ಹಾಸನ: ಕುಂಟುತ್ತಾ ಸಾಗಿರುವ ರಾಷ್ಟ್ರೀಯ ಹೆದ್ದಾರಿ -75ರ ಹಾಸನ-ಸಕಲೇಶಪುರ ನಡುವಿನ ಚತುಷ್ಪಥ ರಸ್ತೆ ನಿರ್ಮಾಣ ಕಾಮಗಾರಿಯನ್ನು 2022ರೊಳಗೆ ಪೂರ್ಣಗೊಳಿಸಬೇಕು ಎಂದು ರಾಜ್ಯ ಬಿಜೆಪಿ ಅಧ್ಯಕ್ಷ, ಸಂಸದ ನಳಿನ್ ಕುಮಾರ್ ಕಟೀಲು ಮತ್ತು ಬಿಜೆಪಿ ಮುಖಂಡರು ಅಧಿಕಾರಿಗಳಿಗೆ ತಾಕೀತು ಮಾಡಿದರು.
ಜಿಲ್ಲಾ ಉಸ್ತುವಾರಿ ಸಚಿವ ಕೆ.ಗೋಪಾಲಯ್ಯ, ಸಂಸದರಾದ ಪ್ರತಾಪ್ ಸಿಂಹ, ನಾರಾಯಣಸ್ವಾಮಿ, ಮತ್ತು ಶಾಸಕ ಅಶ್ವತ್ಥನಾರಾಯಣ ಮತ್ತಿತರ ಮುಖಂಡರು ಆಲೂರಿನ ಭರತವಳ್ಳಿ ಬಳಿ ಕಾಮಗಾರಿ ವೀಕ್ಷಿಸಿ ಕಾಮಗಾರಿ ಆಮೆಗತಿಯಲ್ಲಿ ಸಾಗುತ್ತಿರುವುದಕ್ಕೆ ಅಸಮಾಧಾನ ವ್ಯಕ್ತಪಡಿಸಿದರು.
ಎನ್‌ಎಚ್‌ಎಐ ಎಂಜಿನಿಯರುಗಳೊಂದಿಗೆ ಸ್ಥಳ ಪರಿಶೀಲಿಸಿದ ಅವರು ಈ ವರ್ಷದ ಮೇ ತಿಂಗಳ ಅಂತ್ಯಕ್ಕೆ ಆದಷ್ಟು ಪೂರ್ಣಗೊಳಿಸಿ 2022ಕ್ಕೆ ಸಂಪೂರ್ಣ ಕಾಮಗಾರಿ ಮುಗಿಸಲೇಬೇಕೆಂದು ನಿರ್ದೇಶನ ನೀಡಿದರು.
ಬಿ.ಸಿ. ರೋಡ್-ಅಡ್ಡಹೊಳೆ ಫೆ. 1ರಿಂದ ಕಾಮಗಾರಿ ಆರಂಭ :
ನಳಿನ್ ಕುಮಾರ್ ಕಟೀಲು ಮಾತನಾಡಿ, ಮಂಗಳೂರು ಕಡೆಯಿಂದ ಬಿ.ಸಿ.ರೋಡ್‌ನಿಂದ ಅಡ್ಡಹೊಳೆ ವರೆಗಿನ ಕಾಮಗಾರಿ ನಿಂತಿದೆ. ಇದಕ್ಕಾಗಿ ಹೊಸದಾಗಿ ಟೆಂಡರ್ ಪ್ರಕ್ರಿಯೆ ಪೂರ್ಣಗೊಂಡಿದ್ದು , ಫೆ. 1ರಿಂದ ಕಾಮಗಾರಿ ಆರಂಭವಾಗಲಿದೆ. 2022ರೊಳಗೆ ಹಾಸನ – ಬಿ.ಸಿ.ರೋಡ್ ನಡುವೆ ಚತುಷ್ಪಥ ರಸ್ತೆ ನಿರ್ಮಾಣ ಪೂರ್ಣಗೊಳ್ಳಲಿದೆ. ಪ್ರತಿ ತಿಂಗಳೂ ಕಾಮಗಾರಿಯ ಪ್ರಗತಿ ವರದಿ ಪಡೆಯಲಾಗುವುದು ಎಂದು ಹೇಳಿದರು.