Advertisement

ರಸ್ತೆ ಗುಂಡಿ ಮಾಹಿತಿಯಿಲ್ಲ

10:07 AM Oct 19, 2019 | Team Udayavani |

ಬೆಂಗಳೂರು: ನಗರದ 14 ಸಾವಿರ ಕಿ.ಮೀಟರ್‌ ರಸ್ತೆಯಲ್ಲಿರುವ ಗುಂಡಿಗಳ ಸಂಖ್ಯೆ ಕೇವಲ 520. ಹೀಗೆಂದು ಸಂಚಾರ ಪೊಲೀಸ್‌ ವರದಿ ಹೇಳುತ್ತದೆ. ಆದರೆ, ಬಿಬಿಎಂಪಿ “ಸಹಾಯ’ ಆ್ಯಪ್‌ನಲ್ಲಿ ದಾಖಲಾದ ಗುಂಡಿಗಳ ಸಂಖ್ಯೆ 4,573. ಹಾಗಾದರೆ ನಗರದಲ್ಲಿರುವ ರಸ್ತೆ ಗುಂಡಿಗಳ ಸಂಖ್ಯೆ ಎಷ್ಟು? ಈ ಬಗ್ಗೆ ಪ್ರಶ್ನಿಸಿದರೆ ಸಂಚಾರ ಪೊಲೀಸರು ಹಾಗೂ ಬಿಬಿಎಂಪಿ ಇಬ್ಬರ ಬಳಿಯೂ ನಿಖರ ಲೆಕ್ಕವಿಲ್ಲ.!

Advertisement

ಪದೇ ಪದೆ ಅಪಘಾತ ಸಂಭವಿಸುವ ಮತ್ತು ವಾಹನಗಳ ಸುಗಮ ಸಂಚಾರಕ್ಕೆ ತೊಡಕಾಗುವ ಹಾಗೂ ಇನ್ನಿತರೆ ಮಾನದಂಡಗಳನ್ನು ಆಧರಿಸಿ ಸಂಚಾರ ಪೊಲೀಸರು ಸಣ್ಣ ಹಾಗೂ ದೊಡ್ಡ ಪ್ರಮಾಣದ ಗುಂಡಿಗಳ ಸಮೀಕ್ಷೆ ಮಾಡಿ, ಬಿಬಿಎಂಪಿ ಆ್ಯಪ್‌ ಹಾಗೂ ಲಿಖೀತ ರೂಪದಲ್ಲಿ ದೂರುಗಳನ್ನು ನೀಡಲಾಗುತ್ತದೆ. ಗುಂಡಿಗಳ ಪತ್ತೆ ಹಾಗೂ ಮುಚ್ಚುವುದು ನಮ್ಮ ಕೆಲಸವಲ್ಲ. ಆದರೆ, ವಾಹನ ಸವಾರರ ಹಿತದೃಷ್ಟಿಯಿಂದ ರಸ್ತೆಯಲ್ಲಿ ಬಿದ್ದಿರುವ ಗುಂಡಿಗಳ ಮುಚ್ಚುವಂತೆ ಬಿಬಿಎಂಪಿಗೆ ಕೋರುತ್ತೇವೆ. ಒಂದು ವೇಳೆ ಕ್ರಮಕೈಗೊಳ್ಳದಿದ್ದರೆ ತಾತ್ಕಾಲಿಕವಾಗಿ ತಾವೇ ಮಣ್ಣು ಹಾಕಿ ಗುಂಡಿಗಳನ್ನು ಮುಚ್ಚು ತ್ತೇವೆ ಎನ್ನುತ್ತಾರೆ ಸಂಚಾರ

ಪೊಲೀಸರು. ವೇಗದ ಮೀತಿ ತೀರಾ ಕಡಿಮೆ: 44 ಸಂಚಾರ ಠಾಣೆ ವ್ಯಾಪ್ತಿಯ ಪ್ರಮುಖ ರಸ್ತೆಗಳು, ನೈಸ್‌ ರಸ್ತೆ, ಮೇಲು ಸೇತುವೆ, ಕೆಳ ಸೇತುವೆಗಳು ಹಾಗೂ ಮುಖ್ಯ ರಸ್ತೆಗಳಲ್ಲಿ ಕಳೆದ ಐದಾರು ತಿಂಗಳಿಂದ ಸಮೀಕ್ಷೆ ನಡೆಸಿ ಸುಮಾರು 500ಕ್ಕೂ ಅಧಿಕ ಗುಂಡಿಗಳನ್ನು ಪತ್ತೆ ಹಚ್ಚಲಾಗಿದೆ.

