Advertisement

ರಸ್ತೆಗಳನ್ನು ನುಂಗಿದ ಗುಂಡಿಗಳು

06:17 PM Aug 14, 2019 | Suhan S |
ಧಾರವಾಡ: ಮಲೆನಾಡಿನ ಸೆರಗು ಹೊಂದಿರುವ ಧಾರವಾಡ ಇದೀಗ ಅಕ್ಷರಶಃ ‘ಮಳೆ’ವಾಡ ಆಗಿ ಮಾರ್ಪಟ್ಟಿದ್ದು, ಕಳೆದ 10 ದಿನಗಳಲ್ಲಿ ಸುರಿದ ದಾಖಲೆಯ ಮಳೆಯಿಂದ ಧಾರಾನಗರಿಯ ಬಹುತೇಕ ರಸ್ತೆಗಳು ಹಾಳಾಗಿದ್ದರೆ ಗ್ರಾಮೀಣ ಭಾಗದ ರಸ್ತೆಗಳ ದುಸ್ಥಿತಿ ಹೇಳತೀರದಾಗಿದೆ. ಆಗಸ್ಟ್‌ ತಿಂಗಳಲ್ಲಿ ವಾಡಿಕೆ ಮಳೆ 107.42 ಮಿಮೀ. ಆದರೆ ಈಗ ಬರೀ ಆ. 1ರಿಂದ 8ರ ವರೆಗೆ ಬಿದ್ದಿರುವ ಮಳೆಯ ಪ್ರಮಾಣ 247.2 ಮಿಮೀ ಇದೆ. ವಾಡಿಕೆಗಿಂತ ಹೆಚ್ಚಾಗಿ ಧಾರಾಕಾರವಾಗಿ ಸುರಿದ ಮಳೆಯಿಂದ ನಗರ ಅಥವಾ ಗ್ರಾಮೀಣ ಭಾಗದಲ್ಲಿ ಒಂದೇ ಒಂದು ಗುಂಡಿ-ತೆಗ್ಗುಗಳಿಲ್ಲದ ರಸ್ತೆಯೇ ಇಲ್ಲ ಎಂಬಂತಾಗಿದೆ. ಅವಳಿ ನಗರದ ಪ್ರಮುಖ ರಸ್ತೆಗಳೇ ದುಸ್ಥಿತಿಗೆ ತಲುಪಿದ್ದು, ವಿವಿಧ ಕಾಲೋನಿ-ಬಡಾವಣೆಗಳ ರಸ್ತೆಗಳು, ಗ್ರಾಮೀಣ ಭಾಗದ ರಸ್ತೆಳಂತೂ ದೇವರಿಗೆ ಪ್ರೀತಿ ಅನ್ನುವಂತಾಗಿದೆ. ಕೆಲವೊಂದಿಷ್ಟು ರಸ್ತೆಗಳಲ್ಲಿ ಗುಂಡಿಗಳ ಮಧ್ಯೆ ರಸ್ತೆ ಹುಡುಕಬೇಕಾದ ಸ್ಥಿತಿಯಿದ್ದರೆ ಮತ್ತೂಂದಿಷ್ಟು ರಸ್ತೆಗಳೇ ಸಂಪೂರ್ಣ ಹಾಳಾಗಿ ಸಂಚಾರಕ್ಕೆ ಸಂಚಕಾರ ತರುವಂತಾಗಿವೆ. ಗ್ರಾಮೀಣ ಭಾಗದಲ್ಲಿ ತುಪ್ಪರಿ, ಬೆಣ್ಣೆ ಹಳ್ಳದ ಪ್ರವಾಹಕ್ಕೆ ಪ್ರಮುಖ ರಸ್ತೆಗಳು ಕೊಚ್ಚಿ ಹೋಗಿದ್ದರೆ ಸೇತುವೆಗಳಿಗೆ ಧಕ್ಕೆ ಉಂಟಾಗಿ ಸಂಪರ್ಕವೇ ಕಡಿತಗೊಳ್ಳುವಂತೆ ಮಾಡಿದೆ.
