ಬೆಂಗಳೂರು: ರಾಜ್ಯದಲ್ಲಿ ಸುಗಮ ಸಂಚಾರಕ್ಕೆ ರಸ್ತೆ ಜಾಲ ಅಭಿವೃದ್ಧಿಪಡಿಸಲು 10 ಸಾವಿರ ಕೋಟಿ ರೂ. ಮೊತ್ತದಲ್ಲಿ ಯೋಜನೆ ಅನುಷ್ಠಾನಗೊಳಿಸಲಾಗುತ್ತಿದೆ ಎಂದು ಲೋಕೋಪಯೋಗಿ ಸಚಿವ ಸಿ.ಸಿ. ಪಾಟೀಲ್ ತಿಳಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯ ಹೆದ್ದಾರಿ ಅಭಿವೃದ್ಧಿ ಯೋಜನೆ ನಾಲ್ಕನೇ ಹಂತದಡಿ 3 ಘಟ್ಟಗಳಲ್ಲಿ 10 ಸಾವಿರ ಕೋಟಿ ರೂ. ಮೊತ್ತದ ಕಾಮಗಾರಿ ಪ್ರಗತಿಯಲ್ಲಿದ್ದು, ಘಟ್ಟ 1ರಡಿ 4,500 ಕೋಟಿ ರೂ. ಮೊತ್ತದಲ್ಲಿ 3,461 ಕಿ.ಮೀ. ಹಾಗೂ 2,630 ಕೋಟಿ ರೂ. ಮೊತ್ತದಲ್ಲಿ 2,593 ಕಿ.ಮೀ., ಘಟ್ಟ 2ರಡಿ 3,500 ಕೋಟಿ ರೂ. ಮೊತ್ತದಲ್ಲಿ 2275 ಕಿ.ಮೀ. ಹೆದ್ದಾರಿಗಳ ಅಭಿವೃದ್ಧಿಗೆ ಆಡಳಿತಾತ್ಮಕ ಅನುಮೋದನೆ ನೀಡಲಾಗಿದೆ ಎಂದರು.
ಎಸ್‌ಸಿಪಿ-ಟಿಎಸ್‌ಪಿ ಯೋಜನೆಯಡಿ ಎಸ್‌ಸಿ-ಎಸ್‌ಟಿ ಸಮುದಾಯ ವಾಸಿಸುವ ಕಾಲನಿಗಳಲ್ಲಿ ಸಿಮೆಂಟ್ ಕಾಂಕ್ರೀಟ್ ರಸ್ತೆಗಳ ನಿರ್ಮಾಣಕ್ಕೆ 985 ಕೋಟಿ ರೂ. ಮೊತ್ತದಲ್ಲಿ ಕೈಗೊಳ್ಳಲು ಟೆಂಡರ್ ಆಹ್ವಾನಿಸಲಾಗಿದೆ ಎಂದು ತಿಳಿಸಿದರು.
2021ನೇ ಸಾಲಿನಲ್ಲಿ ಸಂಭವಿಸಿದ ಅತಿವೃಷ್ಠಿ ಹಾಗೂ ನೆರೆ ಹಾವಳಿಯಿಂದ ಹಾನಿಗೊಳಗಾದ ರಸ್ತೆ ಮತ್ತು ಸೇತುವೆ ದುರಸ್ತಿ ಹಾಗೂ ಪುನರ್ ನಿರ್ಮಾಣಕ್ಕೆ 610 ಕೋಟಿ ರೂ. ಮೊತ್ತದ ಮೀಸಲಿಟ್ಟು ಕಾಮಗಾರಿ ಕೈಗೆತ್ತಿಕೊಳ್ಳಲಾಗಿದೆ ಎಂದು ಹೇಳಿದರು. ಮಲೆನಾಡು, ಕರಾವಳಿ ಭಾಗದಲ್ಲಿ ಗ್ರಾಮಬಂಧು ಸೇತು ಕಾರ್ಯಕ್ರಮದಲ್ಲಿ 1335 ಕಾಲು ಸೇತುವೆ ನಿರ್ಮಾಣಕ್ಕೆ 200 ಕೋಟಿ ರೂ. ಮೊತ್ತದ ಯೋಜನೆ ರೂಪಿಸಲಾಗಿದೆ ಎಂದು ತಿಳಿಸಿದರು.
ಲೋಕೋಪಯೋಗಿ ಇಲಾಖೆಯಲ್ಲಿ ಈ ಹಿಂದೆ ಕಾಂಗ್ರೆಸ್ ಸರಕಾರದಲ್ಲಿ ಎಚ್.ಸಿ. ಮಹದೇವಪ್ಪ ಅವರು ಸಚಿವರಾಗಿದ್ದ ಕಾಲದಿಂದಲೂ ಬಾಕಿ ಬಿಲ್ ಇವೆ. ನಾನು ಸಚಿವನಾಗಿ ಹೊಣೆಗಾರಿಕೆ ವಹಿಸಿ ಕೊಂಡ ಅನಂತರ ಇದುವರೆಗೂ 5,252 ಕೋ.ರೂ. ಪಾವತಿಸಿದ್ದು ಇನ್ನೂ 4 ಸಾವಿರ ಕೋಟಿ ರೂ. ಬಾಕಿ ಇದೆ.
– ಸಿ.ಸಿ.ಪಾಟೀಲ್, ಲೋಕೋಪಯೋಗಿ ಸಚಿವ