ಪ್ರತಿನಿತ್ಯ ಅವುಗಳ ಸಂಖ್ಯೆ ಹೆಚ್ಚಾಗುತ್ತಲೇ ಇರುತ್ತದೆ. ಅಲ್ಲದೆ, ಅಂತಹ ರಸ್ತೆಗಳಲ್ಲಿ ವೇಗದ ಮಿತಿ ತೀರಾ ಕಡಿಮೆ ಇರುತ್ತದೆ. ಪ್ರತಿ ಗಂಟೆಗೆ 20-30 ಕಿ.ಮೀಟರ್‌ ಅಥವಾ ಅದಕ್ಕಿಂತ ಕಡಿಮೆ ಇರುವ ಸಾಧ್ಯತೆಯೂ ಇದೆ. ಇದರೊಂದಿಗೆ ಈ ರಸ್ತೆಗಳಲ್ಲಿ ಓಡಾಡುವ ವಾಹನಗಳು ಕೂಡ ಹಾಳಾಗುತ್ತವೆ. ಉದಾಹರಣೆಗೆ ಓಕಳೀಪುರ, ಶಿವಾನಂದ ವೃತ್ತ, ಮೈಸೂರು ರಸ್ತೆ(ಗಾಳಿ ಆಂಜನೇಯ ದೇವಾಲಯ ಸಮೀಪ), ಗೊರಗುಂಟೆ ಪಾಳ್ಯ ಜಂಕ್ಷನ್‌, ಆಡುಗೋಡಿ-ಕೋರಮಂಗಲ ರಸ್ತೆ ಹಾಗೂ ನಗರದ ಪ್ರತಿ ವಾರ್ಡ್‌ಗಳಲ್ಲಿಯೂ ಸಾವಿರಾರು ಗುಂಡಿಗಳಿವೆ.

ಸರ್ಕಾರದಿಂದಲೇ ಗುಂಡಿಗಳು!: ನಗರದ ಪ್ರತಿ ಪ್ರದೇಶದಲ್ಲಿ ಸರ್ಕಾರದ ಅಂಗ ಸಂಸ್ಥೆಗಳಾದ ಲೋಕೋಪಯೋಗಿ, ಬೆಸ್ಕಾಂ, ಬಿಬಿಎಂಪಿ ಹಾಗೂ ಕೇಬಲ್‌ ನಿರ್ವಹಣಾ ಸಂಸ್ಥೆಗಳ ಒಂದಿಲ್ಲೊಂದು ಕಾಮಗಾರಿಗಳು ನಿತ್ಯ ನಡೆಯುತ್ತಲೇ ಇರುತ್ತವೆ. ಅವರು ಸಹ ಗುಂಡಿಗಳನ್ನು ತೆಗೆದು ತಾತ್ಕಾಲಿಕ ವಾಗಿ ಮಣ್ಣು ಮುಚ್ಚಿ ಸುಮ್ಮನಾ ಗುತ್ತಾರೆ. ಬಳಿಕ ಮಳೆ ಅಥವಾ ನಿರಂತರ ವಾಹನಗಳ ಓಡಾಟದಿಂದ ಮತ್ತೆ ಗುಂಡಿಗಳು ಬಾಯ್ತೆರೆದಿರೆಯುತ್ತವೆ. ಮತ್ತೂಂದೆಡೆ ಮನೆಗಳಿಗೆ ನೀರಿನ ಸಂಪರ್ಕ ಪಡೆಯುವಾಗ ರಸ್ತೆ ಮಧ್ಯೆಯೇ ಅಗೆಯುತ್ತಾರೆ. ಬಳಿಕ ಮುಚ್ಚುವುದಿಲ್ಲ. ಸಾಕಷ್ಟು ಬಾರಿ ಅದರಿಂದಲೂ ರಸ್ತೆ ಅಪಘಾತಗಳು ಸಂಭವಿಸುತ್ತವೆ. ಈ ಸಂಬಂಧ ಬಿಬಿಎಂಪಿ ಅಂತಹ ಗುಂಡಿ ತೆರೆದು ಮುಚ್ಚದ ಸಾರ್ವಜನಿಕರ ವಿರುದ್ಧ ಪರಿಣಾಮಕಾರಿಯಾಗಿ ಕ್ರಮಕೈಗೊಳ್ಳುತ್ತಿಲ್ಲ. ಆದರೆ, ಈ ಗುಂಡಿಗಳ ಲೆಕ್ಕ ಸಂಚಾರ ಪೊಲೀಸರಾಗಲಿ, ಬಿಬಿಎಂಪಿ ಬಳಿಯಾಗಲಿ ಇಲ್ಲ.

