Advertisement
ನಗರದಲ್ಲಿ ಮಂಗಳವಾರ ಬೆಳಗ್ಗೆ ಮಳೆಯ ರೌದ್ರ ನರ್ತನ ಶುರುವಾದಾಗಲೇ ‘ಸುದಿನ’ ತಂಡವು ನಗರದಲ್ಲಿ ಮಳೆಯ ಪರಿಸ್ಥಿತಿಯ ಅವಲೋಕನಕ್ಕೆ ಮುಂದಾಗಿತ್ತು. ನಮ್ಮ ತಂಡವು, ಮಳೆಯ ನಡುವೆ ನಗರ ಜನತೆ ಅಕ್ಷರಶಃ ಎದುರಿಸುತ್ತಿದ್ದ ಸಂಕಷ್ಟವನ್ನು ಕಣ್ಣಾರೆ ನೋಡುವ ಮೂಲಕ ನೈಜ ವರದಿ ಪ್ರಕಟಿಸುವುದು ಆ ಮೂಲಕ ಸ್ಥಳೀಯ ಅಥವಾ ಜಿಲ್ಲಾಡಳಿತದ ಕಣ್ಣು ತೆರೆಸುವುದು ನಮ್ಮ ಆಶಯವಾಗಿತ್ತು. ಈ ಕಾರಣದಿಂದಲೇ ಬೆಳಗ್ಗೆ 11 ಗಂಟೆಯಿಂದ ಸಂಜೆ ವರೆಗೆ ಜಲಾವೃತ್ತಗೊಂಡಿದ್ದ ನಗರದ ಬಹುತೇಕ ಕಡೆಗಳಲ್ಲಿ ಸಂಚರಿಸಿ ಆ ಭಾಗದ ಜನರ ಸಂಕಷ್ಟದ ನಿಜ ದರ್ಶನ ಮಾಡುವ ಪ್ರಯತ್ನ ಮಾಡಲಾಯಿತು. ಕೆಲವು ಕಡೆ ಸೊಂಟದವರೆಗೆ ನೀರು ನಿಂತಿದ್ದರೂ ಅಲ್ಲಿಯೂ ಜನರ ಅಳಲು ಕೇಳಿ ಅದಕ್ಕೆ ಸ್ಪಂದಿಸುವ ಪ್ರಯತ್ನ ಮಾಡಲಾಯಿತು. ಈ ರೀತಿ ಸುದಿನ ಕಣ್ಣಾರೆ ನೋಡಿದ ಸನ್ನಿವೇಶ ಇದು.
Related Articles
ನಗರದ ಸೂಟರ್‌ಪೇಟೆ ವ್ಯಾಪ್ತಿಯಲ್ಲಿ ಜಲರಾಶಿಯ ಮಧ್ಯೆ ರಸ್ತೆ ಯಾವುದು ಎಂದು ಹುಡುಕಾಡುವ ಪರಿಸ್ಥಿತಿ ನಿರ್ಮಾಣವಾಯಿತು. ಮನೆ ಅಂಗಡಿಗಳಿಗೆ ನೀರು ನುಗ್ಗಿದ ಪರಿಸ್ಥಿತಿ ಒಂದೆಡೆಯಾದರೆ, ದ್ವಿಚಕ್ರ ವಾಹನಗಳು ನೀರಿನಲ್ಲಿ ಮುಳುಗಿದ ದೃಶ್ಯಗಳು ಇಲ್ಲಿ ಕಣ್ಣಿಗೆ ರಾಚುತ್ತಿತ್ತು. ತಮ್ಮ ವಾಹನವು ನೀರಲ್ಲಿ ತೇಲಾಡುವಾಗ, ಅದನ್ನು ಕೈಯಲ್ಲಿ ಹಿಡಿದು ನಿಲ್ಲಿಸುವ ಕುರಿತು ವಾಹನ ಮಾಲಕರ ಆತಂಕ ನಿಜಕ್ಕೂ ದಂಗುಬಡಿಸುವಂತಿತ್ತು.
