Advertisement
ರಾಜ್ಯ ಹೆದ್ದಾರಿ 67 ಕಳೆಗಡೆ ಪೊರ್ಕೋಡಿಗೆ ಹೋಗುವ ರಸ್ತೆಗೆ ಇಲ್ಲಿನ ತುಂಬಿಸಿದ ಮಣ್ಣು ಹೋಗಿ ಆ ರಸ್ತೆಯಲ್ಲಿಯೂ ವಾಹನ ಸಂಚಾರಕ್ಕೆ ತೊಂದರೆಯಾಗಲಿದೆ. ಬಜಪೆ ಪಟ್ಟಣ ಪಂಚಾಯತ್ ವ್ಯಾಪ್ತಿಯ ಕೆಂಜಾರಿನಿಂದ ಪೊರ್ಕೋಡಿ ದ್ವಾರದ ಬಳಿಯ ತನಕ ರಸ್ತೆ ಅಭಿವೃದ್ಧಿ ಕಾಮಗಾರಿಗಳು ನಡೆದಿದ್ದು, ಅದರಲ್ಲಿ ತಿರುವಿನಿಂದ ಕೂಡಿದ ಕಿರಿದಾದ ರಸ್ತೆ ವಿಸ್ತ ರಣೆ ಕಾಮಗಾರಿ ಉಳಿದಿತ್ತು. ಈ ಕಾಮಗಾರಿಯನ್ನು ಮಾರ್ಚ್‌ನಲ್ಲಿ ಆರಂಭಿಸಲಾಗಿತ್ತು.
ಮಣ್ಣು ತುಂಬಿಸಿ ರಸ್ತೆ ವಿಸ್ತ ರಣೆ ಹಾಗೂ ತಿರುವನ್ನು ತೆಗೆದು ನೇರ ಮಾಡಿ, ರಸ್ತೆ ಡಾಮರು ಕಾಮಗಾರಿಗಳು ನಡೆದಿವೆ. ತುಂಬಿಸಿದ ಮಣ್ಣಿಗೆ ತಡೆಗೋಡೆ ಅಗತ್ಯವಾಗಿದೆ. ಅ ಕಾಮಗಾರಿ ನಡೆದಿಲ್ಲ. ಮೊನ್ನೆಯ ಸಣ್ಣ ಮಳೆಗೆ ರಸ್ತೆಯ ಬದಿಯಲ್ಲಿ ಹಾಕಲಾದ ಮಣ್ಣು ಕೊರೆದು ಹೋಗಿದೆ. ಇಲ್ಲಿ ಚರಂಡಿಯೂ ಇಲ್ಲ. ಇದರಿಂದಾಗಿ ತುರ್ತಾಗಿ ತಡೆಗೋಡೆ ನಿರ್ಮಾಣ ಮಾಡಬೇಕಾಗಿದೆ. ಇಲ್ಲದಿದ್ದಲ್ಲಿ ತುಂಬಿಸಿದ ಮಣ್ಣು ಕುಸಿದು ಪೊರ್ಕೋಡಿಗೆ ಹೋಗುವ ರಸ್ತೆಗೆ ಬೀಳಲಿದೆ. ಇದ ರಿಂದ ರಾಜ್ಯ ಹೆದ್ದಾರಿ 67 ಸಂಪರ್ಕ ಕಡಿತವೂ ಆಗುವ ಸಂಭವ ಇದೆ. ಈ ರಸ್ತೆ ವಿಸ್ತ ರಣೆ ಹಾಗೂ ತಿರುವು ತೆಗೆದು ನೇರ ಮಾಡಿದ ಕಾಮಗಾರಿಗೆ ಜನರು ಪ್ರಶಂಶಿಸಿದ್ದಾರೆ. ಆದರೆ ಮಳೆ ಬರುವ ಮುನ್ನ ತಡೆಗೋಡೆ ಶೀಘ್ರ ನಿರ್ಮಾಣವಾಗಬೇಕು ಎಂದು ಅಭಿಪ್ರಾಯ ವ್ಯಕ್ತವಾಗಿದೆ.
Related Articles
Advertisement