Advertisement

ಬಿಬಿಎಂಪಿಯಿಂದ ನಿರ್ಲಕ್ಷ್ಯ: ಬಿಬಿಎಂಪಿ ಅಧಿಕಾರಿಗಳ ಮಾಹಿತಿ ಪ್ರಕಾರ ಆ್ಯಪ್‌ ಮೂಲಕ 4573(ಅ.15)ವರೆಗೆ ಗುಂಡಿಗಳಿರುವ ಬಗ್ಗೆ ಮಾಹಿತಿ ಲಭ್ಯವಾಗಿದೆ. ಈ ಪೈಕಿ 1104 ಮುಚ್ಚಲು ಸಂಬಂಧಿಸಿದ ಎಂಜಿನಿಯರ್‌ಗಳಿಗೆ ಸೂಚಿಸಲಾಗಿದೆ. ಇನ್ನಿತರೆ ಕಾಮಗಾರಿ ನಡೆಯುತ್ತಿದ್ದು, ಇದುವರೆಗೂ 915 ಗುಂಡಿಗಳನ್ನು ಮುಚ್ಚಲಾಗಿದೆ. ಆದರೆ, ನಗರದಲ್ಲಿ ಗುಂಡಿಗಳಿಂದಲೇ ಹತ್ತಾರು ಸಾವು ಸಂಭವಿಸಿದರೂ ಪ್ರತ್ಯೇಕವಾಗಿ ಸರ್ವೇ ಮಾಡದ ಬಿಬಿಎಂಪಿ, ಗುಂಡಿ ಮುಚ್ಚಲು ಸಂಪೂರ್ಣ ವಿಫ‌ಲವಾಗಿದೆ. ಈ ಸಂಬಂಧ ಹೈಕೋರ್ಟ್‌ ಸಹ ಬಿಬಿಎಂಪಿಗೆ ತರಾಟೆಗೆ ತೆಗೆದುಕೊಂಡಿತ್ತು. ಅಲ್ಲದೆ, ಈ ಹಿಂದಿನ ಮೇಯರ್‌ ಗಂಗಾಭಿಕಾ ಮಲ್ಲಿಕಾರ್ಜುನ ಗುಂಡಿ ಮುಚ್ಚದ ಎಂಜಿನಿಯರ್‌ಗೆ ದಂಡ ವಿಧಿಸುವುದಾಗಿಯೂ ಕಟ್ಟುನಿಟ್ಟಿನ ಆದೇಶ ಹೊರಡಿಸಿದ್ದರು. ಆದರೂ ಪಾಲನೆಯಾಗುತ್ತಿಲ್ಲ.

 ವಿವಿಐಪಿ ರಸ್ತೆಯಲ್ಲಿ ಮಾತ್ರ ಗುಂಡಿಗಳಿಲ್ಲ :  99 ವಾರ್ಡ್‌ಗಳಲ್ಲಿ ಲಕ್ಷಾಂತರ ಗುಂಡಿಗಳನ್ನು ಕಾಣಬಹುದು. ಆದರೆ, ಕೇವಲ ನಾಲ್ಕೈದು ಸಾವಿರ ಗುಂಡಿಗಳ ಲೆಕ್ಕ ನೀಡುತ್ತಾರೆ.ಯಾವ ಎಂಜಿನಿಯರ್‌ ಕೂಡ ರಸ್ತೆಗಳ ಸಮೀಕ್ಷೆ ನಡೆಸಿ ಗುಂಡಿಗಳ ಮುಚ್ಚುವ ಕಾರ್ಯಕ್ಕೆ ಹೋಗುವುದಿಲ್ಲ. ಆದರೆ, ವಿಧಾನಸೌಧ, ವಿಕಾಸಸೌಧ, ಮುಖ್ಯಮಂತ್ರಿಗಳ ಮನೆ, ವಿಐಪಿ, ವಿವಿಐಪಿ ಹಾಗೂ ಗಣ್ಯರ ಮನೆ ಮತ್ತು ಕಚೇರಿಗಳ ಮುಂಭಾಗ ಮಾತ್ರ ಒಂದು ಸಣ್ಣ ಗುಂಡಿ ಬಿದ್ದರೂ ಮುಚ್ಚುತ್ತಾರೆ ಎಂದು ಆರೋಪಿಸುತ್ತಾರೆ ಸಂಚಾರ ತಜ್ಞ ಎಂ.ಎನ್‌.ಶ್ರೀಹರಿ.

 

ಗುಂಡಿಯಿಂದಲೇ ವಾಹನ ವೇಗ ನಿಯಂತ್ರಣ! ವಾಹನಗಳ ವೇಗದ ಮಿತಿ ಹಾಗೂ ಅಪಘಾತ ತಡೆಗೆ ರಸ್ತೆಗಳ ಮಧ್ಯೆ ಹಂಪ್ಸ್‌ಗಳನ್ನು ಹಾಕಲಾಗುತ್ತದೆ. ಸೂಚನಾ ಫ‌ಲಕದ ಮೂಲಕವೂ ಈ ಬಗ್ಗೆ ಮಾಹಿತಿ ನೀಡಲಾಗುತ್ತಿತ್ತು. ಆದರೆ, ಬೆಂಗಳೂರಿನ ಇಂದಿನ ಚಿತ್ರಣ ಸಂಪೂರ್ಣ ಬದಲಾಗಿದೆ. ರಸ್ತೆಯಲ್ಲಿ ಬಿದ್ದಿರುವ ಗುಂಡಿಗಳೇ ವಾಹನಗಳ ವೇಗ ಮಿತಿ ನಿಯಂತ್ರಣ ಮಾಡುತ್ತಿವೆ.

 

-ಮೋಹನ್‌ ಭದ್ರಾವತಿ

Advertisement

Udayavani is now on Telegram. Click here to join our channel and stay updated with the latest news.

Next