Advertisement
ಸಹಾಯಕ್ಕೆ ಧಾವಿಸಿದ ಯುವಕರ ಪಡೆಮಂಗಳೂರಿನಲ್ಲಿ ಮಳೆಯ ತೀವ್ರತೆ ಉಲ್ಬಣಗೊಳ್ಳುತ್ತಿದ್ದಂತೆ ಆಯಾಯ ವ್ಯಾಪ್ತಿಯಲ್ಲಿ ಸ್ಥಳೀಯ ಯುವಕರ ತಂಡ ಪರಿಸ್ಥಿತಿ ನಿಭಾಯಿಸುವ ನಿಟ್ಟಿನಲ್ಲಿ ಕೈ ಜೋಡಿಸಿರುವುದು ಉಲ್ಲೇಖನೀಯ. ಸಂಕಷ್ಟ ಎದುರಿಸಿದ ಜನರಿಗೆ ಸ್ಥಳೀಯ ಸಂಘಟನೆಯ ಸ್ವಯಂಸೇವಕರ ಪಡೆ ಸಹಾಯ ಮಾಡಿದರು. ಬಿಜೆಪಿ, ಆರ್ ಎಸ್‌ಎಸ್, ವಿಶ್ವಹಿಂದೂ ಪರಿಷತ್ ಹಾಗೂ ಬಜರಂಗದಳದ ಕಾರ್ಯಕರ್ತರು ಕೂಡ ಈ ಕಾರ್ಯದಲ್ಲಿ ಕೈಜೋಡಿಸಿದ್ದಾರೆ. ವಾಹನದ ಎಂಜಿನ್‌ಗೆ ನುಗ್ಗಿತು ನೀರು; ವಾಹನ ಬಾಕಿ!
ಬಹುತೇಕ ಮಂಗಳೂರಿನ ರಸ್ತೆಯಲ್ಲಿ ನೀರು ನಿಂತು ವಾಹನ ಸಂಚಾರಕ್ಕೆ ಸಂಕಷ್ಟ ಪರಿಸ್ಥಿತಿ ಉಂಟಾಯಿತು. ಕುದ್ರೋಳಿ, ಕೊಟ್ಟಾರ, ಬಿಜೈ ವ್ಯಾಪ್ತಿಯಲ್ಲಿ ಅರ್ಧ ನೀರಿನಲ್ಲಿ ವಾಹನಗಳ ಸಂಚಾರಕ್ಕೆ ಪ್ರಯತ್ನಿಸುತ್ತಿದ್ದಂತೆ ವಾಹನದ ಎಂಜಿನ್ ಗೆ ನೀರು ಹೊಕ್ಕು, ವಾಹನ ಅರ್ಧದಲ್ಲಿ ಬಂದ್ ಆದ ಘಟನೆ ಸಂಭವಿಸಿತು. ಬಳಿಕ ಆ ವಾಹನವನ್ನು ಸ್ಟಾರ್ಟ್ ಮಾಡುವ ತಾಸುಗಟ್ಟಲೆ ಪರದಾಡಬೇಕಾಯಿತು. ಈ ಮಧ್ಯೆ ಕೆಲವು ವಾಹನಗಳು ನೀರಲ್ಲಿಯೇ ತೊಯ್ದ ಕಾರಣದಿಂದ ಸಂಜೆಯವರೆಗೂ ವಾಹನ ಸ್ಟಾರ್ಟ್ ಆಗಲು ಕೇಳಲಿಲ್ಲ! ಅಂದಹಾಗೆ, ಡೊಂಗರಕೇರಿ ವಾರ್ಡ್ ಗೆ ಸಂಬಂಧಪಟ್ಟ ಮಣ್ಣಗುಡ್ಡ ದುರ್ಗಾ ಮಹಲ್‌ನಿಂದ ಕಾರ್‌ಸ್ಟ್ರೀಟ್‌ವರೆಗೆ 11 ಕೋಟಿ ರೂ. ವೆಚ್ಚದಲ್ಲಿ ಕಾಂಕ್ರೀಟ್ ರಸ್ತೆ ಕಾಮಗಾರಿ ಕೈಗೆತ್ತಿಕೊಳ್ಳಲಾಗಿದ್ದು, ಇದರಲ್ಲಿ ಬಹುತೇಕ ಭಾಗದ ಕೆಲಸ ಪೂರ್ಣಗೊಂಡಿದೆ. ಇದೇ ಅನುದಾನದಲ್ಲಿ ಅಳಕೆ ಸೇತುವೆಯೂ ನಿರ್ಮಾಣವಾಗುತ್ತಿದೆ. ರಸ್ತೆ ನಿರ್ಮಾಣಕ್ಕೆ ಯೋಜನೆ ಮಾಡಿದಾಗ ಅಳಕೆ ಸೇತುವೆ ಪಿಲ್ಲರ್ ಹಾಕಿ ನಿರ್ಮಿಸಲು ನಕ್ಷೆ ರಚಿಸಲಾಗಿತ್ತು. 10.5 ಮೀ.ಗಿಂತ ಹೆಚ್ಚು ಉದ್ದ ಇದ್ದರೆ ಪಿಲ್ಲರ್ ಹಾಕಿಯೇ ನಿರ್ಮಿಸಬೇಕಿದೆ. ಈಗ ಸೇತುವೆ 13
ಮೀ. ಉದ್ದ ಇದೆ. ಆದ್ದರಿಂದ ಎನ್ ಐಟಿಕೆ ತಜ್ಞರಿಂದ ಹೊಸ ನಕ್ಷೆ ತಯಾರಿಸಿ ಸರಕಾರದಿಂದ ಅನುಮೋದನೆ ಪಡೆದು ಕಾಮಗಾರಿ ಕೈಗೆತ್ತಿಕೊಳ್ಳಲಾಗಿದೆ. ಈ ಸೇತುವೆ ಕಾಮಗಾರಿ ನಡೆಯುತ್ತಿದೆ. ಇದೀಗ ಮಳೆಯ ತೀವೃತೆಯಿಂದಾಗಿ ಇಲ್ಲಿ ನೀರು ತುಂಬಿ ಹರಿದ ಪರಿಣಾಮ ವಾಹನ ಸಂಚಾರ ತಡೆಹಿಡಿಯಲಾಗಿತ್ತು. ಅಳಕೆ-ಕುದ್ರೋಳಿಯನ್ನು ಮುಳುಗಿಸಿದ ಬ್ರಿಡ್ಜ್
ಅಳಕೆಯಲ್ಲಿ ಬ್ರಿಡ್ಜ್ ಕಾಮಗಾರಿಯ ಹಿನ್ನೆಲೆಯಲ್ಲಿ ಮಳೆ ನೀರು ಸರಾಗವಾಗಿ ಹರಿಯಲು ಸಾಧ್ಯವಾಗದೆ ಸಮೀಪದ ಬೀದಿ-ಓಣಿ-ಮನೆ-ಅಂಗಡಿಗಳಿಗೆ ಮಳೆ ನೀರು ನುಗ್ಗುವ ಪರಿಸ್ಥಿತಿ ನಿರ್ಮಾಣವಾಯಿತು. ತೋಡಿನಲ್ಲಿ ಭಾರೀ ಪ್ರಮಾಣದಲ್ಲಿ ಮಳೆ ನೀರು ಹರಿಯುತ್ತ ಬರುವಾಗ ಬ್ರಿಡ್ಜ್ ಸಮೀಪದಲ್ಲಿ ಅಡ್ಡಲಾಗಿ ಕೆಲವು ತಡೆ ಉಂಟಾದ ಕಾರಣದಿಮದ ನೀರು ಸರಾಗವಾಗಿ ಹರಿಯಲು ಸಾಧ್ಯವಾಗಲಿಲ್ಲ. ಹೀಗಾಗಿ ನೇರವಾಗಿ ನೀರು ಸಮೀಪದ ಪ್ರದೇಶಕ್ಕೆ ಹರಿಯಲು ಆರಂಭಿಸಿತು. ಸಮೀಪದ ಭೋಜರಾಜ್ ಲೈನ್‌ನ ರಸ್ತೆಯಲ್ಲಿಯೂ ನೀರು ಹರಿದು, ಇಕ್ಕೆಲಗಳಲ್ಲಿದ್ದ ಮನೆ-ಅಂಗಡಿಗಳಿಗೆ ನೀರು ನುಗ್ಗಿ ಆವಾಂತರವೇ ಸೃಷ್ಟಿಯಾಯಿತು. ಅಳಕೆ ಬ್ರಿಡ್ಜ್ ಸಮೀಪದ ಒಳರಸ್ತೆಯ ಮೂಲಕ ಕುದ್ರೋಳಿ ಶ್ರೀ ಗೋಕರ್ಣನಾಥ ದೇವಸ್ಥಾನಕ್ಕೆ ತೆರಳುವ ರಸ್ತೆಯೂ ಮಳೆ ನೀರಿನಿಂದ ಆವೃತವಾಯಿತು. ಹತ್ತಿರದ ಅಂಗಡಿ ಮನೆಗಳಿಗೂ ಇಲ್ಲಿ ಮಳೆ ನೀರು ನುಗ್ಗಿತು. ಕುದ್ರೋಳಿ ಕ್ಷೇತ್ರದ ಪಾರ್ಕಿಂಗ್ ಸ್ಥಳ, ಕ್ಷೇತ್ರದ ವರಾಂಡ ಸೇರಿದಂತೆ ಎಲ್ಲೆಡೆಯೂ ಮಳೆ ನೀರೇ ನುಗ್ಗಿ ಸಮಸ್ಯೆಯ ಸರಮಾಲೆ ಸೃಷ್ಟಿಯಾದಂತಾಯಿತು. ವಾಟ್ಸಪ್/ಫೇಸ್‌ಬುಕ್‌ನಲ್ಲಿ ಮಳೆಯದ್ದೇ ಆವಾಂತರ!
ನಗರವಾಸಿಗಳು ಮಳೆ ನೀರಿನ ಸಮಸ್ಯೆಯನ್ನು ಎದುರಿಸುವ ಜತೆಗೆ ಸಾಮಾಜಿಕ ಜಾಲತಾಣಗಳಲ್ಲಿಯೂ ಬ್ಯುಸಿಯಾಗಿದ್ದರು. ತಮ್ಮ ವ್ಯಾಪ್ತಿಯ ಮಳೆ ಸಂಬಂಧಿತ ಅನಾಹುತದ ದೃಶ್ಯಗಳನ್ನು ಮೊಬೈಲ್‌ನಲ್ಲಿ ಸೆರೆಹಿಡಿದು ವಾಟ್ಸಪ್/ಫೇಸ್‌ಬುಕ್ ಮೂಲಕ ರವಾನಿಸುತ್ತಿದ್ದರು. ಕೆಲವರಂತು, ಫೇಸ್‌ಬುಕ್‌ನಲ್ಲಿ ಮಳೆಯ ಲೈವ್ ವಿಡಿಯೋದಲ್ಲಿ ನಿರತರಾಗಿದ್ದರು. ಹೀಗಾಗಿ ನಗರ ವ್ಯಾಪ್ತಿಯಲ್ಲಿ ಮಳೆಯ ತೀವ್ರತೆಯ ಬಗ್ಗೆ ಎಲ್ಲರಿಗೂ ತತ್ ಕ್ಷಣಕ್ಕೆ ಮಾಹಿತಿ ದೊರೆಯುವಂತಾಯಿತು. ಯಾವ ರಸ್ತೆ ಬ್ಲಾಕ್ ಇದೆ? ಎಲ್ಲಿ ಹೋಗಬಾರದು? ಎಲ್ಲಿ ಏನಾಗಿದೆ? ಎಂಬ ವಿವರವನ್ನು ದಾಖಲಿಸುತ್ತಿದ್ದರು. ಇದು ಜಿಲ್ಲಾ ವ್ಯಾಪ್ತಿಯಲ್ಲೂ ಶೇರ್ ಆಗುತ್ತಿದ್ದ ಹಿನ್ನೆಲೆಯಲ್ಲಿ ಕರಾವಳಿಯ ಸಾಮಾಜಿಕ ಜಾಲತಾಣಗಳೆಲ್ಲ ಮಳೆಯ ಕಥೆಯನ್ನೇ ಹೇಳುತ್ತಿತ್ತು. ಜತೆಗೆ ಆಡಳಿತ ವ್ಯವಸ್ಥೆಯ ವೈಫಲ್ಯವನ್ನು ಕೆಲವು ನೆಟ್ಟಿಗರು ವಿರೋಧಿಸಿದರು.