ಕಟಪಾಡಿ:
ಕಾಪು: ಉಡುಪಿಯಿಂದ ಮಂಗಳೂರಿನತ್ತ ಮೂರು ಕಾರುಗಳ ನಡುವೆ ಸರಣಿ ಅಪಘಾತ ಸಂಭವಿಸಿದ ಪರಿಣಾಮ ಕರ್ತವ್ಯ ನಿರತ ಪೊಲೀಸ್ ಸೇರಿದಂತೆ ಐದು ಮಂದಿ ಗಾಯಗೊಂಡ ಘಟನೆ ರಾಷ್ಟ್ರೀಯ ಹೆದ್ದಾರಿ 66ರ ಕಟಪಾಡಿ ಜಂಕ್ಷನ್‌ನಲ್ಲಿ ಮಂಗಳವಾರ ಸಂಜೆ ನಡೆದಿದೆ.
ಉಡುಪಿಯಿಂದ ಬರುತ್ತಿದ್ದ ವಾಹನಗಳನ್ನು ರಾಷ್ಟ್ರೀಯ ಹೆದ್ದಾರಿ 66ರ ಕಟಪಾಡಿ ಜಂಕ್ಷನ್‌ನಲ್ಲಿ ಟ್ರಾಫಿಕ್ ಕಾರಣಕ್ಕಾಗಿ ನಿಲ್ಲಿಸಿದ್ದು ಈ ವೇಳೆ ಚಾಲಕನ ನಿಯಂತ್ರಣ ತಪ್ಪಿದ ಹಿಂದಿನಿಂದ ಬಂದ ಸ್ವಿಫ್ಟ್ ಕಾರು ಅದರ ಎದುರು ನಿಂತಿದ್ದ ನಿಸ್ಸಾನ್ ಮತ್ತು ಇಕೋ ಸ್ಪೋರ್ಟ್ ಕಾರಿಗೆ ಢಿಕ್ಕಿ ಹೊಡೆದಿದೆ. ಆ ಎರಡೂ ಕಾರುಗಳು ಮುಂದೆ ಚಲಿಸಿ, ಸಂಚಾರ ನಿಯಂತ್ರಿಸಲು ನಿಂತಿದ್ದ ಪೊಲೀಸ್ ಸಿಬಂದಿಗೆ ಢಿಕ್ಕಿ ಹೊಡೆದಿದೆ.
ಕಾರು ಢಿಕ್ಕಿ ಹೊಡೆದ ರಭಸಕ್ಕೆ ಕಟಪಾಡಿ ಹೊರ ಠಾಣಾ ಸಿಬಂದಿ ರಾಮ ನಾಯಕ್ ಗಾಯಗೊಂಡಿದ್ದು ಅವರನ್ನು ಸ್ಥಳೀಯರು ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಕಾರಿನಲ್ಲಿದ್ದ ಸುಶಾಂತ್, ವಿಷ್ಣು, ಆಶಿಕಾ, ಹರ್ಷಿ ಸೇರಿದಂತೆ ನಾಲ್ಕು ಮಂದಿ ಸಣ್ಣಪುಟ್ಟ ಗಾಯಗಳೊಂದಿಗೆ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಗಾಯಾಳುಗಳನ್ನು ಚಿಕಿತ್ಸೆಗಾಗಿ ಉಡುಪಿ ಆಸ್ಪತ್ರೆಗೆ ಕರೆದೊಯ್ಯಲಾಗಿದೆ.
ಘಟನೆಯ ವೇಳೆ ಹೆದ್ದಾರಿ ಸಂಚಾರ ಅಸ್ತವ್ಯಸ್ತಗೊಂಡಿದ್ದು ಕಟಪಾಡಿ ಹೊರಠಾಣೆ, ಕಾಪು ಪೊಲೀಸ್ ಠಾಣೆ ಮತ್ತು ಹೆದ್ದಾರಿ ಗಸ್ತು ಪಡೆಯ ಸಿಬಂದಿಗಳು ಸ್ಥಳಕ್ಕೆ ಧಾವಿಸಿ ಸಂಚಾರ ನಿಯಂತ್ರಣಕ್ಕೆ ತಂದಿದ್ದು ಕಾಪು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.