Advertisement
ಕೊಲ್ಲೂರಿನ ಸೌಪರ್ಣಿಕಾ ನದಿಯ ಸನಿಹದ ಅಗಲ ಕಿರಿದಾದ ಸೇತುವೆ ದಾಟಿದಾಗಲೇ ತೆರಳುವ ಹಾದಿ ಮಣ್ಣಿನ ರಸ್ತೆಯಾಗಿದ್ದು, ಈ ಭಾಗದಲ್ಲಿ ಡಾಮರು ಕಾಣದೇ ನೂರಾರು ವರ್ಷ ಕಳೆದಿದೆ. ಕೊಲ್ಲೂರಿನಿಂದ 12 ಕಿ.ಮೀ. ದೂರದಲ್ಲಿರುವ ಶ್ರೀ ಮೂಕಾಂಬಿಕಾ ಅಭಯಾರಣ್ಯದ ಸುಪರ್ದಿಯಲ್ಲಿರುವ ಹಾದಿಯ ಸ್ಥಿತಿ ಮಳೆಗಾಲದಲ್ಲಿ ಕಾಲ್ನಡಿಗೆಯಲ್ಲಿ ಸಾಗುವುದಕ್ಕೂ ತುಂಬಾ ಕಷ್ಟಕರವಾಗಿ ಪರಿಣಮಿಸಿದೆ.
Related Articles
Advertisement
ಮಳೆಗಾಲದಲ್ಲಿ ತೀರ ಹದಗೆಟ್ಟ ಅಗಲ ಕಿರಿದಾದ ಕೆಸರುಮಯ ರಸ್ತೆಯಲ್ಲಿ ಜನ ಸಂಚರಿಸಬೇಕಾಗಿದೆ. ಜೀಪು, ರಿಕ್ಷಾ, ಕಾರು ಸಹಿತ ಇನ್ನಿತರ ವಾಹನಗಳು ಈ ಮಾರ್ಗದಲ್ಲಿ ಸಂಚರಿಸುವುದು ಕಷ್ಟಸಾಧ್ಯವಾಗಿದೆ. ಹಾಗಾಗಿ ಇಲ್ಲಿನ ನಿವಾಸಿಗಳು ವ್ಯಾಪಾರ ವ್ಯವಹಾರ ಸಹಿತ ನಿತ್ಯ ಜೀವನಕ್ಕೆ 8 ಕಿ.ಮೀ. ದೂರದ ಕೊಲ್ಲೂರಿಗೆ ನಡೆದುಕೊಂಡು ಹೋಗಬೇಕಾಗಿದೆ. ದ್ವಿಚಕ್ರ ವಾಹನದಲ್ಲಿ ಹರಸಾಹಸಪಟ್ಟು ಸಾಗಬೇಕಾಗಿದೆ. ಮಳೆಗಾಲದಲ್ಲಂತೂ ಇಲ್ಲಿನ ನಿವಾಸಿಗಳ ಗೋಳು ಕೇಳುವವರಿಲ್ಲದಂತಾಗಿದೆ. ಕೂಲಿ ಕಾರ್ಮಿಕರಾದ ನಮಗೆ ಇಲ್ಲಿನ ರಸ್ತೆಯ ದುಸ್ಥಿತಿ ಬಹಳಷ್ಟು ತೊಂದರೆ ಉಂಟು ಮಾಡಿದೆ ಎಂದು ಹಳ್ಳಿಬೇರು ನಿವಾಸಿಗಳಾದ ಮಂಜುನಾಥ ಮರಾಠಿ, ಗಂಗು ಮರಾಠಿ ಅವರು ಹೇಳುತ್ತಾರೆ
ಮಾಜಿ ಶಾಸಕರ ಪ್ರಯತ್ನ :
ಮಾಜಿ ಶಾಸಕ ಲಕ್ಷ್ಮೀನಾರಾಯಣ ಅವರು ಕೆಲವು ಕಡೆ ಕಾಂಕ್ರೀಟ್ ರಸ್ತೆ ನಿರ್ಮಿಸಿದ್ದಾರೆ. ಆದರೆ ಅದರ ಮುಂದುವರಿದ ಹಾದಿಯ ದುಸ್ಥಿತಿಗೆ ಅರಣ್ಯ ಇಲಾಖೆಯ ಕಾನೂನು ತೊಡಕಾಗಿದೆ.
