ಕೋಲಾರ: ಕ್ಷೇತ್ರದ ರಸ್ತೆ ಸಮಸ್ಯೆಯನ್ನು ಬಗೆಹರಿಸದ ಪಿಡಬ್ಲ್ಯೂಡಿ ಅಧಿಕಾರಿಗಳ ವಿಳಂಬ ಧೋರಣೆಯ ಬಗ್ಗೆ ಕೆಜಿಎಫ್ ಶಾಸಕಿ ರೂಪಕಲಾ ಶಶಿಧರ್ ತರಾಟೆಗೆ ತೆಗೆದುಕೊಂಡರು.
ಈ ವೇಳೆ ಇಲಾಖೆ ಅಧಿಕಾರಿಗಳು ಅಗತ್ಯ ಮಾಹಿತಿಯನ್ನು ದಾಖಲೆ ಸಮೇತ ಒದಗಿಸುವಲ್ಲಿ ವಿಫಲರಾದರು. ಇದಕ್ಕೆ ಕಿಡಿಕಾರಿದ ಶಾಸಕಿ, ಕಳೆದ ಡಿ.ಸಿ.ಸಭೆಯಲ್ಲಿಯೂ ಇದೇ ರೀತಿ ದಾಖಲೆ ನೀಡದೆ ತಡಬಡಿಸಿದ್ದೀರಿ, ಈಗಲೂ ಅದೇ ಮಾಡುತ್ತಿದ್ದೀರಿ, ಕೇವಲ 5-10 ಮಂದಿ ಹಿತಾಸಕ್ತಿಗಾಗಿ ಸ್ಥಳೀಯರಿಗೆ ತೊಂದರೆ ನೀಡುತ್ತಿದ್ದೀರಾ. ಈಗಾಗಲೇ ಇಬ್ಬರು ಜಿಲ್ಲಾಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿದ್ದರೂ ಸಮಸ್ಯೆ ಬಗೆಹರಿದಿಲ್ಲ ಎಂದರೆ ನಿಮ್ಮ ಬೇಜವಾಬ್ದಾರಿತನ ಎಷ್ಟರ ಮಟ್ಟಿಗೆ ಇದೆ ಎನ್ನುವುದು ಸ್ಪಷ್ಟವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಪ್ರತಿದಿನವೂ ಜನತೆ ತಮ್ಮ ಬಳಿ ರಸ್ತೆ ವಿಚಾರವಾಗಿ ನೋವಿನಿಂದ ಹೇಳಿಕೊಳ್ಳುತ್ತಿದ್ದಾರೆ. ತಾಂತ್ರಿಕ ಸಮಸ್ಯೆ ಅವರಿಗೆ ಅರ್ಥವಾಗುವುದಿಲ್ಲ. ನಿಮ್ಮಿಂದಾಗಿ ಅವರ ಬಳಿ ನಾವು ವಿಶ್ವಾಸ ಕಳೆದುಕೊಳ್ಳಬೇಕಾಗಿದೆ. ಬಾಕಿ ಇರುವ ಒತ್ತುವರಿ ತೆರವು ತಡೆ ಮಾಡುವುದಕ್ಕೆ ನ್ಯಾಯಾಲಯ ಹೇಳಿಲ್ಲ. ಸ್ಕೂಲ್ ಆಫ್ ಮೈನ್ಸ್‌ನಿಂದ ಅಶೋಕ ನಗರದ ಕೊನೆಯವರೆಗಿನ 2 ಕಿ.ಮೀ. ರಸ್ತೆಯನ್ನು ರಾಜ್ಯ ಹೆದ್ದಾರಿ ಎಂದು ದಾಖಲೆಗಳ ಮೂಲಕ ತಿಳಿಸಲಾಗಿದೆ. ತೆರವು ಮಾಡಬಾರದು ಎನ್ನುವ ವಿಚಾರವನ್ನು ನ್ಯಾಯಾಲಯ ಹೇಳಿಲ್ಲ ಎಂದು ಅಧಿಕಾರಿಗಳಿಗೆ ತಿಳಿವಳಿಕೆ ನೀಡಿದರು.
