Advertisement

ರಸ್ತೆ ಗುಂಡಿ: ಪಾಲಿಕೆಗೇ ಇಲ್ಲ ಮಾಹಿತಿ

09:48 AM Sep 13, 2019 | Suhan S |

ಬೆಂಗಳೂರು: ನಗರದ ಪ್ರಮುಖ ರಸ್ತೆಗಳಲ್ಲಿ ಮತ್ತೆ ಗುಂಡಿಗಳು ಕಾಣಿಸಿದ್ದು, ವಾಹನ ಸವಾರರು ಮತ್ತೆ ತೊಂದರೆ ಎದುರಿಸುವಂತಾಗಿದೆ. ಬಿಬಿಎಂಪಿ ತರಾತುರಿ ಯಲ್ಲಿ ರಸ್ತೆ ಗುಂಡಿ ಮುಚ್ಚುವ ಭರದಲ್ಲಿ ಗುಣಮಟ್ಟ ಕಾಯ್ದುಕೊಂಡಿಲ್ಲ ಎಂಬ ಆರೋಪವೂ ಕೇಳಿದೆ.

Advertisement

ಬಿಬಿಎಂಪಿ ವ್ಯಾಪ್ತಿಯ 401ಕಿ.ಮೀ. ಉದ್ದದ ರಸ್ತೆಯಲ್ಲಿ ಗುಂಡಿಗಳಿವೆ ಎಂದು ಇತ್ತೀಚೆಗೆ ಹೈಕೋರ್ಟ್‌ ಗೆ ಬಿಬಿಎಂಪಿ ಮಾಹಿತಿ ನೀಡಿತ್ತು. ಆದರೆ ಬಿಬಿಎಂಪಿ ಈವರೆಗೂ ಎಷ್ಟು ಗುಂಡಿ ಮುಚ್ಚಲಾಗಿದೆ ಎಂಬ ಅಂಕಿ ಅಂಶಗಳನ್ನು ಬಹಿರಂಗಗೊಳಿಸುತ್ತಿಲ್ಲ. ಅಧಿಕಾರಿಗಳನ್ನು ವಿಚಾರಿಸಿದರೆ ಬಿಬಿಎಂಪಿ ವೆಬ್‌ಸೈಟ್‌ನಲ್ಲಿದೆ ಎಂದು ಹೇಳಿ ಕೈತೊಳೆದುಕೊಳ್ಳುತ್ತಾರೆ. ಆದರೆ ವೆಬ್‌ಸೈಟ್‌ನಲ್ಲಿ ಯಾವುದೋ ಹಳೆ ವರ್ಷಗಳ ಅಂಕಿ ಅಂಶ ಹಾಕಿದ್ದು, ಇದೇ ವಷದ ಮಾಹಿತಿ ಎಂದು ಬಿಂಬಿಸಿದೆ. ಜತೆಗೆ ಕೆಲವು ವಲಯಗಳ ರಸ್ತೆಗಳಲ್ಲಿ ಗುಂಡಿಗಳೇ ಇಲ್ಲ ಎಂದು ವೆಬ್‌ಸೈಟ್‌ನಲ್ಲಿ ಮಾಹಿತಿಯಿದೆ.

ಕಳಪೆ ಕಾಮಗಾರಿ ಆರೋಪ: ನಗರದಲ್ಲಿರುವ ಎಲ್ಲ ರಸ್ತೆಗಳಲ್ಲಿರುವ ಗುಂಡಿಗಳನ್ನು ಮುಚ್ಚಲಾಗಿದೆ ಎಂದು ಕೊಚ್ಚಿಕೊಳ್ಳುತ್ತಿರುವ ಬಿಬಿಎಂಪಿ ವಿರುದ್ಧ ಕಳಪೆ ಕಾಮಗಾರಿಯ ಆರೋಪಗಳು ಕೇಳುತ್ತಿವೆ. ಈ ಸಂಬಂಧ ರಸ್ತೆ ಗುಂಡಿಗಳು ಹೆಚ್ಚಿವೆ ಎಂಬ ದೂರುಗಳು ಬಂದಿವೆ. ಅಲ್ಲದೆ ಬಿಬಿಎಂಪಿ ರಸ್ತೆಗುಂಡಿಗಳನ್ನು ಮುಚ್ಚಿದ ಬಳಿಕ, ಕಾಮಗಾರಿ ಗುಣಮಟ್ಟದ್ದಾಗಿದೆಯೇ ಎಂದು ಪರಿಶೀಲನೆ ಕೂಡ ನಡೆಸುತ್ತಿಲ್ಲ. ಹೀಗಾಗಿ ರಸ್ತೆಗುಂಡಿಗಳು ಮತ್ತೆ ಯಥಾಸ್ಥಿತಿಗೆ ತಲುಪಿವೆ. ಇದರಿಂದಾಗಿ ಸಾರ್ವಜನಿಕರು ದೂಳು, ಗುಂಡಿಗಳಿಂದಾಗಿ ಸಾರ್ವಜನಿಕರು ಕಿರಿಕಿರಿ ಅನುಭವಿಸುವಂತಾಗಿದೆ.

