Advertisement

40 ವರ್ಷ ಕಳೆದರೂ ಟಾರು ಕಾಣದ ರಸ್ತೆ

05:37 PM Sep 24, 2019 | Suhan S |

ಮಾಗಡಿ: 1972ರಲ್ಲಿ ಪುರಸಭೆ ವತಿಯಿಂದ ನಿರ್ಮಾಣವಾದ ರಂಗನಾಥಸ್ವಾಮಿ ಬಡಾವಣೆಯಲ್ಲಿ ಮೂಲ ಸೌಲಭ್ಯಗಳಿಲ್ಲದೇ ನಾಗರಿಕರು ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಇದಕ್ಕೆ ಪುರಸಭೆ ಅಧಿಕಾರಿಗಳ ನಿರ್ಲಕ್ಷ್ಯವೇ ಕಾರಣ ಎಂಬ ಆರೋಪ ಪುರನಾಗರಿಕರಿಂದ ಕೇಳಿ ಬರುತ್ತಿದೆ.

Advertisement

ಕಾಂಕ್ರೀಟ್ರಸ್ತೆ ಇಲ್ಲ: ರಂಗನಾಥಸ್ವಾಮಿ ಬಡಾವಣೆ ನಿರ್ಮಾಣವಾಗಿ 45 ವರ್ಷಗಳು ಕಳೆದರೂ ಸಹ ಇನ್ನೂ ಮುಖ್ಯರಸ್ತೆ, ಸಂಪರ್ಕ ರಸ್ತೆಗಳು ಡಾಂಬರೀಕರಣ ಕಂಡಿಲ್ಲ. ಕಳೆದ ಮೂರು ವರ್ಷಗಳ ಹಿಂದೆ ಮುಖ್ಯರಸ್ತೆ ಡಾಂಬರೀಕರಣಕ್ಕೆ ಜಲ್ಲಿ ತಂದು ಸುರಿದು ಕಾಮಗಾರಿ ಕೈಗೊಳ್ಳದೇ ಕೈಬಿಟ್ಟು ಹೋಗಿದ್ದಾರೆ. ಆದರೂ ಕಾಮಗಾರಿ ಬಿಲ್‌ ಪಾವತಿಯಾಗಿದೆ ಎಂಬ ಆರೋಪವಿದ್ದು, ಉಳಿದ ಸಂಪರ್ಕ ರಸ್ತೆಗಳು ಸಹ ಡಾಂಬರೀಕರಣಗೊಂಡಿಲ್ಲ. ಜಲ್ಲಿಕಲ್ಲು, ಮಣ್ಣಿನ ರಸ್ತೆಯಲ್ಲಿಯೇ ಸಂಚರಿಸಬೇಕಾದ ಪರಿಸ್ಥಿತಿ ಇಲ್ಲಿ ನಿರ್ಮಾಣವಾಗಿದೆ.

ಬಹುತೇಕ ಕಡೆ ಚರಂಡಿಗಳೇ ಇಲ್ಲ: ಇಷ್ಟು ವರ್ಷಗಳು ಕಳೆದರೂ ಸಹ ಇನ್ನೂ ಎಷ್ಟೋ ಕಡೆ ಚರಂಡಿಗಳನ್ನು ನಿರ್ಮಿಸಿಲ್ಲ. ಮಳೆ ಬಿದ್ದರೆ ನೀರೆಲ್ಲ ರಸ್ತೆ ಮೇಲೆ ಹರಿದು ಹೋಗುವಂತ ಪರಿಸ್ಥಿತಿಯಿದೆ. ಕೆಲವು ಚರಂಡಿ ಬದಿಗಳಲ್ಲಿ ಗಿಡಗಂಟಿಗಳು ಬೆಳೆದು ನಿಂತಿದೆ. ವಿಷ ಜಂತುಗಳ ಆವಾಸ ಸ್ಥಾನವಾಗಿದೆ. ದುರಸ್ತಿ ಕಾಣದ ಈ ರಸ್ತೆಯಲ್ಲಿ ಚರಂಡಿಯ ದುರ್ವಾಸನೆಯ ನಡವೆಯೇ ಮಕ್ಕಳು ಶಾಲಾ ಕಾಲೇಜಿಗೆ ಹೋಗುವಂತ ದುಸ್ಥಿತಿ ನಿರ್ಮಾಣವಾಗಿದೆ.

