ಬೆಂಗಳೂರು: ದ್ವಿಚಕ್ರ ವಾಹನದಿಂದ ಆಯ ತಪ್ಪಿ ರಸ್ತೆಗೆ ಬಿದ್ದ ಹಿಂಬದಿ ಸವಾರನ ಮೇಲೆ ನೀರಿನ ಟ್ಯಾಂಕರ್‌ನ ಚಕ್ರ ಹರಿದ ಪರಿಣಾಮ ಆತ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ರಾಜಾಜಿನಗರ ಸಂಚಾರ ಠಾಣೆ ವ್ಯಾಪ್ತಿಯ ರಿಂಗ್ ರಸ್ತೆಯ ಚೌಡೇಶ್ವರಿನಗರ ಜಂಕ್ಷನ್‌ನಲ್ಲಿ ಸೋಮವಾರ ಘಟನೆ ನಡೆದಿದೆ.
ಪಶ್ಚಿಮ ಬಂಗಾಳ ಮೂಲದ ರಾಹುಲ್ ಸಾಹೀಸ್ (19) ಮೃತ ಹಿಂಬದಿ ಸವಾರ.
ಈ ಸಂಬಂಧ ರಘು ಮತ್ತು ನೀರಿನ ಟ್ಯಾಂಕರ್ ವಾಹನ ಚಾಲಕ ಸಿದ್ದರಾಜುನನ್ನು ಬಂಧಿಸಲಾಗಿದೆ. ದ್ವಿಚಕ್ರ ವಾಹನ ಸವಾರ ರಘು ಟೈಲ್ಸ್ ಕೆಲಸ ಮಾಡಿಸುವ ಮೇಸ್ತ್ರಿ ಆಗಿದ್ದಾನೆ. ಹಿಂಬದಿ ಸವಾರ ಟೈಲ್ಸ್ ಕೆಲಸಗಾರನಾ ಗಿದ್ದಾನೆ. ದ್ವಿಚಕ್ರ ವಾಹನದಲ್ಲಿ ಇಬ್ಬರು ಹೆಬ್ಟಾಳ ಕಡೆ ಯಿಂದ ರಾಜರಾಜೇಶ್ವರಿನಗರ ಕಡೆಗೆ ಹೋಗುತ್ತಿದ್ದು, ಮಧ್ಯಾಹ್ನ ಮಾರ್ಗ ಮಧ್ಯೆ ಚೌಡೇಶ್ವರಿನಗರ ಜಂಕ್ಷನ್‌ನಲ್ಲಿ ಹೋಗುವಾಗ ಚಕ್ರ ಸ್ಕಿಡ್ ಆಗಿ ಸವಾರರಿಬ್ಬರೂ ರಸ್ತೆಗೆ ಬಿದ್ದಿದ್ದಾರೆ. ಈ ವೇಳೆ ರಸ್ತೆಯ ಎಡ ಭಾಗಕ್ಕೆ ಬಿದ್ದ ರಾಹುಲ್ ಮೇಲೆ ಹಿಂದಿನಿಂದ ಬರುತ್ತಿದ್ದ ನೀರಿನ ಟ್ಯಾಂಕರ್ ವಾಹನದ ಚಕ್ರ ಉರುಳಿದೆ. ಹೀಗಾಗಿ ಆತ ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಬಲಭಾಗಕ್ಕೆ ಬಿದ್ದ ಸವಾರ ರಘುಗೆ ಸಣ್ಣಪುಟ್ಟ ಗಾಯಗಳೊಂದಿಗೆ ಪ್ರಾಣಾಪಾಯದಿಂದ ಪಾರಾಗಿ ದ್ದಾನೆ ಎಂದು ಸಂಚಾರ ಪೊಲೀಸರು ಹೇಳಿದರು.
ಡ್ರಂಕ್ ಆ್ಯಂಡ್ ಡ್ರೈವ್: ಟೈಲ್ಸ್ ಮೇಸ್ತ್ರಿ ರಘು ಬೆಳಗ್ಗೆಯೇ ಮದ್ಯ ಸೇವಿಸಿ ದ್ವಿಚಕ್ರ ವಾಹನ ಚಲಾಯಿಸಿದ್ದಾನೆ. ವೈದ್ಯಕೀಯ ಪರೀಕ್ಷೆಯಲ್ಲಿ ಆತ ಮದ್ಯ ಸೇವಿಸಿರುವುದು ದೃಢಪಟ್ಟಿದೆ. ಮೃತ ಹಿಂಬದಿ ಸವಾರ ರಾಹುಲ್ ಮದ್ಯ ಸೇವಿಸಿರಲಿಲ್ಲ. ಕುಡಿದು ವಾಹನ ಚಾಲನೆ ಮಾಡಿದ ಆರೋಪದಡಿ ರಘು ವಿರುದ್ಧ ಪ್ರಕರಣ ದಾಖಲಿಸಿ ಬಂಧಿಸಲಾಗಿದೆ. ಹಾಗೆಯೇ ನೀರಿನ ಟ್ಯಾಂಕರ್ ಚಾಲಕ ಸಿದ್ದರಾಜುನನ್ನು ಬಂಧಿಸಲಾಗಿದೆ. ಎಂದು ಸಂಚಾರ ಪೊಲೀಸರು ಹೇಳಿದರು. ಈ ಸಂಬಂಧ ರಾಜಾಜಿನಗರ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.