ಬಿಬಿಎಂಪಿಯ ವ್ಯಾಪ್ತಿಯಲ್ಲಿ 470 ಪ್ರಮುಖ ರಸ್ತೆಗಳಿದ್ದು, 1344.84 ಕಿ.ಮೀ ಉದ್ದವಿದೆ. ಇದರಲ್ಲಿ 401ಕಿ.ಮೀ ಉದ್ದದ 108 ರಸ್ತೆಗಳು ರಸ್ತೆಗುಂಡಿಗಳಿಂದ ಕೂಡಿವೆ. 106.68 ಕಿ.ಮೀ ರಸ್ತೆಯಲ್ಲಿ ಬೆಸ್ಕಾಂ, ಗೇಲ್, ಜಲಮಂಡಳಿ ಹಾಗೂ ಕೆಪಿಟಿಸಿಎಲ್ ಸಂಸ್ಥೆಗಳು ವಿವಿಧ ಅಭಿವೃದ್ಧಿ ಕಾರಣಕ್ಕಾಗಿ ರಸ್ತೆಗಳನ್ನು ಅಗೆದಿವೆ. ಇನ್ನು 943.74 ಕಿ.ಮೀ ರಸ್ತೆಗಳು ಗುಂಡಿ ಮುಕ್ತವಾಗಿವೆ ಎಂದು ಪಾಲಿಕೆ ಹೈಕೋರ್ಟ್‌ಗೆ ಮಾಹಿತಿ ನೀಡಿದೆ.

ವೆಬ್‌ಸೈಟ್‌ನಲ್ಲಿ ಅನಧಿಕೃತ ಮಾಹಿತಿ: ಬಿಬಿಎಂಪಿಯ ಅಧಿಕೃತ ವೆಬ್‌ಸೈಟ್ ಪ್ರಕಾರ ಮಹದೇವಪುರ ಹಾಗೂ ಯಲಹಂಕ ವಲಯದಲ್ಲಿ ಒಂದೇ ಒಂದು ರಸ್ತೆಗುಂಡಿ ಇಲ್ಲ ಎಂದು ಪ್ರಕಟಿಸಲಾಗಿದೆ.

Advertisement

ಆದರೆ, ವೆಬ್‌ಸೈಟ್‌ನಲ್ಲಿರುವುದು ಕಳೆದ ವರ್ಷದ ರಸ್ತೆಗುಂಡಿಗಳ ವಿವರ. ದಕ್ಷಿಣ ವಲಯದಲ್ಲಿ ನವೆಂಬರ್‌ 2, ದಾಸರಹಳ್ಳಿ ಹಾಗೂ ಆರ್‌ಆರ್‌ ನಗರದಲ್ಲಿ ಅಕ್ಟೋಬರ್‌ 26, ಬೊಮ್ಮನಹಳ್ಳಿಯಲ್ಲಿ ನವೆಂಬರ್‌ 2ರ ವರೆಗಿನ ರಸ್ತೆಗುಂಡಿಗಳ ವಿವರ ಮಾತ್ರ ಇದೆ. ಅದೇ ರೀತಿ ಯಲಹಂಕ ಮತ್ತು ಮಹದೇವಪುರದಲ್ಲಿ ರಸ್ತೆಗುಂಡಿಗಳೇ ಇಲ್ಲ ಎಂದು ಕ್ಲೀನ್‌ಚಿಟ್ ನೀಡಿದೆ.

ಸಂಖ್ಯೆ ನೀಡುವುದಕ್ಕಷ್ಟೇ ಸೀಮಿತ: ಬಿಬಿಎಂಪಿಯ ಫಿಕ್ಸ್‌ ಮೈ ಸ್ಟ್ರೀಟ್ ಕೇವಲ ದೂರು ದಾಖಲಿಸಿಕೊಳ್ಳುವುದಕ್ಕಷ್ಟೇ ಸೀಮಿತವಾಗಿದೆ. ದೂರು ದಾಖಲಿಸಿದರೂ ಬಿಬಿಎಂಪಿ ರಸ್ತೆಗುಂಡಿಗಳನ್ನು ಮುಚ್ಚುತ್ತಿಲ್ಲ. ಈ ಆ್ಯಪ್‌ ಪರೀಕ್ಷಿಸುವ ಉದ್ದೇಶದಿಂದ ‘ಉದಯವಾಣಿ’ಯಿಂದ, ರಾಜಾಜಿನಗರದ ಮುಖ್ಯ ಬೀದಿಯಲ್ಲಿರುವ ರಸ್ತೆಗುಂಡಿ ಬಗ್ಗೆ ಆ್ಯಪ್‌ನಲ್ಲಿ ದೂರು ದಾಖಲಿಸಲಾಗಿತ್ತು. ಆದರೆ, ದೂರಿನ ಸಂಖ್ಯೆ ನೀಡಲಾಗಿದೆಯಾದರೂ ರಸ್ತೆಗುಂಡಿಯನ್ನು ಮುಚ್ಚಿಲ್ಲ. ಜತೆಗೆ ಹತ್ತು ಇಂಜಿನಿಯರ್‌ಗಳಿಗೆ ದಂಡ ವಿಧಿಸಲಾಗಿದೆ ಎಂದು ಹೇಳಲಾಗಿದೆ. ಆದರೆ ದಂಡದ ವಿಧಿಸಿರುವ ಮಾಹಿತಿ ಬಹಿರಂಗ ಪಡಿಸಿಲ್ಲ.

 

● ಹಿತೇಶ್‌ ವೈ

Advertisement

Udayavani is now on Telegram. Click here to join our channel and stay updated with the latest news.

Next