Advertisement

ತಲಪಾಡಿ –ಕಾಸರಗೋಡು ಹೆದ್ದಾರಿಯಲ್ಲಿ ಪ್ರಯಾಣ ಸಂಕಟ

01:10 AM Aug 24, 2018 | Team Udayavani |

ಕುಂಬಳೆ: ತಲಪಾಡಿ – ಕಾಸರಗೋಡು ಹೆದ್ದಾರಿ ಕೆಟ್ಟು ಹಳ್ಳಕೊಳ್ಳವಾಗಿದೆ. ವಾಹನಗಳು ತೆಪ್ಪದಂತೆ ಸಾಗುವ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ. ಕುಂಬಳೆ ದೇವಾಲಯದ ಮುಂದೆ, ಆರಿಕ್ಕಾಡಿ, ಮೊಗ್ರಾಲ್‌, ಕೊಪ್ಪಳ, ಮೊಗ್ರಾಲ್‌ ಪುತ್ತೂರು, ಚೌಕಿ, ಅಡ್ಕತ್ತಬೈಲು, ಕರಂದಕ್ಕಾಡು ಮೊದಲಾದೆಡೆ ರಸ್ತೆಯಲ್ಲಿ ಹೊಂಡಗಳೇ ತುಂಬಿದ್ದು, ವಾಹನಗಳ ಸಾಲು ಗಂಟೆಗಟ್ಟಲೆ ಕಂಡುಬರುತ್ತಿದೆ. ಪರಿಣಾಮ ಕೆಲವು ಬಾರಿ ವಾದ ವಿವಾದ ನಡೆಯುವುದೂ ಇದೆ. ಹೊಂಡದಲ್ಲಿ ಸಿಲುಕುವ ಸಣ್ಣ ವಾಹನಗಳನ್ನು ಮೇಲೆತ್ತಲು ಸಾರ್ವಜನಿಕರ ಸಹಾಯ ಅನಿವಾರ್ಯವಾಗುತ್ತದೆ.

Advertisement

ದುರಸ್ತಿ ನಾಟಕ
ದುರಸ್ತಿ ನೆಪದಲ್ಲಿ ಕೆಲವೆಡೆ ರಸ್ತೆ ಪಕ್ಕದಲ್ಲಿ ಜಲ್ಲಿ ರಾಶಿ ಹಾಕಲಾಗಿದೆ. ಕೆಲವೆಡೆ ಹೊಂಡವಾದ ರಸ್ತೆಯನ್ನು ಜಿ.ಸಿ.ಬಿ. ಮೂಲಕ ಅಗೆಯಲಾಗುತ್ತಿದೆ. ಆದರೆ ಒಂದು ಕಡೆ ಸರಿಪಡಿಸಿದಾಗ ಇನ್ನೊಂದೆಡೆ  ಹೊಸ ಹೊಂಡಗಳು ಸೃಷ್ಟಿಯಾಗುತ್ತವೆ.


ಪ್ರಯಾಣಿಕರಿಗೆ ಸಂಕಷ್ಟ

ಈ ರಸ್ತೆಯಲ್ಲಿ ಸಂಚರಿಸುವುದು ಹರಸಾಹಸವಾಗಿದೆ. ಬಸ್ಸಿನ ಹಿಂದಿನ ಸೀಟಿನಲ್ಲಿ ಕೂತವರು ಪ್ರಯಾಣದ ಮಧ್ಯೆ ತುಂಬಾ ಸಮಸ್ಯೆ ಅನುಭವಿಸುತ್ತಾರೆ. ವಾಹನ ಹೊಂಡಕ್ಕೆ ಬಿದ್ದು ಏಳುವಾಗ ಅವರಿಗೆ ಪೆಟ್ಟು ಬೀಳುವುದೂ ಇದೆ. ಸಮಯ ಪಾಲನೆಯೂ ಬಸ್ಸಿನವರಿಗೆ ಸಾಧ್ಯವಾಗದ ಸ್ಥಿತಿಯಿದೆ. ಹೆಚ್ಚಿನವರು ರಸ್ತೆ ಮಾರ್ಗವನ್ನು ತೊರೆದು ರೈಲು ಪ್ರಯಾಣವನ್ನು ಅವಲಂಬಿಸುತ್ತಿದ್ದಾರೆ. ಆದರೆ ಇದು ಸೀಮಿತ ಸಮಯಕ್ಕೆ ಮಾತ್ರ ಸಾಧ್ಯವಾಗುತ್ತದಷ್ಟೆ.
 
ಚತುಷ್ಪಥ ಇನ್ನಷ್ಟು ವಿಳಂಬ
ಹಿಂದಿನ ಮತ್ತು ಇಂದಿನ  ಸರಕಾರಗಳು ಚತುಷ್ಪಥ ರಸ್ತೆಗೆ ಸಕಾಲದಲ್ಲಿ ಸ್ಥಳ ಸ್ವಾಧೀನ ಪಡಿಸದೆ ಟೆಂಡರ್‌ ರದ್ದಾಗಿ ಈ ತನಕ ರಸ್ತೆ ಅಗಲಗೊಳಿಸುವ ಕಾಮಗಾರಿ ಆರಂಭವಾಗಿಲ್ಲ. ಖಾಸಗಿ ವ್ಯಕ್ತಿಗಳ ಸ್ಥಳ ಸ್ವಾಧೀನ ಪಡಿಸಲು ಕಂದಾಯ ಅಧಿಕಾರಿಗಳು ನಾಟಿದ ಕಲ್ಲುಗಳು ಹೆಚ್ಚಿನ ಕಡೆಗಳಲ್ಲಿ ಮಾಯವಾಗಿವೆ. ಆದರೂ ಡಿಸೆಂಬರ್‌ನಲ್ಲಿ ಕಾಮಗಾರಿ ನಡೆಯಲಿದೆ ಎಂದು ಸರಕಾರ ಹೇಳಿದೆ.

ಆದರೆ ಈ ರಸ್ತೆ ಹೊಂಡಗಳಿಗೆ ಮೋಕ್ಷವಾಗದಿದ್ದಲ್ಲಿ ಇನ್ನಷ್ಟು ರಸ್ತೆ ಅಪಘಾತವಲ್ಲದೆ ಮುಂದಿನ ಕೆಲದಿನಗಳಲ್ಲಿ ಹೆಚ್ಚಿನ ವಾಹನಗಳ ಸಂಚಾರವೇ ಸ್ಥಗಿತಗೊಳ್ಳುವ ಭಯ ಸಾರ್ವಜನಿಕರನ್ನು ಕಾಡುತ್ತಿದೆ. ಆದುದರಿಂದ ಮಳೆಯ ನೆಪದಲ್ಲಿ ನಿರ್ಲಕ್ಷ್ಯ ತೋರುತ್ತಿರುವ ಜವಾಬ್ದಾರಿಯುತ ಜನಪ್ರತಿನಿಧಿಗಳು, ಲೋಕೋಪಯೋಗಿ ಇಲಾಖೆಯ ಅಧಿಕಾರಿಗಳು ಇನ್ನಾದರೂ ಎಚ್ಚರಗೊಂಡು ರಸ್ತೆ ಸಮಸ್ಯೆಗೆ ಪರಿಹಾರ ಮಾರ್ಗ ಕೈಗೊಳ್ಳಲು ಮುಂದಾಗಬೇಕಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next