ಗಂಗಾವತಿ: ತಾಲೂಕಿನ ಮಲ್ಲಾಪೂರ ಸುತ್ತಮುತ್ತಲಿನ ಬೆಟ್ಟಗುಡ್ಡಗಳಲ್ಲಿ ನಡೆಯುತ್ತಿರುವ ಅಕ್ರಮ ಕಲ್ಲು ಗಣಿಗಾರಿಕೆಗಾಗಿ ಬಳಸುವ ಡೈನಾಮೆಟ್ ಸ್ಫೋಟದಿಂದಾಗಿ ರಾಯಚೂರು, ಕೊಪ್ಪಳ ರೈತರ ಜೀವನನಾಡಿಯಾಗಿರುವ ತುಂಗಭದ್ರಾ ಎಡದಂಡೆ ಕಾಲುವೆಗೆ ಧಕ್ಕೆಯಾಗುವ ಅಪಾಯ ಎದುರಾಗಿದೆ.
ರಾಂಪೂರದಿಂದ ಮಲ್ಲಾಪೂರ ಮೇಲ್ಭಾಗದಲ್ಲಿರುವ ತೆಂಬ ಪ್ರದೇಶದ ಬೆಟ್ಟಗುಡ್ಡದಲ್ಲಿ ಅಕ್ರಮ ಕಲ್ಲು ಗಣಿಗಾರಿಕೆ ನಡೆಯುತ್ತಿದ್ದು, ಕಲ್ಲುಗಳನ್ನು ಸ್ಫೋಟಿಸಿ ನಂತರ ಅಳತೆಗೆ ತಕ್ಕಂತೆ ಒಡೆಯಲಾಗುತ್ತಿದೆ. ಡೈನಾಮೆಟ್ ಸ್ಫೋಟ ಮತ್ತು ಕಾಲುವೆ ಮೇಲೆ 16 ಚಕ್ರದ ಬೃಹತ್ ಲಾರಿ ಹಾಗೂ ಟ್ರ್ಯಾಕ್ಟರ್‌ಗಳಲ್ಲಿ ಕಲ್ಲುಗಳನ್ನು ಸಾಗಿಸಲಾಗುತ್ತಿದೆ. ಇದಕ್ಕೆ ಪಾಪಯ್ಯಟೆನಾಲ್ ಹತ್ತಿರ ಇರುವ ಜಲಸಂಪನ್ಮೂಲ ಇಲಾಖೆ ರಸ್ತೆ ಬಳಕೆ ಮಾಡಲಾಗುತ್ತಿದೆ. ಹಗಲು-ರಾತ್ರಿ ಲಾರಿಗಳ ಸಂಚಾರದಿಂದ ಕಾಲುವೆಯ ಮೇಲಿರುವ ರಸ್ತೆ ಹದಗೆಟ್ಟಿದ್ದು, ಕಾಲುವೆ ಎರಡು ಬದಿಗಳಲ್ಲಿ ಅಭದ್ರತೆಯುಂಟಾಗಿದೆ. ಮೂರು ತಿಂಗಳ ಹಿಂದೆ ಜಲಸಂಪನ್ಮೂಲ ಇಲಾಖೆ ಮತ್ತು ಕೃಷ್ಣಾ ಜಲಭಾಗ್ಯ ನಿಗಮದ ಅಧಿಕಾರಿಗಳು ಅಕ್ರಮ ಕಲ್ಲು ಗಣಿಗಾರಿಕೆ ಮತ್ತು ಸಾಗಾಣಿಕೆಯಿಂದ ವಾಹನಗಳ ತಡೆಯುವಂತೆ ತಾಲೂಕು ಆಡಳಿತಕ್ಕೆ ಪತ್ರ ಬರೆದಿದ್ದರೂ ಜನಪ್ರತಿನಿಧಿಗಳ ಒತ್ತಡದ ಪರಿಣಾಮ ಅಕ್ರಮ ನಡೆಸುವವರ ವಿರುದ್ಧ ಕ್ರಮಕೈಗೊಳ್ಳಲು ಅಧಿಕಾರಿಗಳು ಹಿಂದೇಟು ಹಾಕುತ್ತಿದ್ದಾರೆ.
