ಬಾದಾಮಿ: ತಾಲೂಕಿನ ಮಲ್ಲಾಪುರ ಎಸ್.ಎಲ್. ರಸ್ತೆ ಭೂಸ್ವಾಧಿಧೀನ ವಿಳಂಬ ಮಾಡುತ್ತಿರುವುದಕ್ಕೆ ತಹಶೀಲ್ದಾರ್ ಇಂಗಳೆ ಇವರನ್ನು ಶಾಸಕ ಸಿದ್ದರಾಮಯ್ಯ ತೀವ್ರ ತರಾಟೆಗೆ ತೆಗೆದುಕೊಂಡರು.
ತಾಪಂ ಸಭಾಭವನದಲ್ಲಿ ಕೆಡಿಪಿ ತ್ತೈಮಾಸಿಕ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಸುಳ್ಳು ಹೇಳ್ತಿಯಾ ನೀನು ಎಂದು ಸಭೆಯಲ್ಲಿ ತಹಶೀಲ್ದಾರ್ ಮೇಲೆ ಗರಂ ಆದರು. ಸ್ವತಂತ್ರ ಬಂದು ಇಷ್ಟು ವರ್ಷವಾದರೂ ಒಂದು ಗ್ರಾಮಕ್ಕೆ ರಸ್ತೆ ಕಲ್ಪಿಸಲು ಆಗಲಿಲ್ಲ ಎಂದರೆ ಇಷ್ಟು ದಿನ ಏನು ಕೆಲಸ ಮಾಡಿದಿರಿ. ನಿನ್ನೆ ಶಾಲಾ ಮಕ್ಕಳು, ಗ್ರಾಮಸ್ಥರು ಬಾದಾಮಿಗೆ ಬಂದು ಅರ್ಜಿ ಸಲ್ಲಿಸಿದ್ದಾರೆ. ಇಷ್ಟೊಂದು ಅಹವಾಲು ಬರುತ್ತವೆ ಎಂದರೆ ಅಧಿಕಾರಿಗಳು ಸರಿಯಾಗಿ ಕೆಲಸ ಮಾಡುತ್ತಿಲ್ಲ ಎಂದು ಅಧಿಕಾರಿಗಳನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡರು.
ಶೀಘ್ರವೇ ಬಸ್ ಓಡಾಡುವಂತೆ ರಸ್ತೆ ನಿರ್ಮಿಸಿ, ಭೂಮಿ ಸ್ವಾಧೀನ ಮಾಡುವಂತೆ ಸಿದ್ದರಾಮಯ್ಯ ಸೂಚನೆ ನೀಡಿದರು. ನಾವು ಜನಪ್ರತಿನಿಧಿಗಳು ಜನರ ಸಮಸ್ಯೆಗಳನ್ನು ಅಧಿಕಾರಿಗಳ ಗಮನಕ್ಕೆ ತರುತ್ತೇವೆ. ನೀವು ಸರಿಯಾಗಿ ಕೆಲಸ ಮಾಡಿದರೆ ಅವರು ನಮ್ಮ ಹತ್ತಿರ ಬರುವುದಿಲ್ಲ. ನೀವು ಸರಿಯಾಗಿ ಕೆಲಸ ಮಾಡದಿದ್ದರೆ ಅವರು ನಮ್ಮ ಹತ್ತಿರ ಬರುತ್ತಾರೆ. ಗ್ರಾಮೀಣ ಭಾಗಗಳಲ್ಲಿ ಸಂಚರಿಸಿ, ಸಮಸ್ಯೆ ಅರಿತು ಕೆಲಸ ಮಾಡಿರಿ. ಪ್ರತಿ ದಿನ ಮಧ್ಯಾಹ್ನ 3ರಿಂದ 5 ಗಂಟೆಯವರೆಗೆ ಸಾರ್ವಜನಿಕರ ಸಮಸ್ಯೆ, ಕುಂದುಕೊರತೆಗಳನ್ನು ಆಲಿಸಿ, ಸಮಸ್ಯೆ ಬಗೆಹರಿಸಿರಿ. ಅಧಿಕಾರದ ದರ್ಪ ತೋರಿಸಬೇಡಿರಿ. ಸರಿಯಾಗಿ ಕೆಲಸ ಮಾಡಿರಿ ಇಲ್ಲವೆ ಜಾಗ ಖಾಲಿ ಮಾಡಿರಿ ಎಂದು ಖಡಕ್ ಸೂಚನೆ ನೀಡಿದರು. ಸಭೆಗೆ ಗೈರು ಹಾಜರಾದ ಅಧಿಕಾರಿಗಳಿಗೆ ಕಾರಣ ಕೇಳಿ ನೋಟಿಸ್ ಜಾರಿ ಮಾಡುವಂತೆ ತಾಪಂ ಇಒ ಭೀಮಪ್ಪ ಲಾಳಿ ಇವರಿಗೆ ಸೂಚಿಸಿದರು.
