ಉಪ್ಪಿನಂಗಡಿ : ಪುತ್ತೂರಿನಿಂದ ತಂಡವಾಗಿ ಬೈಕ್ ರೈಡಿಂಗ್ ಗೆ ತೆರಳಿದ ತಂಡ ಸರಣಿ ಅಪಘಾತಕ್ಕೆ ತುತ್ತಾಗಿ ಒಬ್ಬರು ಮೃತಪಟ್ಟು ಇನ್ನಿಬ್ಬರು ಗಂಭೀರವಾಗಿ ಗಾಯಗೊಂಡ ಘಟನೆ ನೆಲ್ಯಾಡಿ ಸಮೀಪದ ಎಂಜಿರ ಬಳಿ ರಾಷ್ಟ್ರೀಯ ಹೆದ್ದಾರಿ -75ರಲ್ಲಿ ಸೆ. 6 ರಂದು ಮಧ್ಯಾಹ್ನ ನಡೆದಿದೆ. ಮೃತ ಯುವಕನನ್ನು ಪುತ್ತೂರಿನ ಕೌಡಿಚ್ಚಾರ್ ಸಿಆರ್ ಸಿ ಕಾಲೋನಿ ನಿವಾಸಿ ಮನೋಜ್ ಎಂದು ಗುರುತಿಸಲಾಗಿದೆ.
ಮೊದಲ ಅಪಘಾತದಲ್ಲಿ ಬೈಕ್ ಕಂಟೈನರ್ ವಾಹನಕ್ಕೆ ಡಿಕ್ಕಿ ಹೊಡೆದರೆ, ಅದೇ ತಂಡದ ಇನ್ನೊಂದು ಬೈಕ್ ಸ್ಕಿಡ್ ಆಗಿ ಅಪಘಾತಗೊಂಡು ಇಬ್ಬರು ಗಂಭೀರವಾಗಿ ಗಾಯಗೊಂಡಿರುವುದಾಗಿ ವರದಿಯಾಗಿದೆ.
ಇಂದು ಬೆಳಗ್ಗೆ 11.30 ರ ಸುಮಾರಿಗೆ ಪುತ್ತೂರಿನಿಂದ 8 ಬೈಕುಗಳಲ್ಲಿ ತಂಡವೊಂದು ಬೈಕ್ ರೈಡಿಂಗ್ ಹೊರಟಿದೆ. ಅವುಗಳ ಪೈಕಿ ಕೆಟಿಎಂ ಬೈಕೊಂದು ಮಂಗಳೂರು ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಕಡಬ ತಾಲೂಕಿನ ಎಂಜಿರ ಸಮೀಪ ತೆರಳುತ್ತಿದ್ದ ವೇಳೆ ಬೆಂಗಳೂರು ಕಡೆಯಿಂದ ಹೊಸ ವಾಹನಗಳನ್ನು ತುಂಬಿಕೊಂಡು ಬರುತ್ತಿದ್ದ ಕಂಟೈನರ್ ವಾಹನಕ್ಕೆ ಡಿಕ್ಕಿ ಹೊಡೆದಿದೆ. ರಸ್ತೆಗೆ ಎಸೆಯಲ್ಪಟ್ಟ ಸವಾರ ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಇದನ್ನೂ ಓದಿ :ಇನ್ನು ಸರಕಾರವೇ ರೈತರ ಮನೆ ಬಾಗಿಲಿಗೆ ಬರಲಿದೆ: ಬಿ.ಸಿ.ಪಾಟೀಲ್
ವೇಗದ ಚಾಲನೆಯಿಂದಾಗಿ ಅಪಘಾತವಾಗಿದ್ದು ಬೈಕಿನಿಂದ ರಸ್ತೆಗೆ ಎಸೆಯಲ್ಪಟ್ಟ ಯುವಕನ ಮೈ ಮೇಲೆ ಕಂಟೇನರ್ ಲಾರಿ ಹರಿದು ಯುವಕ ಸ್ಥಳದಲ್ಲೇ ಮೃತಪಟ್ಟಿದ್ದಾನೆ ಎನ್ನಲಾಗಿದೆ.
ಮತ್ತೊಂದು ಅಪಘಾತ:
ಅಪಘಾತದ ವಿಷಯ ಮುಂದೆ ಹೋಗುತ್ತಿದ್ದ ಈತನ ತಂಡದ ಸದಸ್ಯರಿಗೆ ತಿಳಿಯುತ್ತಿದ್ದಂತೆ, ಗುಂಡ್ಯ ಕಡೆಯಿಂದ ತಂಡವು ಹಿಂತಿರುಗಿ ಬಂದಿದೆ. ಹೀಗೆ ಬರುತ್ತಿರುವಾಗ ತಂಡದ ಸದಸ್ಯನೊಬ್ಬ ಚಲಾಯಿಸುತ್ತಿದ್ದ ಇನ್ನೊಂದು ಬೈಕ್ ಕೂಡ ಅಪಘಾತಕ್ಕೀಡಾಗಿ ಅದರಲ್ಲಿ ಸಂಚರಿಸುತ್ತಿದ್ದ ಸಹಸವಾರನಿಗೂ ಗಂಭೀರ ಗಾಯಗಳಾಗಿವೆ.
ಆರಂಭದಲ್ಲೇ ವಿಘ್ನದ ಸುಳಿವು :
ಬೈಕ್ ರೈಡಿಂಗ್ ತೆರಳುವ ಮುನ್ನವೇ ತಂಡಕ್ಕೆ ವಿಘ್ನದ ಸುಳಿವು ದೊರೆತಿತ್ತು ಎಂದು ಸ್ಥಳೀಯರು ತಿಳಿಸಿದ್ದಾರೆ. ರೈಡಿಂಗ್ ಹೊರಡುವ ಮೊದಲು ನಿಲ್ಲಿಸಿದ್ದ ಮೂರು ಬೈಕ್‌ಗಳು ಒಮ್ಮೆಲೆ ಇದ್ದಕ್ಕಿದ್ದಂತೆ ಮಗುಚಿ ಬಿದ್ದಿವೆ. ಇದನ್ನು ಕಂಡ ಕೆಲವರು ಇದು ಕೆಟ್ಟ ಶಕುನ ಎಂದು ಹೇಳಿಕೊಂಡಿದ್ದರು ಎನ್ನಲಾಗಿದೆ.