Advertisement

ಭೀಕರ ರಸ್ತೆ ಅಪಘಾತ : ಕಾರು ಚಾಲಕ ಸೇರಿ ಇಬ್ಬರ ದುರ್ಮರಣ, ಅಣ್ಣನ ಸಾವಿನ ಆಘಾತದಿಂದ ತಂಗಿ ಸಾವು

09:48 PM Jan 11, 2022 | Team Udayavani |

ಹುಣಸೂರು : ಕಾರು ಹಾಗೂ ಬೈಕ್‌ಗಳ ನಡುವೆ ಸಂಭವಿಸಿದ ಅಪಘಾತದಲ್ಲಿ ಕಾರು ಚಾಲಕ ಹಾಗೂ ಬೈಕ್ ಸವಾರ ಸೇರಿ ಇಬ್ಬರು ಮೃತಪಟ್ಟಿದ್ದು, ಮತ್ತಿಬ್ಬರು ಬೈಕ್ ಸವಾರರು ಗಂಭೀರ ಗಾಯಗೊಂಡಿರುವ ಘಟನೆ ಮೈಸೂರು-ಬಂಟ್ವಾಳ ಹೆದ್ದಾರಿ-275 ರ ಹುಣಸೂರು ತಾಲೂಕಿನ ಸೋಮನಹಳ್ಳಿ ಬಳಿ ಸೋಮವಾರ ರಾತ್ರಿ ನಡೆದಿದೆ.

Advertisement

ಹುಣಸೂರು ತಾಲೂಕಿನ ಬನ್ನಿಕುಪ್ಪೆಯ ಪತ್ರಕರ್ತ ಚೆಲುವರಾಜು – ಆಶಾಕಾರ್ಯಕರ್ತೆ ಶಿವನಾಗುರ ಅವರ ಏಕೈಕ ಪುತ್ರ ಕಾರು ಚಾಲಕ ಕೀರ್ತಿರಾಜ್(24) ಹಾಗೂ ಮೈಸೂರಿನ ಕೈಲಾಸಪುರದ ನಾಗರಾಜ್‌ರ ಪುತ್ರ ಬೈಕ್ ಸವಾರ ರವಿಕುಮಾರ್(34) ಮೃತರು. ರವಿಕುಮಾರ್‌ರಿಗೆ ಪತ್ನಿ, ಇಬ್ಬರು ಮಕ್ಕಳಿದ್ದಾರೆ. ಹಿಂಬದಿ ಸವಾರ ಮೈಸೂರಿನ ಉದಯ ನಗರದ ಇರ್ಫಾನ್ ಖಾನ್ ಹಾಗೂ ಮತ್ತೊಂದು ಬೈಕಿನ ಸವಾರ ಬನ್ನಿಕುಪ್ಪೆಯ ಕಪನಯ್ಯರ ಪುತ್ರ ನಾಗೇಂದ್ರ ತೀವ್ರಗಾಯಗೊಂಡು ಮೈಸೂರಿನ ಆಸ್ಪತ್ರೆಗೆ ದಾಖಲಾಗಿದ್ದಾರೆ.

ಘಟನೆ ವಿವರ:

ಹುಣಸೂರು ಕಡೆಯಿಂದ ಬನ್ನಿಕುಪ್ಪೆಗೆ ತೆರಳುತ್ತಿದ್ದ ಕಾರು ಹಾಗೂ ಪೊನ್ನಂಪೇಟೆಯಿಂದ ಮೈಸೂರಿಗೆ ತೆರಳುತ್ತಿದ್ದ ಎರಡು ಬೈಕ್‌ಗಳು ಹೆದ್ದಾರಿಯ ಸೋಮನಹಳ್ಳಿ ಬಳಿ ಎದುರಿನಿಂದ ಬಂದ ವಾಹನವೊಂದಕ್ಕೆ ಡಿಕ್ಕಿ ಹೊಡೆಯುವುದನ್ನು ತಪ್ಪಿಸಲು ಹೋದ ಬೈಕ್ ಸವಾರರು ಸಡನ್ ಬ್ರೇಕ್ ಹಾಕಿದ್ದಾರೆ. ಈ ವೇಳೆ ಹಿಂದಿನಿಂದ ಬರುತ್ತಿದ್ದ ಕಾರು ಚಾಲಕ ಬೈಕ್‌ಗಳಿಗೆ ಡಿಕ್ಕಿ ಹೊಡೆಯುದನ್ನು ತಪ್ಪಿಸಲು ಒಮ್ಮೆಲೇ ಬ್ರೇಕ್ ಹಾಕಿದ್ದರಿಂದ ಚಾಲಕನ ನಿಯಂತ್ರಣ ತಪ್ಪಿ ಬೈಕ್‌ಗಳಿಗೆ ಡಿಕ್ಕಿ ಹೊಡೆದಿದೆ ಪರಿಣಾಮ ಸವಾರರು ಕೆಳಬಿದ್ದು ಗಂಭೀರ ಗಾಯಗೊಂಡಿದ್ದಾರೆ.

ಈ ವೇಳೆ ನಿಯಂತ್ರಣ ತಪ್ಪಿದ ಕಾರು ರಸ್ತೆ ಬದಿಯ ಮರಕ್ಕೆ ಗುದ್ದಿದ ರಭಸಕ್ಕೆ ಕಾರು ಪಲ್ಟಿಯಾಗಿ ಬಿದ್ದು ನಜ್ಜುಗುಜ್ಜಾಗಿದ್ದರೆ, ಬೈಕ್‌ಗಳು ರಸ್ತೆ ಬದಿಯ ಜಮೀನಿನೊಳಕ್ಕೆ ಬಂದು ಬಿದ್ದಿವೆ. ತೀವ್ರ ಗಾಯಗೊಂಡಿದ್ದ ಚಾಲಕ ಕೀರ್ತಿರಾಜ್ ನನ್ನು ತಕ್ಷಣವೇ ಹುಣಸೂರು ಆಸ್ಪತ್ರೆಗೆ ದಾಖಲಿಸಿದರೂ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. ಇನ್ನೊಂದೆಡೆ ತೀವ್ರಗಾಯಗೊಂಡಿದ್ದ ಬೈಕ್ ಸವಾರ ರವಿಕುಮಾರ್ ಮೈಸೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದರು. ಉಳಿದ ಇಬ್ಬರು ಗಾಯಾಳುಗಳನ್ನು ಗ್ರಾಮಾಂತರ ಠಾಣೆ ಪೊಲೀಸರು ಮೈಸೂರಿನ ಆಸ್ಪತ್ರೆಗೆ ದಾಖಲಿಸಿದ್ದು, ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಸ್ಥಳಕ್ಕೆ ಡಿವೈಎಸ್‌ಪಿ ರವಿಪ್ರಸಾದ್, ಇನ್ಸ್ಪೆಕ್ಟರ್ ಚಿಕ್ಕಸ್ವಾಮಿ ಭೇಟಿ ನೀಡಿದ್ದಾರೆ.

Advertisement

ಆಸ್ಪತ್ರೆ ಬಳಿ ಜನವೋಜನ :
ಕೀರ್ತಿರಾಜ್ ಸಾವನ್ನಪ್ಪಿರುವ ವಿಷಯ ತಿಳಿಯುತ್ತಿದ್ದಂತೆ ಬನ್ನಿಕುಪ್ಪೆ ಗ್ರಾಮಸ್ಥರು, ಸ್ನೇಹಿತರು ಅಪಾರ ಸಂಖ್ಯೆಯಲ್ಲಿ ಜಮಾಯಿಸಿದ್ದರು. ಕೀರ್ತಿರಾಜ್ ನಿಧನಕ್ಕೆ ಶಾಸಕ ಎಚ್.ಪಿ.ಮಂಜುನಾಥ್, ಜಿ.ಪಂ.ಮಾಜಿ ಅಧ್ಯಕ್ಷೆ ಡಾ.ಪುಷ್ಪಅಮರ್‌ನಾಥ್, ತಾ.ಪಂ.ಮಾಜಿ ಸದಸ್ಯರಾದ ಕೆಂಗಯ್ಯ, ರವಿಪ್ರಸನ್ನ ಮತ್ತಿತರ ಗಣ್ಯರು ಸಂತಾಪ ಸೂಚಿಸಿದ್ದಾರೆ.
ಆಸ್ಪತ್ರೆಗೆ ಜಿಲ್ಲಾ ಪತ್ರಕರ್ತರ ಸಂಘದ ಅಧ್ಯಕ್ಷ ರವಿಕುಮಾರ್, ಪ್ರಧಾನಕಾರ್ಯದರ್ಶಿ ಸುಬ್ರಮಣ್ಯ, ಮಾಜಿ ಅಧ್ಯಕ್ಷ ಮಹೇಂದ್ರ, ಪತ್ರಕರ್ತರ ಅಭ್ಯದಯ ಸಹಕಾರಸಂಘದ ಅಧ್ಯಕ್ಷ ದೀಪಕ್, ಪತ್ರಕರ್ತ ಕಿರಣ್‌ಕುಮಾರ್ ತಾಲೂಕು ಪತ್ರಕರ್ತರ ಸಂಘದ ಅಧ್ಯಕ್ಷ ಕೃಷ್ಣಕುಮಾರ್ ಸೇರಿದಂತೆ ಎಲ್ಲ ಪತ್ರಕರ್ತ ಮಿತ್ರರು ಭೇಟಿ ನೀಡಿ ಕುಟುಂಬಕ್ಕೆ ಸಾಂತ್ವಾನ ಹೇಳಿದರು.