ಫುಟ್ಪಾತ್ ಅಂಗಡಿ ತೆರವುಗೊಳಿಸಿ: ಫುಟ್ಪಾತ್‌ನಲ್ಲಿ ಅಂಗಡಿ ಹಾಕಿದರೆ ಜನರು ಎಲ್ಲಿ ನಡೆದಾಡಬೇಕು. ಮುಂದಿನ ಬಾರಿ ಬರುವವರೆಗೆ ಯಾವುದೇ ಫುಟ್ಪಾಥ್ ಮೇಲೆ ಅಂಗಡಿ ಕಾಣಬಾರದು ಎಂದು ಪುರಸಭೆ ಮುಖ್ಯಾಧಿಕಾರಿ ಜ್ಯೋತಿ ಗಿರೀಶ ಮತ್ತು ಸಿಪಿಐ ಕರಿಯಪ್ಪ ಹಟ್ಟಿ ಇವರಿಗೆ ಸೂಚಿಸಿದರು.
ತಾಲೂಕಿನ ಎಪಿಎಂಸಿ, ತಾಲೂಕಾ ವೈದ್ಯಾಧಿಕಾರಿ, ರೇಷ್ಮೆ ಇಲಾಖೆ, ಕೆಇಬಿ, ಎಡಿಎಲ್ಆರ್, ಪಿಡಬ್ಲೂಡಿ, ಕೃಷಿ ಇಲಾಖೆ, ಸಣ್ಣ ನೀರಾವರಿ, ಕುಡಿಯುವ ನೀರು ವಿಭಾಗ, ಲ್ಯಾಂಡ್ ಆರ್ಮಿ, ತೋಟಗಾರಿಕೆ ಇಲಾಖೆ ಸೇರಿದಂತೆ ವಿವಿಧ ಇಲಾಖೆಗಳಲ್ಲಿ ಪ್ರಭಾರಿ ಅಧಿಕಾರಿಗಳಿರುವುದನ್ನು ಮಾಹಿತಿ ಪಡೆದ ಸಿದ್ದರಾಮಯ್ಯ ಕಾಯಂ ಅಧಿಕಾರಿಗಳ ನಿಯುಕ್ತಿ ಮಾಡಲಾಗುವುದು ಎಂದು ಹೇಳಿದರು.
ಎಲ್ಲ ಇಲಾಖೆಗಳ ಪ್ರಗತಿ ಪರಿಶೀಲನೆ ನಡೆಸಿದರು. ಈ ಸಂದರ್ಭದಲ್ಲಿ ತಾಪಂ ಅಧ್ಯಕ್ಷ ರೇಣುಕಾ ಕೊಳ್ಳನ್ನವರ, ಉಪಾಧ್ಯಕ್ಷೆ ಪೂರ್ಣಿಮಾ ಪಾಟೀಲ, ಎಸಿ ಎಚ್.ಜಯಾ ಹಾಜರಿದ್ದರು.