ಬೆಂಗಳೂರು: ಬಿಎಂಡಬ್ಲೂé ಬೈಕ್ ನಿಯಂತ್ರಣ ತಪ್ಪಿ ರಸ್ತೆ ಬದಿಯ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದು ಖಾಸಗಿ ವಿಶ್ವವಿದ್ಯಾಲಯದ ಉಪಕುಲಪತಿ ಪುತ್ರ ಹಾಗೂ ಆತನ ಸ್ನೇಹಿತ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಯಶವಂತಪುರ ಸಂಚಾರ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ಸಂಜಯನಗರದ ಆರ್‌ಎಂವಿ ಲೇಔಟ್ ನಿವಾಸಿ ನಿಖಿಲ್ (23) ಮತ್ತು ಮನಮೋಹನ್(31) ಮೃತರು.
ಶುಕ್ರವಾರ ಮುಂಜಾನೆ 3.30ರ ಸುಮಾರಿಗೆ ಯಶವಂತಪುರದಿಂದ ಗೊರಗುಂಟೆಪಾಳ್ಯ ರಸ್ತೆ ಮಾರ್ಗ ಮಧ್ಯೆ ಅಪಘಾತ ಸಂಭವಿಸಿದೆ. ಮೃತರ ಪೈಕಿ ನಿಖಿಲ್, ರೇವಾ ವಿವಿ ಉಪಕುಲಪತಿ ಧನಂಜಯ ಅವರ ಪುತ್ರ. ಈತ ನಗರದ ಖಾಸಗಿ ಕಾಲೇಜಿನಲ್ಲಿ ಎಂಬಿಎ ಓದುತ್ತಿದ್ದ. ಮನಮೋಹನ್ ಬ್ಯಾಂಕ್‌ವೊಂದರಲ್ಲಿ ಕೆಲಸ ಮಾಡುತ್ತಿದ್ದ. ಶುಕ್ರವಾರ ನಿಖೀಲ್ ಹುಟ್ಟುಹಬ್ಬ ಇತ್ತು. ಹೀಗಾಗಿ ತಡರಾತ್ರಿ 12 ಗಂಟೆಗೆ ಮನೆಯಲ್ಲಿ ಪೋಷಕರ ಜತೆ ಹುಟ್ಟುಹಬ್ಬ ಆಚರಿಸಿಕೊಂಡಿದ್ದ ನಿಖೀಲ್, ಬಳಿಕ ಎಂ.ಜಿ.ರಸ್ತೆಯಲ್ಲಿ ಸ್ನೇಹಿತರನ್ನು ಭೇಟಿಯಾಗುವುದಾಗಿ ಹೇಳಿ ಮನೆಯಿಂದ ಹೊರಗಡೆ ಹೋಗಿದ್ದ ಎಂದು ಸಂಚಾರ ಪೊಲೀಸರು ಹೇಳಿದರು. ನಿಖೀಲ್, ತನ್ನ ಬಿಎಂಡಬ್ಲ್ಯೂ ಬೈಕ್‌ನಲ್ಲಿ ಸ್ನೇಹಿತ ಮನಮೋಹನ್ ಜತೆ ಹೊರಟಿದ್ದ. ಇಬ್ಬರು ನಗರದ ವಿವಿಧೆಡೆ ಸುತ್ತಾಡಿ ಶುಕ್ರವಾರ ನಸುಕಿನ 3.20ರ ಸುಮಾರಿಗೆ ಯಶವಂತಪುರ ಕಡೆಯಿಂದ ಗೊರಗುಂಟೆಪಾಳ್ಯದ ಕಡೆ ಅತೀವೇಗ ಮತ್ತು ನಿರ್ಲಕ್ಷ್ಯದಿಂದ ತೆರಳುತ್ತಿದ್ದರು. ಆಗ ಬಿಎಸ್‌ಎನ್‌ಎಲ್ ಕಚೇರಿ ಸಮೀಪದ ಕೆಂಪೇಗೌಡ ಪ್ರತಿಮೆ ಬಳಿ ತಿರುವು ಪಡೆಯುವಾಗ ಬೈಕ್ ನಿಯಂತ್ರಣ ತಪ್ಪಿ ರಸ್ತೆ ಬದಿಯ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದಿದೆ. ಪರಿಣಾಮ ಇಬ್ಬರು ರಸ್ತೆಗೆ ಬಿದ್ದು ಗಂಭೀರವಾಗಿ ಗಾಯಗೊಂಡಿದ್ದರು. ಇಬ್ಬರು ಹೆಲ್ಮೆಟ್ ಧರಿಸದ ಕಾರಣ ತಲೆಗೆ ತೀವ್ರ ಪೆಟ್ಟು ಬಿದ್ದು ರಕ್ತಸ್ರಾವವಾಗಿ ಇಬ್ಬರೂ ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಹೆಲ್ಮೆಟ್ ಧರಿಸದೆ ಅತಿ ವೇಗದಲ್ಲಿ ಬೈಕ್ ಚಾಲನೆ: ಹೆಲ್ಮಟ್ ಧರಿಸದೆ ವೇಗವಾಗಿ ಬೈಕ್ ಚಾಲನೆ ಮಾಡುತ್ತಿದ್ದರು. ಬೈಕ್ ಸವಾರ ನಿಖಿಲ್ ಮದ್ಯ ಸೇವಿಸಿ ದ್ವಿಚಕ್ರ ವಾಹನ ಚಾಲನೆ ಮಾಡಿರುವುದು ಖಚಿತವಾಗಿಲ್ಲ. ರಕ್ತದ ಮಾದರಿಯನ್ನು ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ. ವರದಿ ಬಳಿಕ ಸ್ಪಷ್ಟತೆ ತಿಳಿಯಲಿದೆ. ಮನೆಯಲ್ಲಿ ಎಂ.ಜಿ.ರಸ್ತೆಗೆ ಹೋಗುವುದಾಗಿ ಹೇಳಿದ ನಿಖಿಲ್, ಮುಂಜಾನೆ ಯಶವಂತಪುರ ಕಡೆಯಿಂದ ಗೊರಗುಂಟೆಪಾಳ್ಯದ ಕಡೆಗೆ ಏಕೆ ಹೋಗಿದ್ದ ಎಂಬುದು ಗೊತ್ತಿಲ್ಲ. ಈ ಬಗ್ಗೆ ಅವರ ಪೋಷಕರ ಬಳಿಯೂ ಮಾಹಿತಿ ಇಲ್ಲ ಎಂದು ಸಂಚಾರ ಪೊಲೀಸರು ಹೇಳಿದರು.