413 ಕಿಮೀ ರಸ್ತೆ ಹಾಳು: ಜಿಲ್ಲೆಯಲ್ಲಿ ಹು-ಧಾ ಮಹಾನಗರ ಪಾಲಿಕೆ ವ್ಯಾಪ್ತಿ ಸೇರಿದಂತೆ ಒಟ್ಟು 229 ರಸ್ತೆಗಳು ಸಂಪೂರ್ಣ ಹಾಳಾಗಿದ್ದು, 413.99 ಕಿಮೀ ರಸ್ತೆ ಹಾಳಾಗಿ ಒಟ್ಟು 5614.30 ಲಕ್ಷ ರೂ. ಹಾನಿ ಸಂಭವಿಸಿದೆ. ಹುಬ್ಬಳ್ಳಿ ಹಾಗೂ ಧಾರವಾಡ ನಗರ ಪ್ರದೇಶದಲ್ಲಿ 168.38 ಕಿಮೀಯ 128 ರಸ್ತೆಗಳು ಹಾಳಾಗಿ 4723.7 ಲಕ್ಷ ರೂ. ಹಾನಿ ಉಂಟಾಗಿದೆ. ಪಾಲಿಕೆ ಹೊರತುಪಡಿಸಿದರೆ ಜಿಲ್ಲೆಯ ಲೋಕೋಪಯೋಗಿ ವ್ಯಾಪ್ತಿಯ 73.31 ಕಿಮೀ ರಸ್ತೆ ಹಾಳಾಗಿದ್ದು, 490 ಲಕ್ಷ ರೂ. ಹಾನಿ ಉಂಟಾಗಿದೆ. ಪಿಆರ್‌ಇಡಿ ವ್ಯಾಪ್ತಿಯಲ್ಲಿ 172.30 ಕಿಮೀಯ 101 ರಸ್ತೆ ಹಾಳಾಗಿ 400 ಲಕ್ಷ ರೂ. ಹಾನಿ ಸಂಭವಿಸಿದೆ. ಇದಲ್ಲದೇ ಪಾಲಿಕೆ ವ್ಯಾಪ್ತಿಯ 12 ಹಾಗೂ ಪಿಆರ್‌ಇಡಿ ವ್ಯಾಪ್ತಿಯ 25 ಸೇರಿದಂತೆ ಒಟ್ಟು ಜಿಲ್ಲೆಯಲ್ಲಿ 47 ಸೇತುವೆಗಳಿಗೆ ಧಕ್ಕೆ ಉಂಟಾಗಿ 570 ಲಕ್ಷ ರೂ. ಹಾನಿ ಉಂಟಾಗಿದೆ. ಧಾರವಾಡದಿಂದ ಉಪ್ಪಿನಬೆಟಗೇರಿಗೆ ಹೋಗುವ ಯಾದವಾಡ ಹಾಗೂ ಮರೇವಾಡ ಮಾರ್ಗಗಳು ಸೇರಿದಂತೆ ಜಿಲ್ಲೆಯ ವಿವಿಧ ತಾಲೂಕಿಗೆ ಸಂಪರ್ಕ ಕಲ್ಪಿಸುವ ರಸ್ತೆಗಳು ಮಳೆಯ ಹೊಡೆತಕ್ಕೆ ದುಸ್ಥಿತಿಗೆ ಬಂದು ನಿಂತಿವೆ. ಇದರಿಂದ ಸಾರಿಗೆ ಸಂಚಾರದಲ್ಲೂ ವ್ಯತ್ಯಯ ಉಂಟಾಗಿದ್ದರೆ ಕೆಲವೊಂದಿಷ್ಟು ಗ್ರಾಮಗಳಿಗೆ ಸಾರಿಗೆ ಬಸ್‌ಗಳ ಸಂಚಾರಕ್ಕೂ ತಾತ್ಕಾಲಿಕ ಬ್ರೇಕ್‌ ಬಿದ್ದಿದೆ. ರಸ್ತೆಗಳ ಗುಂಡಿಗಳಿಗೆ ತೇಪೆ ಹಚ್ಚಿದರೆ ಸಾಲದು, ಇಡೀ ರಸ್ತೆಗಳನ್ನೇ ಮರುನಿರ್ಮಾಣ ಮಾಡಬೇಕೆಂಬ ಒತ್ತಾಸೆ ಜನರದ್ದಾಗಿದೆ.

