Advertisement

ಸಾಜ –ಹಸಂತಡ್ಕ ರಸ್ತೆ ದುರವಸ್ಥೆ!

03:05 AM Jun 27, 2018 | Karthik A |

ಬುಳೇರಿಕಟ್ಟೆ: ಬುಳೇರಿಕಟ್ಟೆಯಿಂದ ಸಾಜ ಮಾರ್ಗವಾಗಿ ತೋರಣಕಟ್ಟೆ ಮೂಲಕ ಕಾಸರಗೋಡು ತಲುಪುವ ರಸ್ತೆ ತೀರಾ ಹದಗೆಟ್ಟಿದ್ದು, ಪ್ರಯಾಣವೇ ಕಷ್ಟವಾಗಿದೆ. ಸಾಜ ಕ್ರಾಸ್‌ ರಸ್ತೆ ಆರಂಭದಲ್ಲಿ 1 ಕಿ.ಮೀ. ಮತ್ತು ಹಸಂತಡ್ಕ ಸೇತುವೆ ಮುಂದೆ ಸಂಪೂರ್ಣ ಹದಗಟ್ಟಿದ್ದು, ಸುಮಾರು 20 ವರ್ಷಗಳಿಂದ ದುರಸ್ತಿ ಕಾಣದೆ ಪ್ರಯಾಣಿಕರು ಪರದಾಡುವಂತಾಗಿದೆ. ಹಿಂದಿನ ಅವಧಿಯ ಶಾಸಕರಾಗಿದ್ದ ಶಕುಂತಳಾ ಶೆಟ್ಟಿ 2 ಕೋಟಿ ರೂ. ವೆಚ್ಚದಲ್ಲಿ ಒಂದು ಭಾಗಕ್ಕೆ ಡಾಮರೀಕರಣ ಮಾಡಿಸಿದ್ದರು. ಆದರೆ ಇನ್ನುಳಿದ ರಸ್ತೆಯ ಭಾಗ ಸಂಪೂರ್ಣ ಹದಗೆಟ್ಟಿದೆ. ಈ ಬಗ್ಗೆ ಜನಪ್ರತಿನಿಧಿಗಳು ಆಸಕ್ತರಾಗಿಲ್ಲ. ಜಿ.ಪಂ., ತಾ.ಪಂ., ಗ್ರಾ.ಪಂ., ಸಂಸದರ ಅನುದಾನದಿಂದ ಕಾಮಗಾರಿ ನಡೆಸುವ ಸಾಧ್ಯತೆಗಳು ಇವೆ. ಆದರೆ ಇದಕ್ಕೆ ಇಚ್ಛಾಶಕ್ತಿ ತೋರಿಸಬೇಕು ಅಷ್ಟೇ.

Advertisement

ಚುನಾವಣೆ ಬಂದಾಗ ಮಾತ್ರ ಬಂದು ಆಶ್ವಾಸನೆ ನೀಡಿ ತೆರಳುವ, ಜನಪ್ರತಿನಿಧಿಗಳು ಮತ್ತೂಮ್ಮೆ ಬರುವುದು ಚುನಾವಣೆಗೇ. ಮತ ಕೇಳುವುದು ಮಾತ್ರ ಜನಪ್ರತಿನಿಧಿಗಳ ಕೆಲಸ ಎಂದು ಇವರು ತಿಳಿದುಕೊಂಡಿರುವಂತಿದೆ. ಆದಷ್ಟು ಶೀಘ್ರ ಕೆಟ್ಟು ಹೋಗಿರುವ ರಸ್ತೆಯನ್ನು ಸರಿಪಡಿಸಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ. ಅಂತಾರಾಜ್ಯ ಸಂಪರ್ಕ ಕಲ್ಪಿಸುವ ಈ ರಸ್ತೆಯನ್ನು ಅಭಿವೃದ್ಧಿಪಡಿಸಿದರೆ, ಈ ಭಾಗದ ಪ್ರದೇಶಗಳು ಅಭಿವೃದ್ಧಿಗೊಳ್ಳಬಹುದು. ಇದರಿಂದ ಈ ಭಾಗದ ಜನರ ಜೀವನ ಮಟ್ಟ ಸುಧಾರಿಸಬಹುದು. ಇದಕ್ಕೆಲ್ಲ ಮೂಲ ಸೌಕರ್ಯವಾದ ರಸ್ತೆಯನ್ನು ಅಭಿವೃದ್ಧಿಪಡಿಸುವುದು ಇಂದಿನ ತುರ್ತು.

ರಸ್ತೆ ದುಸ್ಥಿತಿಯಿಂದ ಬಡವರ್ಗದ ಮಕ್ಕಳ ಶಿಕ್ಷಣ ಮೊಟುಕುಗೊಳ್ಳುವ ಸ್ಥಿತಿ ಎದುರಾಗಿದೆ. ಮಾತ್ರವಲ್ಲ, ತುರ್ತು ಸಂದರ್ಭ ಚಿಕಿತ್ಸೆಗೆ ತೆರಳಲು ಅಡ್ಡಿಯಾಗಿದೆ. ಅನಿವಾರ್ಯ ಸಂದರ್ಭ ರೋಗಿಗಳನ್ನು ಆಸ್ಪತ್ರೆಗೆ ಕರೆದೊಯ್ಯಲು ಅಸಾಧ್ಯವಾದ ಪರಿಸ್ಥಿತಿ ಎದುರಾಗಿದೆ. ಜನಪ್ರತಿನಿಧಿಗಳು, ಸಂಬಂಧಪಟ್ಟ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ, ಸಮಸ್ಯೆಯನ್ನು ಅರಿತುಕೊಳ್ಳಬೇಕು. ಬಳಿಕ ತತ್‌ ಕ್ಷಣ ರಸ್ತೆ ದುರಸ್ತಿಗೆ ಕ್ರಮ ಕೈಗೊಳ್ಳಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.

ಕಾಲುದಾರಿಯೇ ಗತಿ
ಪ್ರಾಥಮಿಕ ವಿದ್ಯಾಭ್ಯಾಸಕ್ಕೆ ಸಾರ್ಯದಲ್ಲೇ ವ್ಯವಸ್ಥೆ ಇದೆ. ಆದರೆ ಪ್ರೌಢ ಶಿಕ್ಷಣ ಪಡೆಯಬೇಕಾದರೆ ಪಟ್ಟಣದ ಕಡೆ ಮುಖ ಮಾಡಬೇಕು. ಇದಕ್ಕೆ 5 ಕಿಲೋ ಮೀಟರ್‌ ದೂರ ನಡೆಯಬೇಕು. ವಾಹನಗಳು ಈ ರಸ್ತೆಯಿಂದ ಬರಲು ಹಿಂಜರಿಯುವ ಕಾರಣ, ನಡೆದು ಹೋಗಬೇಕಾದ ಅನಿವಾರ್ಯತೆ ಎದುರಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next