ಶಹಾಬಾದ: ರಸ್ತೆ ಡಾಂಬರೀಕರಣ ಮಾಡಲು ಗುತ್ತಿಗೆ ಪಡೆದ ಗುತ್ತಿಗೆದಾರ ಕಾಮಗಾರಿ ಅರ್ಧಕ್ಕೆ ನಿಲ್ಲಿಸಿ ಹೋಗಿರುವ ಪರಿಣಾಮ ರಸ್ತೆಯಲ್ಲಿ ಸಂಚರಿಸುವ ಪ್ರಯಾಣಿಕರು, ವಾಹನ ಸವಾರರು ತೀವ್ರ ತೊಂದರೆ ಅನುಭವಿಸುವ ಪರಿಸ್ಥಿತಿ ಉಂಟಾಗಿದೆ.
ನಗರದ ವಾಡಿ ವೃತ್ತದ ಸಮೀಪದಿಂದ ರೇಲ್ವೆ ಸೇತುವೆ ಬಳಿಯ ಸುಮಾರು 400 ಮೀಟರ್ ರಸ್ತೆ ಕಾಮಗಾರಿ ಅರ್ಧಕ್ಕೆ ನಿಲ್ಲಿಸಿ ತಿಂಗಳಾಗುತ್ತ ಬಂದಿದೆ. ಇದರಿಂದ ಸಾರ್ವಜನಿಕರು ರಸ್ತೆಯ ಪಕ್ಕದ ಕಚ್ಚಾ ಮಣ್ಣಿನ ರಸ್ತೆಯಲ್ಲಿಯೇ ತೆರಳುವಂತಾಗಿದೆ. ಲೋಕೋಪಯೋಗಿ ಇಲಾಖೆ ವತಿಯಿಂದ ಕಾಮಗಾರಿ ನಡೆಯುತ್ತಿದ್ದರೂ ಸಂಬಂಧಪಟ್ಟ ಅಧಿಕಾರಿಗಳು ಇತ್ತ ಗಮನಹರಿಸುತ್ತಿಲ್ಲ. ಮುರುಮ್, ಕಂಕರ್ ಹಾಕಿ ಅರ್ಧ ರಸ್ತೆ ಬೆಡ್ ನಿರ್ಮಾಣ ಮಾಡಿ ಬಿಟ್ಟು ಹೋಗಿದ್ದರಿಂದ ಸಮಸ್ಯೆಯಾಗಿದೆ.
ಸಂಚಾರದ ಸಮಯದಲ್ಲಿ ಭಾರಿ ವಾಹನಗಳಿಂದ ಧೂಳು ಆವರಿಸುತ್ತಿದೆ. ಇದರಿಂದ ರಸ್ತೆ ಕಾಣದೇ ಸಾರ್ವಜನಿಕರು ತೊಂದರೆಗೆ ಈಡಾಗುತ್ತಿದ್ದಾರೆ. ಅಲ್ಲದೇ ವಾಹನಗಳ ಚಕ್ರದಿಂದ ಕಂಕರ್ ಸಿಡಿದು ಸಾರ್ವಜನಿಕರು ತೊಂದರೆ ಪಡುವಂತಾಗಿದೆ.