ಜಾಣ ಕುರುಡು ಪ್ರದರ್ಶನ: ಬಹುತೇಕ ಕಡೆ ಗಿಡಗಂಟಿಗಳು ಬೆಳೆದಿದ್ದರೂ ಸ್ವತ್ಛಗೊಳಿಸುವ ಗೋಜಿಗೆ ಹೋಗದೆ, ಪುರಸಭೆ ಅಧಿಕಾರಿಗಳು ಮಾತ್ರ ಜಾಣ ಕುರುಡು ಪ್ರದರ್ಶಿಸುತ್ತಿದ್ದಾರೆ. ಇದರಿಂದಾಗಿ ವಿಷ ಜಂತುಗಳು ಮನೆಯೊಳಗೆ ಪ್ರವೇಶಿಸುತ್ತವೆ ಎಂಬ ಭಯದಲ್ಲೇ ಮನೆಯ ಬಾಗಿಲು ಹಾಕಿಕೊಂಡೇ ಇರುವಂತ ಸಮಸ್ಯೆಯನ್ನು ಬಡಾವಣೆಯ ನಾಗರಿಕರು ಎದುರಿಸುತ್ತಿದ್ದಾರೆ. ಒಂದೆಡೆ ಚರಂಡಿ ಸ್ವಚ್ಛ ಗೊಳಿಸುತ್ತಿಲ್ಲ. ಮತ್ತೂಂದೆಡೆ ರಸ್ತೆಗಳು ಡಾಂಬರು ಕಂಡಿಲ್ಲ. ಜೊತೆಗೆ ಬೀದಿದೀಪಗಳು ಉರಿಯುತ್ತಿಲ್ಲ,ರಾತ್ರಿ ವೇಳೆಯಂತು ಈ ರಸ್ತೆಗಳಲ್ಲಿ ಸಂಚಾರ ಮಾಡುವುದು ಕಷ್ಟ ಎಂಬ ದೂರುಗಳನ್ನು ಪುರಸಭೆ ಅಧಿಕಾರಿಗಳ ಗಮನಕ್ಕೆ ತಂದರೂ ಸಹ, ಅಧಿಕಾರಿಗಳು ಮಾತ್ರ ತಮಗೂ ಇದಕ್ಕೂ ಸಂಬಂಧವಿಲ್ಲ ಎಂಬಂತೆ ಜಾಣ ಕುರುಡು ಪ್ರದರ್ಶಿಸುತ್ತಿದ್ದಾರೆ.

ರಸ್ತೆ ಮಧ್ಯೆ ಹರಿಯುತ್ತಿದೆ ಚರಂಡಿ ನೀರು: ರಂಗನಾಥಸ್ವಾಮಿ ಬಡಾವಣೆ ಇದೊಂದು ಪ್ರತಿಷ್ಠಿತ ಬಡಾವಣೆಯಾಗಿದೆ. ಈ ಭಾಗದಲ್ಲಿ ಪುರಸಭೆ ಅಧ್ಯಕ್ಷ ಎಚ್‌.ಆರ್‌.ಮಂಜುನಾಥ್‌ ಅವರೇ ನಿವಾಸಿಗಳಾಗಿದ್ದಾರೆ. ಇವರ ಮನೆ ಮುಂದೆ ಇರುವ ರಸ್ತೆ ಗುಂಡಿಗಳಿಂದ ಕೂಡಿದೆ. ಒಳಚರಂಡಿ ನೀರು ಸಹ ರಸ್ತೆ ಮಧ್ಯೆದಲ್ಲಿಯೇ ಹರಿಯುತ್ತಿದೆ. ನಿತ್ಯ ಈ ರಸ್ತೆಯಲ್ಲಿ ಪ್ರಸಿದ್ಧ ರಂಗನಾಥಸ್ವಾಮಿ ದರ್ಶನಕ್ಕೆ ಭಕ್ತರ ದಂಡೇ ಆಗಮಿಸುತ್ತದೆ. ರಸ್ತೆ ಬದಿಯಲ್ಲಿ ಮುಳ್ಳಿನ ಬೇಲಿ ಬೆಳೆದು ನಿಂತಿದೆ. ನಗರದಿಂದ ಬರುವ ಜನರು ಈ ರಸ್ತೆ ಬದಿಯನ್ನು ಗಮನಿಸಿ, ಕಾಡಿನಂತೆ ಬಾಸವಾಗುತ್ತಿದೆ ಎಂಬ ನೆಗೆ ಪಾಟಲಿಗೆ ಪುರಸಭೆ ಒಳಗಾಗಿದೆ.

Advertisement

ದೂರದೃಷ್ಟಿಯಿಂದ ನಿರ್ಮಾಣವಾಗಿರುವ ಈ ಬಡಾವಣೆಯ ಸ್ಥಿತಿಯೇ ಹೀಗಾದರೆ, ಉಳಿದ ಬಡಾವಣೆಗಳ ಸ್ಥಿತಿಯೂ ಹೊರತಾಗಿಲ್ಲ. ಅದರಲ್ಲೂ ಖಾಲಿ ನಿವೇಶನಗಳಂತೂ ನಿಜಕ್ಕೂ ವಿಷಜಂತುಗಳ ಆವಾಸ ಸ್ಥಾನವಾಗಿದೆ. ಪಕ್ಕದ ಮನೆಯ ನಿವಾಸಿಗಳು ಆತಂಕದಿಂದಲೇ ವಾಸಿಸುತ್ತಿದ್ದಾರೆ.

 

-ತಿರುಮಲೆ ಶ್ರೀನಿವಾಸ್‌

Advertisement

Udayavani is now on Telegram. Click here to join our channel and stay updated with the latest news.

Next