Advertisement

ರಸ್ತೆ ಸುಧಾರಣೆಯಿಂದ ಬಸ್‌ ಸಂಚಾರಕ್ಕೆ ಅನುಕೂಲ

10:08 AM Jan 02, 2018 | Team Udayavani |

ಚಿಂಚೋಳಿ: ತಾಲೂಕಿನ ಎಲ್ಲ ಗ್ರಾಮ ಮತ್ತು ತಾಂಡಾಗಳಿಗೆ ಎಚ್‌ಕೆಆರ್‌ಡಿಬಿ ಮತ್ತು ನಬಾರ್ಡ್‌ ಯೋಜನೆ ಹಾಗೂ ಪ್ರಧಾನ ಮಂತ್ರಿ ಗ್ರಾಮೀಣ ಸಡಕ್‌ ಯೋಜನೆಗಳಲ್ಲಿ ರಸ್ತೆ ಸುಧಾರಣೆ ಮಾಡಿದ್ದರಿಂದ ಬಸ್‌ ಸಂಚಾರಕ್ಕೆ ಅನುಕೂಲವಾಗುತ್ತಿದೆ ಎಂದು ಸಂಸದೀಯ ಕಾರ್ಯದರ್ಶಿ ಡಾ| ಉಮೇಶ ಜಾಧವ ಹೇಳಿದರು.

Advertisement

ತಾಲೂಕಿನ ಕೋಡ್ಲಿ ಗ್ರಾಮದಲ್ಲಿ ಸೋಮವಾರ ನೂತನ ವರ್ಷದ ಸಂಭ್ರಮಾಚರಣೆ ಅಂಗವಾಗಿ ಕಾಳಗಿ-ಕೋಡ್ಲಿ -ಕಾಳಗಿ ಸಿಟಿಬಸ್‌ ಸಂಚಾರಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ಕಳೆದ ಬಿಜೆಪಿ ಸರಕಾರದಲ್ಲಿ ರಸ್ತೆಗಳು ಹದಗೆಟ್ಟು ಹೋಗಿದ್ದರಿಂದ ಬಸ್‌ ಸಂಚಾರಕ್ಕೆ ಹಾಗೂ ಪ್ರಯಾಣಿಕರು ಬಹಳಷ್ಟು ತೊಂದರೆ ಪಡಬೇಕಾಗಿತ್ತು. ಆದರೆ ನಮ್ಮ ಕಾಂಗ್ರೆಸ್‌ ಪಕ್ಷ ಅಧಿಕಾರಕ್ಕೆ ಬಂದ ನಂತರ ಚಿಂಚೋಳಿ-ಸೇಡಂ, ಚಿಂಚೋಳಿ-ಐನಾಪುರ, ಚಿಂಚೋಳಿ-ಮನ್ನಾಎಕ್ಕೆಳ್ಳಿ, ಚಿಂಚೋಳಿ-ಕಲಬುರಗಿ ರಸ್ತೆಗಳು ಉತ್ತಮವಾಗಿ ಸುಧಾರಣೆಯಾಗಿದ್ದರಿಂದ ಎಲ್ಲ ವಾಹನಗಳ ಸುಗಮ ಸಂಚಾರಕ್ಕೆ ಅನುಕೂಲವಾಗಿದೆ ಎಂದು ಹೇಳಿದರು.

ಚಿಂಚೋಳಿ-ಐನೋಳಿ-ದೇಗಲಮಡಿ ರಾಷ್ಟ್ರೀಯ ಹೆದ್ದಾರಿ ನಿರ್ಮಾಣ ಪ್ರಗತಿಯಲ್ಲಿದೆ. ಈ ರಸ್ತೆ ನಿರ್ಮಾಣದಿಂದಾಗಿ
ತೆಲಂಗಾಣ,ಆಂಧ್ರಪ್ರದೇಶ ರಾಜ್ಯಗಳಿಗೆ ರಸ್ತೆ ಸಂಪರ್ಕ ಆಗಲಿದೆ. ಚಿಮ್ಮನಚೋಡ-ಸಲಗರ ಬಸಂತಪುರ ರಾಜ್ಯ ಹೆದ್ದಾರಿ, ಕೋಡ್ಲಿ-ರುಮ್ಮನಗೂಡ, ರಾಣಾಪುರ ರಸ್ತೆಗಳು ಸುಧಾರಣೆಯಾಗಿದ್ದರಿಂದ ಈಗ ಬಸ್‌ ಕೆಟ್ಟು ನಿಲ್ಲುತ್ತಿಲ್ಲ ಎಂದು ಸಂತಸ ವ್ಯಕ್ತಪಡಿಸಿದರು. 

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹಿಂದುಳಿದ ಪ್ರದೇಶದ ಅಭಿವೃದ್ಧಿಗಾಗಿ ಹೆಚ್ಚಿನ ಅನುದಾನ ನೀಡಿದ್ದಾರೆ. ಕಾಂಗ್ರೆಸ್‌
ಪಕ್ಷಯಾವಾಗಲೂ ಬಡವರ ಮತ್ತು ದೀನ ದಲಿತರ ಹಾಗೂ ಅಲ್ಪಸಂಖ್ಯಾತರ ಕಲ್ಯಾಣಕ್ಕಾಗಿ ಅನೇಕ ಜನಪರ ಯೋಜನೆ ಜಾರಿಗೆ ತಂದಿದೆ. ಅವುಗಳಿಗೆ ಕಾಂಗ್ರೆಸ್‌ ಪಕ್ಷದ ಕಾರ್ಯಕರ್ತರು ಹೆಚ್ಚಿನ ಪ್ರಚಾರ ಕೊಡಿಸಬೇಕು ಎಂದು ಸಲಹೆ ನೀಡಿದರು.

Advertisement

ಚಿಂಚೋಳಿ ಬ್ಲಾಕ್‌ ಕಾಂಗ್ರೆಸ್‌ ಕಮಿಟಿ ಅಧ್ಯಕ್ಷ ಅನೀಲಕುಮಾರ ಜಮಾದಾರ, ಅಣವೀರಯ್ಯ ಸ್ವಾಮಿ, ಗ್ರಾಪಂ ಅಧ್ಯಕ್ಷೆ ಮಂಜುಳಾ ಕೆಳಗಿನದೊಡ್ಡಿ, ಜಿಪಂ ಮಾಜಿ ಸದಸ್ಯರಾದ ಶಬ್ಬೀರಮಿಯ್ನಾ ಸೌದಾಗರ, ದೇವಲಾ ನಾಯಕ, ಬಸವರಾಜ ಕೋಲಕುಂದಿ, ಅಲೀಮ ನಾಯಕೋಡಿ, ಮಾರುತಿ ಜಮಾದಾರ ಅಲ್ಲದೇ ಸಾರಿಗೆ ಸಂಸ್ಥೆ ಸಿಬ್ಬಂದಿಗಳು ಭಾಗವಹಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next