ಬೆರಳೆಣಿಕೆಯಷ್ಟು ಮಂದಿ ನಕಲಿ ದಾಖಲೆಗಳನ್ನು ಸೃಷ್ಟಿ ಮಾಡಿಕೊಂಡಿರುವುದರಿಂದಲೇ ಕೋರ್ಟ್‌ಗೆ ಪದೇಪದೆ ಹೋಗುತ್ತಿದ್ದಾರೆ. ಅಗತ್ಯವಿರುವ ದಾಖಲೆಗಳನ್ನು ಕೂಡಲೇ ಸಲ್ಲಿಸಬೇಕು. ಆಗಿಂದಾಗ್ಗೆ ಸರ್ಕಾರಿ ವಕೀಲರನ್ನು ಸಂಪರ್ಕ ಮಾಡಿಕೊಂಡಿದ್ದರೆ ಇಷ್ಟು ದೊಡ್ಡ ಪ್ರಮಾಣದ ಸಮಸ್ಯೆ ಉಂಟಾಗುತ್ತಿರಲಿಲ್ಲ. ಇನ್ನಾದರೂ ತುರ್ತಾಗಿ ಕೆಲಸ ಮಾಡಿ ಎಂದು ಅಭಿಯಂತರ ಬದರೀನಾಥ್‌ಗೆ ಸೂಚಿಸಿದರು.
Advertisement
ನಗರದ ಪಿಡಬ್ಲ್ಯೂಡಿ ಕಚೇರಿಗೆ ಕೆಜಿಎಫ್ ಅಶೋಕ ನಗರದ ಮುಖಂಡರೊಂದಿಗೆ ಆಗಮಿಸಿದ ಶಾಸಕಿ 1 ಗಂಟೆಗೂ ಹೆಚ್ಚು ಕಾಲ ಸಮಸ್ಯೆ ಕುರಿತು ಅಧಿಕಾರಿಗಳೊಂದಿಗೆ ಚರ್ಚಿಸಿದರು. ಕಳೆದ 8 ವರ್ಷಗಳಿಂದಲೂ ಬಗೆಹರಿಯದ ರಸ್ತೆ ಸಮಸ್ಯೆಗೆ ಸಂಬಂಧಿಸಿದಂತೆ ಅಗತ್ಯ ದಾಖಲೆ ಸಲ್ಲಿಸದೆ ನಿರ್ಲಕ್ಷಿಸಿರುವ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.
Related Articles
Advertisement
8 ವರ್ಷಗಳಿಂದಲೂ ಕೆಜಿಎಫ್ ಎಇಇ ಹನುಮಪ್ಪ ಅವರೇ ಕಾರ್ಯನಿರ್ವಹಿಸುತ್ತಿದ್ದರೂ ಸಮಸ್ಯೆ ಬೆಳೆಯಲು ಬಿಟ್ಟುಕೊಂಡಿದ್ದಾರೆ. ಇವರ ಬೇಜವಾಬ್ದಾರಿತನವೇ ಕಾರಣ ಎಂದು ಕೆಲ ಮುಖಂಡರು ಆರೋಪಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಹನುಮಪ್ಪ, ಪೈಂಡಿಂಗ್ಸ್ ಸರಿಯಾಗಿ ನೀಡಿದ್ದೇ ಆದಲ್ಲಿ ಅರ್ಧಗಂಟೆಯಲ್ಲಿ ಬೇಕಾದರೆ ತೆರವು ಮಾಡಿಸುತ್ತೇವೆ. ಈ ಹಿಂದಿನ ಸರಕಾರಿ ವಕೀಲರು ನಿರ್ಲಕ್ಷ್ಯ ಮಾಡಿದ್ದಾರೆ ಹೊರತು ನಾವಲ್ಲ ಎಂದು ಹೇಳಿದರು. ಶಾಸಕಿ ರೂಪಾ ಮಾತನಾಡಿ, ಹಿಂದೆ ಆಗಿರುವುದನ್ನು ಬಿಟ್ಟು ಈಗ ಆಗಬೇಕಿರುವ ಕೆಲಸವನ್ನು ತ್ವರಿತವಾಗಿ ಮಾಡಿ ಮುಗಿಸಿ ಎಂದು ಸೂಚಿಸಿದರು.