ಕೆ ತೆರಳಲು ಅನುಕೂಲವಾಗುತ್ತದೆ ಎಂಬುದು ಪ್ರಯಾಣಿಕರ ಅಭಿಪ್ರಾಯವಾಗಿದೆ.
ತಾಲೂಕಿನಾದ್ಯಂತ ವಿವಿಧ ಕಾಮಗಾರಿಗಳಿಗಾಗಿ ಅಂದಾಜು 300 ಕೋಟಿ ಅನುದಾನದ ಮನವಿ ಮಾಡಿದ್ದೇವೆ. ಇಲಾಖೆಗೆ ಅನುದಾನ ಬಂದ ಕೂಡಲೇ ಹದಗೆಟ್ಟ ಯಡ್ರಾಮಿ ಮಳ್ಳಿ ರಸ್ತೆ ದುರಸ್ತಿ ಮಾಡಲಾಗುವುದು.
–ಮುರಳೀಧರ ಹಂಚಾಟೆ, ಎಇಇ, ಪಿಡಬ್ಲ್ಯೂಡಿ ಜೇವರ್ಗಿ.
ಯಡ್ರಾಮಿಯಿಂದ ಮಳ್ಳಿ-ನಾಗರಳ್ಳಿ ರಸ್ತೆ ಪೂರ್ತಿಯಾಗಿ ಡಾಂಬರ್ ಕಂಡೆ ಇಲ್ಲ. ಮೂರ್‍ನಾಲ್ಕು ಕಿ.ಮೀ ರಸ್ತೆ ರಿಪೇರಿ ಮಾಡಿದರೆ, ತಾಲೂಕಿಗೆ ಪ್ರಯಾಣಿಸಲು ಕೇವಲ 15 ನಿಮಿಷಗಳ ದಾರಿ. ಕೂಡಲೇ ಶಾಸಕರು, ಸಂಬಂಧಪಟ್ಟ ಅಧಿಕಾರಿಗಳು ರಸ್ತೆ ದುರಸ್ತಿ ಮಾಡಲು ಕ್ರಮ ವಹಿಸಬೇಕು.
–ಮಲ್ಲನಗೌಡ ಬಿರಾದಾರ, ಯುವ ಮುಖಂಡ ನಾಗರಳ್ಳಿ.
–ಸಂತೋಷ ಬಿ.ನವಲಗುಂದ