ಹುಣಸೂರು: ಬೈಕ್ ಢಿಕ್ಕಿ ಹೊಡೆದು ರಸ್ತೆದಾಟುತ್ತಿದ್ದ ಜಿಂಕೆ ಸಾವನ್ನಪ್ಪಿರುವ ಘಟನೆ ಹುಣಸೂರು- ನಾಗರಹೊಳೆ ರಸ್ತೆಯ ನಾಗಾಪುರ ಗಿರಿಜನ ಪುನರ್ವಸತಿ ಕೇಂದ್ರದ ಬಳಿ ನಡೆದಿದೆ. ಬೈಕ್ ಸವಾರನೂ ಗಂಭೀರವಾಗಿ ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲಾಗಿದೆ.
ಗಾಯಗೊಂಡ ಯುವಕನನ್ನು ಹುಣಸೂರು ನಗರದ ಕಲ್ಕುಣಿಕೆ ನಿವಾಸಿ ಸಂತೋಷ್ ಎಂದು ಗುರುತಿಸಲಾಗಿದೆ.
ಈತ ತಾಲೂಕಿನ ವಿವಿಧ ಪಡಿತರ ಕೇಂದ್ರಗಳಲ್ಲಿ ಕಂಪ್ಯೂಟರ್ ಕೆಲಸ ನಿರ್ವಹಿಸುತ್ತಿದ್ದ. ಭರತವಾಡಿಯ ಪಡಿತರ ಕೇಂದ್ರದಿಂದ ನಗರದ ಕಡೆಗೆ ವಾಪಾಸ್ ಬರುತ್ತಿದ್ದಾಗ ನಾಗಾಪುರ ಬಳಿಯ ಉಡ್ ಲಾಟ್ ಕಡೆಯಿಂದ ಜಿಂಕೆ ಹೊರಬಂದು ರಸ್ತೆ ದಾಟುತ್ತಿದ್ದ ವೇಳೆ ಬೈಕ್ ಢಿಕ್ಕಿ ಹೊಡೆದಿದೆ. ಅಪಘಾತದ ರಭಸಕ್ಕೆ ಜಿಂಕೆ ಸ್ಥಳದಲ್ಲೇ ಸಾವನ್ನಪ್ಪಿದ್ದರೆ, ಬೈಕ್ ಸವಾರ ಸಂತೋಷ್ ಗೆ ತಲೆಗೆ ತೀವ್ರಪೆಟ್ಟು ಬಿದ್ದಿದ್ದು, ಮೈಸೂರಿನ ಆಸ್ಪತ್ರೆಗೆ ದಾಖಲಿಸಲಾಗಿದೆ.
ಈ ಸಂಬಂಧ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.