ತಿಪಟೂರು: ನಗರ ಅಭಿವೃದ್ಧಿಯತ್ತ ಸಾಗುತ್ತಿದ್ದರೂ ಮೂಲಸೌಲಭ್ಯಗಳಲ್ಲಿ ಒಂದಾದ ರಸ್ತೆಗಳ ಅಭಿವೃದ್ಧಿ ಆಮೆವೇಗದಲ್ಲಿ ಸಾಗುತ್ತಿದ್ದು, ಇದರಿಂದ ನಗರದ ಬೆಳವಣಿಗೆಗೆ ಕಪ್ಪುಚುಕ್ಕೆ ಇಟ್ಟಂತಾಗಿದೆ. ತಿಪಟೂರು ಜಿಲ್ಲೆಯಾಗುವ ಎಲ್ಲಾ ಲಕ್ಷಣಗಳಿದ್ದರೂ ನಗರದ ಯಾವ ಬಡಾವಣೆಗಳಲ್ಲೂ ಉತ್ತಮ ರಸ್ತೆಗಳಿಲ್ಲದೆ ನಾಗರಿಕರು ಪರದಾಡುವ ಪರಿಸ್ಥಿತಿ ಇದೆ.
ನಗರದ ಎಲ್ಲಾ ಬಡಾವಣೆಗಳ ರಸ್ತೆಗಳನ್ನು ಯುಜಿಡಿ ಕಾಮಗಾರಿ ಹಾಗೂ ಕುಡಿಯುವ ನೀರಿನ ಪೈಪ್‌ಲೈನ್‌ಗಳಿಗೆ ಮನಸೋ ಇಚ್ಛೆ ಅಗೆದು ಕಾಮಗಾರಿ ಮಾಡಿರುವುದರಿಂದ ಸಾಕಷ್ಟು ಗುಂಡಿಗಳು ಬಿದ್ದಿದ್ದು, ಪ್ರತಿನಿತ್ಯ ಒಂದಲ್ಲೊಂದು ಅವಘಡಗಳು ಸಂಭವಿಸುತ್ತಿವೆ. ನಗರದ ಎಲ್ಲ ಬಡಾವಣೆಯ ರಸ್ತೆಗಳೂ ಸರಿಯಾಗಿಲ್ಲದಿರುವುದರಿಂದ ವಾಹನ ಸವಾರರಂತೂ ಸರ್ಕಸ್ ಮಾಡಿಕೊಂಡು ಸಂಚರಿಸುವಂತಾಗಿದೆ. ಈ ಬಗ್ಗೆ ತಾಲೂಕು ಆಡಳಿತ, ನಗರಸಭೆ ಕ್ಯಾರೇ ಎನ್ನದೆ ಜಾಣ ಕುರುಡು ಪ್ರದರ್ಶಿಸುತ್ತಿರುವುದು ಪ್ರಜ್ಞಾವಂತರ ಆಕ್ರೋಶಕ್ಕೆ ಕಾರಣವಾಗಿದೆ.
ಹಾಳಾಗಿರುವ ರಸ್ತೆಗಳು: ನಗರದಲ್ಲಿ ಕಳೆದ ಒಂದೆಡರಡು ವರ್ಷದಿಂದ ಯುಜಿಡಿ ಕಾಮಗಾರಿ ನಡೆಯುತ್ತಿದ್ದು, ಕೆಲವೆಡೆ ಮುಗಿದಿದ್ದರೂ ರಸ್ತೆಗಳು ಮಾತ್ರ ಕೊಚ್ಚೆ ಗುಂಡಿಯಾಗಿವೆ. ರಸ್ತೆ ಮಧ್ಯ ಪೈಪ್ ಹೂಳಲು ಮತ್ತು ಮ್ಯಾನ್ ಹೋಲ್ ಮಾಡಲು ರಸ್ತೆ ಅಗೆದು ಹಾಳು ಮಾಡಲಾಗಿದೆ. ಹೀಗೆ ಅಗೆದಿರುವ ರಸ್ತೆ ಹಾಗೇ ಬಿಟ್ಟಿರುವುದರಿಂದ ಮಳೆ ನೀರು ನಿಂತು ರಸ್ತೆ ಯಾವುದು ಗುಂಡಿ ಯಾವುದೆಂದು ಗೊತ್ತಾಗದ ಪರಿಸ್ಥಿತಿ ಇದೆ. ಕೆಲವೊಮ್ಮೆ ಬಿದ್ದು ಗಾಯಗೊಂಡಿರುವ ನಿದರ್ಶನವಿದೆ. ನಗರದ ವಿದ್ಯಾನಗರ, ಕಂಚಾಘಟ್ಟ, ಸ್ಟೆಲ್ಲಾ ಮೇರೀಸ್ ರಸ್ತೆ, ಹೈಟೆನ್ಷನ್‌ಲೈನ್ ರಸ್ತೆ, ಗೋವಿನಪುರ, ಹಳೇಪಾಳ್ಯ, ಗಾಂಧೀನಗರ, ಎಪಿಎಂಸಿ ರಸ್ತೆ, ಚಾಮುಂಡೇಶ್ವರಿ ಬಡಾವಣೆ ಸೇರಿ ನಗರದ ಎಲ್ಲಾ ಬಡಾವಣೆಗಳಲ್ಲಿಯೂ ಇದೇ ಗೋಳಾಗಿದ್ದು, ರಸ್ತೆಗಳು ಮಳೆಗೆ ಕೆಸರು ಗದ್ದೆಯಂತಾಗಿವೆ. ರಸ್ತೆಗಳು ಸಮತಟ್ಟಾಗಿಲ್ಲದ ಕಾರಣ ಹಗಲೇ ಓಡಾಡಲು ಸಾಧ್ಯವಾಗುತ್ತಿಲ್ಲ. ಇನ್ನು ರಾತ್ರಿ ರಸ್ತೆ ಯಾವುದು, ಗುಂಡಿ ಯಾವುದು ಎಂಬುದೇ ಗೊತ್ತಾಗದಂತಾಗಿದೆ. ಇನ್ನು ಅಗೆದಿರುವ ಮಣ್ಣು ಒಂದು ರೀತಿಯ ಜೇಡಿಮಣ್ಣಿನಂತಿದ್ದು ಸೋನೆ ಮಳೆ ಬಂದರೂ ವಾಹನಗಳ ಚಕ್ರಕ್ಕೆ ಸುತ್ತಿಕೊಂಡು ಜಾರುತ್ತಿರುವುದರಿಂದ ಸಾಕಷ್ಟು ಜನರು ಗಂಭೀರ ಗಾಯಗೊಂಡಿದ್ದಾರೆ. ನಡೆದುಕೊಂಡು ಹೋಗಲೂ ಕಷ್ಟವಾಗಿದ್ದು, ಜನರ ಗೋಳು ಕೇಳುವವರಿಲ್ಲದಂತಾಗಿದೆ.
ಎಚ್ಚೆತ್ತುಕೊಳ್ಳದ ಅಧಿಕಾರಿಗಳು: ರಸ್ತೆ ದುರಸ್ತಿ ಮಾಡಿಸಿ ಎಂದು ಜನರು ಪ್ರತಿಭಟನೆ, ಹೋರಾಟ ಮಾಡಿದರೂ ಎಚ್ಚೆತ್ತುಕೊಳ್ಳದ ನಗರಸಭೆ ಹಾಗೂ ಯುಜಿಡಿ ಅಧಿಕಾರಿಗಳು ಅಧಿಕಾರಿಗಳು ಮನವಿ ಕಸದಬುಟ್ಟಿಗೆ ಬಿಸಾಕಿ, ಜನರ ಜೀವದ ಜೊತೆ ಚೆಲ್ಲಾಟವಾಡುತ್ತಿದ್ದಾರೆ. ಒಟ್ಟಾರೆ ಸರ್ಕಾರ ರಸ್ತೆ ದುರಸ್ತಿಗೆ ನೂರಾರು ಕೋಟಿ ರೂ. ಬಿಡುಗಡೆ ಮಾಡಿದ್ದರೂ, ಜನಸಮಾನ್ಯರು ಕೋಟ್ಯಂತರ ರೂ. ತೆರಿಗೆ ಕಟ್ಟಿದ್ದರೂ ನಗರದಲ್ಲಿ ಉತ್ತಮ ಗುಣಮಟ್ಟದ ರಸ್ತೆ ನಿರ್ಮಿಸುವಲ್ಲಿ ಅಧಿಕಾರಿಗಳು ವಿಫಲರಾಗಿದ್ದಾರೆ. ಈಗಾಲಾದರೂ ನಗರಸಭೆ ಯುಜಿಡಿ ಕಾಮಗಾರಿಯಿಂದ ಹಾಳಾಗಿರುವ ರಸ್ತೆ ದುರಸ್ತಿಗೊಳಿಸಿ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಬೇಕು.
● ಬಿ. ರಂಗಸ್ವಾಮಿ, ತಿಪಟೂರು