ಇಕ್ಕಟ್ಟಾದ ರಸ್ತೆ ಮೂಲಕ ದಿನಾಲೂ ಸಾಗುವುದೇ ದೊಡ್ಡ ಸವಾಲಾಗಿ ಪರಿಣಮಿಸಿದೆ. ಅಲ್ಲದೇ ಇನ್ನೊಂದು ಕಡೆ ರಸ್ತೆ ಬದಿಯಲ್ಲಿ ಹೆಜ್ಜೆಯಷ್ಟೇ ದಾರಿ ಇದೆ. ಅದರಲ್ಲಿಯೇ ಎರಡು ಕಡೆಯಿಂದ ಬೈಕ್‌ಗಳು ಸಾಗುತ್ತಿವೆ. ಇದರಿಂದ ಅನೇಕ ಚಿಕ್ಕಪುಟ್ಟ ಅಪಘಾತಗಳು ಸಂಭವಿಸಿವೆ. ಕೇವಲ 400ಮೀಟರ್ ರಸ್ತೆ ಕಾಮಗಾರಿಯೂ ಕಳಪೆ ಮಟ್ಟದಿಂದ ಕೂಡಿದೆ. ಗುತ್ತಿಗೆದಾರ ಬೇಸಿಗೆಯಲ್ಲಿಯೇ ಕಾಮಗಾರಿ ಮಾಡದಿದ್ದರೇ ಕೆಲವೆ ದಿನಗಳಲ್ಲಿ ಮಳೆಗಾಲ ಆರಂಭವಾದಾಗ ಅದ್ಹೇಗೆ ಕಾಮ ಗಾರಿ ಮಾಡುತ್ತಾರೆ. ಕಾಮಗಾರಿ ನಡೆಯುವ ಸ್ಥಳದಲ್ಲಿ ಯಾವುದೇ ಸುರಕ್ಷತಾ ಪರಿಕರ, ಸೂಚನಾ ಫಲಕಗಳು ಇಲ್ಲವೇ ಇಲ್ಲ. ಅಲ್ಲದೇ ಕಾಮಗಾರಿ ಯಾವ ಯೋಜನೆಯಡಿ ನಡೆಯುತ್ತಿದೆ. ಎಷ್ಟು ಅನುದಾನ?, ರಸ್ತೆಯ ಉದ್ದವೆಷ್ಟು ಎಂಬುದರ ನಾಮಫಲಕವೇ ಇಲ್ಲ.
ಈ ಹಿಂದೆ ಇಲ್ಲಿನ ರಸ್ತೆಯಲ್ಲಿ ಸಾಕಷ್ಟು ತಗ್ಗುಗಳು ಉಂಟಾಗಿ ಸಂಚಾರಕ್ಕೆ ತೊಂದರೆಯಾಗುತ್ತಿತ್ತು. ಈಗ ಹೊಸ ರಸ್ತೆ ನಿರ್ಮಾಣ ಕಾಮಗಾರಿ ನಡೆಯುತ್ತಿದೆ. ಅದನ್ನು ಕೂಡ ಅರ್ಧಕ್ಕೆ ನಿಲ್ಲಿಸಿರುವುದರಿಂದ ಸಂಚಾರಕ್ಕೆ ತೊಂದರೆಯಾಗುತ್ತಿದೆ. ಇಲ್ಲಿನ ರಸ್ತೆ ಕಾಮಗಾರಿ ನೋಡಿದಾಗ ಗುತ್ತಿಗೆದಾರನಿಗೆ ರಸ್ತೆ ಮಾಡಿದ ಅನುಭವ ಇಲ್ಲ ಎಂದು ಸಾಬೀತಾಗುತ್ತಿದೆ. ಮೊದಲಿದ್ದ ರಸ್ತೆಯ ಮೂಲಕ ಧೂಳಿಲ್ಲದೇ ಹರಸಾಹಸ ಪಟ್ಟು ಹೋಗುತ್ತಿದ್ದೆವು. ಈಗ ಅದಕ್ಕಿಂತಲೂ ಸಾಕಷ್ಟು ತೊಂದರೆ ಅನುಭವಿಸುತ್ತಿದ್ದೇವೆ. ಕೂಡಲೇ ಕಾಮಗಾರಿ ಮುಗಿಸಿ ಅನುಕೂಲ ಮಾಡಿಕೊಡಿ.
–ಕಿರಣ ಕೋರೆ,ಕಾಂಗ್ರೆಸ್ ಮುಖಂಡ
ಈಗಾಗಲೇ ರಸ್ತೆ ಕಾಮಗಾರಿಯನ್ನು ಎಸ್‌ಡಿಪಿ ಯೋಜನೆಯಡಿ ತೆಗೆದುಕೊಳ್ಳಲಾಗಿದೆ. ರೋಲರ್ ಮಾಡಿ ಗಟ್ಟಿಗೊಳಿಸಲಾಗಿದೆ. ಕಾಮಗಾರಿಯನ್ನು ಆದಷ್ಟು ಬೇಗನೆ ಮುಗಿಸಲು ತಾಕೀತು ಮಾಡಲಾಗಿದೆ. ವಾರದ ಒಳಗಾಗಿ ಕಾಮಗಾರಿ ಪ್ರಾರಂಭಿಸಿ, 15 ದಿನಗಳಲ್ಲಿ ಪೂರ್ಣಗೊಳಿಸಲಾಗುವುದು.
–ಜಗನ್ನಾಥ, ಎಇ, ಲೋಕೋಪಯೋಗಿ ಇಲಾಖೆ