ಸಂಚಾರವೇ ದುಸ್ತರ: ಮುರುಘಾ ಮಠ ಹಿಂಬದಿಯ ಮೋರೆಪ್ಲಾಟ್, ಮಟ್ಟಿಪ್ಲಾಟ್, ಪತ್ರೇಶ್ವರನಗರ, ದೊಡ್ಡನಾಯಕನಕೊಪ್ಪ, ನವಲೂರು ಸೇರಿದಂತೆ ವಿವಿಧ ಬಡಾವಣೆಗಳಲ್ಲಿ ಡಾಂಬರೀಕರಣ ರಸ್ತೆಗಳೇ ಇಲ್ಲ. ಕೆಂಪು ಮಣ್ಣಿನ ರಸ್ತೆಗಳಲ್ಲಿಯೇ ವಾಸವಿರುವ ಈ ಭಾಗದ ಜನರಿಗೆ ಮಳೆಗಾಲದಲ್ಲಿ ಸಂಚಾರವಂತೂ ದುಸ್ತರ. ಈ ಭಾಗದ ರಸ್ತೆಗಳ ಸುಧಾರಣೆ ಮಾಡುವಂತೆ ಪ್ರತಿ ವರ್ಷ ಮಳೆಗಾಲದಲ್ಲಿ ಸ್ಥಳೀಯರು ಸಾಕಷ್ಟು ಸಲ ರಸ್ತೆ ತಡೆ ಕೈಗೊಂಡು ಪ್ರತಿಭಟನೆ ನಡೆಸಿದಾಗಲೂ ಸಿಕ್ಕಿದ್ದು ಭರವಸೆಯಷ್ಟೆ.
ಮಳೆ ಬಿಡುವು ನೀಡಿದ್ದರಿಂದ ಈಗ ತೆಗ್ಗು-ಗುಂಡಿ ಮುಚ್ಚುವ ಕಾರ್ಯಕ್ಕೆ ಚಾಲನೆ ನೀಡಲಾಗಿದೆ. ಸಂಪೂರ್ಣವಾಗಿ ಹಾಳಾಗಿರುವ ರಸ್ತೆಗಳ ಪುನರ್‌ ನಿರ್ಮಾಣ ಹಾಗೂ ಹಾಳಾದ ರಸ್ತೆಗಳ ದುರಸ್ತಿಗಾಗಿ ಪ್ರತ್ಯೇಕ ಪ್ರಸ್ತಾವನೆ ಸಲ್ಲಿಸಲಾಗಿದೆ. ಅನುಮೋದನೆ ದೊರೆತ ಬಳಿಕ ಕಾಮಗಾರಿ ಕೈಗೊಂಡು ಸುಗಮ ಸಂಚಾರಕ್ಕೆ ಅನುವು ಮಾಡಿಕೊಡುತ್ತೇವೆ.• ಸುರೇಶ ಇಟ್ನಾಳ, ಆಯುಕ್ತ, ಹು-ಧಾ ಮಹಾನಗರ ಪಾಲಿಕೆ

ಜಿಲ್ಲೆಯಲ್ಲಿ ನೆರೆ ಹಾವಳಿಯಲ್ಲಿ ನಗರ ಹಾಗೂ ಗ್ರಾಮೀಣ ಭಾಗದ ಬಹುತೇಕ ರಸ್ತೆಗಳು ಹಾಳಾಗಿದ್ದು, ಈ ಕೂಡಲೇ ಹಾಳಾಗಿರುವ ರಸ್ತೆಗಳು ಹಾಗೂ ಸೇತುವೆಗಳನ್ನು ದುರಸ್ತಿ ಮಾಡಬೇಕು.• ವಿನಯ ಕುಲಕರ್ಣಿ, ಮಾಜಿ ಸಚಿವ

Advertisement

 

• ಶಶಿಧರ್‌ ಬುದ್ನಿ

Advertisement

Udayavani is now on Telegram. Click here to join our channel and stay updated with the latest news.

Next