ಇದನ್ನೂ ಓದಿ : ಕೌಟುಂಬಿಕ ಕಲಹ : ಒಂದೂವರೆ ವರ್ಷದ ಮಗುವನ್ನು ಕೊಂದು, ನೇಣಿಗೆ ಶರಣಾದ ದಂಪತಿ

ಅಣ್ಣನ ಸಾವಿನಿಂದ ಆಘಾತಗೊಂಡ ತಂಗಿಯ ಸಾವು:

ಅಣ್ಣನ ಸಾವಿನಿಂದ ಕಂಗೆಟ್ಟಿದ್ದ ಸಹೋದರಿಯೂ ತೀವ್ರ ಅಸ್ಪಸ್ಥಗೊಂಡು ಆಸ್ಪತ್ರೆಯಲ್ಲಿ ಸಾವನ್ನಪ್ಪಿರುವ ಹೃದಯ ವಿದ್ರಾವಕ ಘಟನೆ ನಡೆಯಿತು. ಅಪಘಾತದಲ್ಲಿ ಅಣ್ಣ(ದೊಡ್ಡಪ್ಪನ ಮಗ) ಕೀರ್ತಿರಾಜ್ ಸಾವನ್ನಪ್ಪಿರುವ ವಿಷಯ ತಿಳಿದು ಮೈಸೂರಿನ ವಿಜಯನಗರದ ನಾಲ್ಕನೇ ಹಂತದ ಸರಕಾರಿ ಪದವಿ ಕಾಲೇಜಿನ ಎಂ.ಕಾಂ ವ್ಯಾಸಂಗ ಮಾಡುತ್ತಿದ್ದ ಮೃತ ಕೀರ್ತಿರಾಜನ ಚಿಕ್ಕಪ್ಪ ಮೂಲತಃ ಕೊಡಗಿನ ಪೊನ್ನಂಪೇಟೆಯ ಮಂಜುನಾಥ್-ರತ್ನರ ಪುತ್ರಿ ರಶ್ಮಿ(21) ಮೈಸೂರಿನಿಂದ ಬಸ್ಸಿನಲ್ಲಿ ಬಂದು ಬನ್ನಿಕುಪ್ಪೆಯಲ್ಲಿ ಇಳಿಯುತ್ತಿದ್ದಂತೆ ತೀವ್ರ ಅಸ್ಪಸ್ಥಗೊಂಡಿದ್ದಾರೆ. ತಕ್ಷಣವೇ ಹುಣಸೂರು ಆಸ್ಪತ್ರೆಗೆ ದಾಖಲಿಸಿ, ಚಿಕಿತ್ಸೆ ಕೊಡಿಸಿದರಾದರೂ ಫಲಕಾರಿಯಾಗದೆ ಮೃತಪಟ್ಟರು.

ಮೊದಲೇ ಕೀರ್ತಿರಾಜ್‌ನ ಸಾವಿನಿಂದ ಕಂಗೆಟ್ಟಿದ್ದ ಕುಟುಂಬಕ್ಕೆ ರಶ್ಮಿ ಸಾವು ಸಿಡಿಲು ಬಡಿದಂತಾಗಿತ್ತು. ಕುಟುಂಬದ ಈರ್ವರ ಸಾವಿನಿಂದ ಇಡೀ ಕುಟುಂಬ ಹಾಗೂ ಗ್ರಾಮಸ್ಥರಲ್ಲಿ ದುಃಖ ಮಡುಗಟ್ಟಿತ್ತು. ಸಂಜೆ ಈರ್ವರ ಅಂತ್ಯಕ್ರಿಯೆಯು ಬನ್ನಿಕುಪ್ಪೆಯಲ್ಲಿ ನಡೆಯಿತು.

Advertisement

Udayavani is now on Telegram. Click here to join our channel and stay updated with the latest news.

Next