ಖಾಯಂ ಶಿಕ್ಷಕರಿಲ್ಲದ ಹಳ್ಳಿಬೇರು ಸರಕಾರಿ ಹಿ.ಪ್ರಾ.ಶಾಲೆ :
ಕುಗ್ರಾಮವಾದ ಹಳ್ಳಿಬೇರಿನಲ್ಲಿ 1ನೇ ತರಗತಿಯಿಂದ 7ನೇ ತರಗತಿ ತನಕ ಸರಕಾರಿ ಶಾಲೆಯಿದ್ದು,ಅಲ್ಲಿ ಸುಮಾರು 60ಕ್ಕೂ ಮಿಕ್ಕಿ ಮಕ್ಕಳು ವಿದ್ಯಾಭ್ಯಾಸ ಮಾಡುತ್ತಿದ್ದಾರೆ. ಎಲ್ಲ ಸೌಕರ್ಯ ಹೊಂದಿರುವ ಈ ಶಾಲೆಯಲ್ಲಿ ಕಳೆದ 2 ವರ್ಷಗಳಿಂದ ಖಾಯಂ ಶಿಕ್ಷಕರಿಲ್ಲ. ಅತಿಥಿ ಶಿಕ್ಷಕರಿದ್ದಾರೆ. ಕೊಲ್ಲೂರು ಶಾಲೆಯಿಂದ ಶಿಕ್ಷಕರನ್ನು ಎರವಲಾಗಿ ಪಡೆಯುವ ಪರಿಸ್ಥಿತಿ ಎದುರಾಗಿದೆ. ವಾಹನ ಸಂಚಾರವಿಲ್ಲದೆ ಕೊಲ್ಲೂರಿನಿಂದ ಸುಮಾರು 8-10 ಕಿ.ಮೀ. ದೂರದ ಈ ಶಾಲೆಗೆ ಸೇವೆ ಸಲ್ಲಿಸಲು ಅನೇಕ ಶಿಕ್ಷಕರು ಹಿಂಜರಿಯುತ್ತಿರುವುದು ಕೇಳಿಬರುತ್ತಿದೆ.ಹಾಗಾಗಿ ಕೋವಿಡ್-19 ಈ ಸಂದರ್ಭದಲ್ಲಿ ಈ ಭಾಗದ ವಿದ್ಯಾರ್ಥಿಗಳು ಶಿಕ್ಷಣ ವಂಚಿತರಾಗುವ ಆತಂಕದ ವಾತಾವರಣ ಎದುರಾಗುತ್ತಿದೆ.
ಇತರ ಸಮಸ್ಯೆಗಳೇನು? :
ಜ ಮೇಘನಿ, ಗೋಳಿಗುಡ್ಡೆ, ಹಳ್ಳಿಬೇರಿನಲ್ಲಿ ಒಟ್ಟು ಸುಮಾರು 400 ಮಂದಿ ವಾಸವಾಗಿದ್ದಾರೆ. ಅನೇಕ ಮಂದಿಗೆ ಅಭಯಾರಣ್ಯದ ನೀತಿ ಯಿಂದಾಗಿ ಹಕ್ಕು ಪತ್ರ ಲಭಿಸಿಲ್ಲ. ಮೂಲ ನಿವಾಸಿಗಳಿಗೆ ಮನೆಯ ಆರ್‌ಟಿಸಿ ಪಡೆದು ಸರಕಾರದ ಸೌಲಭ್ಯಕ್ಕಾಗಿ ಇಲಾಖೆಗೆ ಮೊರೆ ಹೋಗಬೇಕಾದ ಪರಿಸ್ಥಿತಿ ಎದುರಾಗಿದೆ.
ಸಂಪನ್ಮೂಲದ ಕೊರತೆ :
ಅರಣ್ಯ ಇಲಾಖೆ ಎನ್‌ಒಸಿ ನೀಡಿದಲ್ಲಿ ರಸ್ತೆ ದುರಸ್ತಿ ಕಾರ್ಯ ಮಾಡಬಹುದಾಗಿದೆ. ಅಲ್ಲದೆ 10-15 ಕಿ.ಮೀ ದೂರ ವ್ಯಾಪ್ತಿಯ ಕಾಂಕ್ರೀಟ್ ರಸ್ತೆ ನಿರ್ಮಾಣಕ್ಕೆ ಪಂಚಾಯತ್‌ನಲ್ಲಿ ಸಂಪನ್ಮೂಲದ ಕೊರತೆ ಇದೆ.ಅರಣ್ಯ ಇಲಾಖೆ ಸೂಕ್ತ ವ್ಯವಸ್ಥೆ ಮಾಡಬೇಕಾಗಿದೆ.– ರುಕ್ಕನ ಗೌಡ, ಪಿಡಿಒ ಗ್ರಾ.ಪಂ.ಕೊಲ್ಲೂರು
ಪ್ರಯಾಸದ ಪ್ರಯಾಣ :
12 ಕಿ.ಮೀ. ದೂರ ವ್ಯಾಪ್ತಿಯನ್ನು ಕಾಲ್ನಡಿಗೆಯಲ್ಲಿ ಸಾಗಿ ಕೊಲ್ಲೂರಿಗೆ ದಿನನಿತ್ಯ ಬರಬೇಕಾಗಿದೆ. ದುಸ್ಥಿತಿಯ ರಸ್ತೆಯಲ್ಲಿ ಪ್ರಯಾಣವು ಕಷ್ಟಸಾಧ್ಯವಾಗಿದೆ. ಅರಣ್ಯದ ನಡುವಿನ ದೈನಂದಿನ ಸಂಚಾರಕ್ಕೂ ಆತಂಕ ಮಯವಾಗಿದೆೆ. ಇದಕ್ಕೊಂದು ಪರಿಹಾರ ಅತೀ ಅಗತ್ಯ. – ಭವಾನಿ, ಆಶಾ ಕಾರ್ಯಕರ್ತೆ,ಕೊಲ್ಲೂರು ಪ್ರಾ. ಆರೋಗ್ಯ ಕೇಂದ್ರ
-ಡಾ| ಸುಧಾಕರ ನಂಬಿಯಾರ್