ಕುಂದಾಪುರ: ಇಲ್ಲಿನ ಪುರಸಭೆ ವ್ಯಾಪ್ತಿಯ ಖಾರ್ವಿಕೇರಿಯ ಮೇಲ್‌ಕೇರಿಯಲ್ಲಿ ರಸ್ತೆಯಿಲ್ಲದೆ, ಮನೆಯಿಂದ ಸ್ಮಶಾನಕ್ಕೆ ಮೃತದೇಹವನ್ನು ಸಾಗಿಸಲು ಹೆಣಗಾಟ ನಡೆಸಿದ ಪ್ರಸಂಗ ಗುರುವಾರ ನಡೆದಿದೆ.
ಕುಂದಾಪುರ ಪುರಸಭೆ ವ್ಯಾಪ್ತಿಯ ಎರಡನೇ ವಾರ್ಡ್‌ನ ಖಾರ್ವಿಕೇರಿಯ ಮೇಲ್‌ಕೇರಿಯ ಸದಾನಂದ ಖಾರ್ವಿ (67) ಅವರು ಅ.27 ರಂದು ಸಾವನ್ನಪ್ಪಿದ್ದು, ಅವರ ಮೃತದೇಹವನ್ನು ಮನೆಯಿಂದ ಚಿಕ್ಕನ್‌ಸಾಲ್‌ನಲ್ಲಿರುವ ರುದ್ರಭೂಮಿಗೆ ಸಾಗಿಸಲು ಮನೆಯಿಂದ ಮುಖ್ಯ ರಸ್ತೆಯವರೆಗೆ ಸುಮಾರು 100 ಮೀ. ದೂರದವರೆಗೆ ರಸ್ತೆಯಿಲ್ಲದೆ ಹೊತ್ತುಕೊಂಡೇ ಸಾಗಿದ್ದಾರೆ.
ರಸ್ತೆಯಿಲ್ಲದೆ ಸಮಸ್ಯೆ:
ಮೇಲ್‌ಕೇರಿಯಲ್ಲಿ 18 ಮನೆಗಳಿಗೆ ರಸ್ತೆಯಿಲ್ಲದೆ ಎಲ್ಲದಕ್ಕೂ ತುಂಬಾ ಸಮಸ್ಯೆಯಾಗುತ್ತಿದ್ದು, ಈ ರೀತಿಯ ಘಟನೆ ಇದೇ ಮೊದಲಲ್ಲ. ಇಲ್ಲಿನ ಮನೆಗಳಲ್ಲಿ ಯಾರೇ ಸಾವನ್ನಪ್ಪಿದರೂ, ಇದೇ ರೀತಿ ಹೊತ್ತುಕೊಂಡೇ ಸಾಗಬೇಕಾದ ಸ್ಥಿತಿಯಿದೆ. ಸುಡುಗಾಡು ತೋಡಿನಿಂದಾಗಿ ಈಗಂತೂ ಸೊಳ್ಳೆಗಳ ಕಾಟವೂ ವಿಪರೀತವಾಗಿದೆ ಎನ್ನುತ್ತಾರೆ ಇಲ್ಲಿನ ನಿವಾಸಿ ದಿನೇಶ್.
ಅಲ್ಲಿ ಮೊದಲಿನಿಂದಲೂ ಕಾಲು ದಾರಿಯಿದ್ದು, ರಸ್ತೆ ನಿರ್ಮಿಸಲು ಜಾಗದ ಕೊರತೆಯಿದೆ. ಎಲ್ಲ ಮನೆಯವರು ಹೊಂದಾಣಿಕೆ ಮಾಡಿಕೊಂಡು, ಜಾಗ ಮಾಡಿಕೊಟ್ಟರೆ, ಪುರಸಭೆಯ ಸಾಮಾನ್ಯ ಸಭೆಯಲ್ಲಿ ರಸ್ತೆ ನಿರ್ಮಾಣದ ಬಗ್ಗೆ ಗಮನಸೆಳೆಯಲಾಗುವುದು ಎಂದು ಪುರಸಭೆ ಮುಖ್ಯಾಧಿಕಾರಿ ಕೆ.ಗೋಪಾಲಕೃಷ್ಣ ಶೆಟ್ಟಿ “ಉದಯವಾಣಿ’ಗೆ ತಿಳಿಸಿದ್ದಾರೆ.