ಎಡದಂಡೆ ಕಾಲುವೆ ರಾಂಪೂರ, ಮಲ್ಲಾಪೂರ ಮಧ್ಯೆ ಎರಡು ಬಾರಿ ಬಿರುಕು ಬಿಟ್ಟು ಅಪಾರ ನಷ್ಟವುಂಟಾಗಿತ್ತು. ಸೂಕ್ಷ್ಮ ಪ್ರದೇಶದಲ್ಲಿ ನಿತ್ಯವೂ ಕಲ್ಲು ಗಣಿಗಾರಿಕೆಗಾಗಿ ಸ್ಫೋಟ ಮಾಡಲಾಗುತ್ತಿದೆ. ಸ್ಥಳೀಯರು ಇದನ್ನು ವಿರೋಧಿಸಿದರೆ ಅಕ್ರಮ ಕಲ್ಲು ಗಣಿಗಾರಿಕೆ ಮಾಫಿಯಾದವರು ದೌರ್ಜನ್ಯವೆಸಗುತ್ತಿದ್ದಾರೆ. ಕಲ್ಲು ಸ್ಫೋಟ ನಡೆಸಲು ಪೊಲೀಸ್ ಮತ್ತು ಗಣಿ ಭೂವಿಜ್ಞಾನ ಇಲಾಖೆಗಳ ಪರವಾನಗಿ ಅಗತ್ಯ. ಕಲ್ಲು ಗಣಿಗಾರಿಕೆ ನಡೆಯುವ ಗ್ರಾಮಗಳಲ್ಲಿ ಅಪಾಯಕಾರಿ ಸ್ಫೋಟಕಗಳನ್ನು ಅಸುರಕ್ಷಿತವಾಗಿ ಸಂಗ್ರಹ ಮಾಡಿ, ನಿತ್ಯ ಬೆಳಗಿನ ಜಾವ ಕಲ್ಲುಗಳನ್ನು ಸ್ಫೋಟಿಸಲಾಗುತ್ತದೆ.
ಮಲ್ಲಾಪೂರ ಹತ್ತಿರ ಎಡದಂಡೆ ಕಾಲುವೆ ಎರಡು ಬದಿಯಲ್ಲಿ ಕಲ್ಲು ಗಣಿಗಾರಿಕೆ ನಡೆಸಲಾಗುತ್ತಿದ್ದು, ಕಲ್ಲುಗಳ ಸ್ಫೋಟ ಮಾಡಲು ಬಳಸುವ ಡೈನಾಮೆಟ್‌ನಿಂದಾಗಿ ಕಾಲುವೆ ಭದ್ರತೆಗೆ ಧಕ್ಕೆಯಾಗುತ್ತಿದೆ. ಈಗಾಗಲೇ ರಾಂಪೂರ ಹತ್ತಿರ ಎರಡು ಭಾರಿ ಕಾಲುವೆ ಬಿರುಕುಗೊಂಡು ಅಪಾರ ನಷ್ಟವುಂಟಾಗಿತ್ತು. ಅಲ್ಲಿ ಶಾಶ್ವತ ದುರಸ್ತಿ ಮಾಡಲಾಗಿದ್ದು, ಪುನಃ ಕಲ್ಲು ಒಡೆಯಲು ಸ್ಫೋಟಕ ಬಳಕೆ ಮತ್ತು ಕಾಲುವೆ ಮೇಲೆ ಲಾರಿಗಳ ಓಡಾಟದಿಂದ ಕಾಲುವೆಗೆ ಧಕ್ಕೆಯಾಗುವ ಸಂಭವವಿದೆ. ಈಗಾಗಲೇ ತಾಲೂಕು ಆಡಳಿತಕ್ಕೆ ಪತ್ರ ಬರೆಯಲಾಗಿದೆ. ಪುನಃ ಮತ್ತೂಮ್ಮೆ ಜಿಲ್ಲಾಡಳಿತ ಮತ್ತು ಹಂಪಿ ಅಭಿವೃದ್ಧಿ ಪ್ರಾಧಿಕಾರಕ್ಕೆ ಅಕ್ರಮ ಕಲ್ಲು ಗಣಿಗಾರಿಕೆ ನಿಲ್ಲಿಸಲು ಪತ್ರ ಬರೆಯಲಾಗುತ್ತದೆ.
– ಸಿ. ಮಂಜುನಾಥ, ಮುಖ್ಯ ಅಭಿಯಂತರರು ತುಂಗಭದ್ರಾ ಯೋಜನೆ
ಮಲ್ಲಾಪೂರ ಸುತ್ತಲಿನ ಪ್ರದೇಶದಲ್ಲಿ ಅಕ್ರಮ ಕಲ್ಲು ಗಣಿಗಾರಿಕೆ ನಡೆಯುವ ಕುರಿತು “ಉದಯವಾಣಿ’ ಪತ್ರಿಕೆಯಲ್ಲಿ ಪ್ರಕಟವಾದ ವರದಿ ಹಿನ್ನೆಲೆಯಲ್ಲಿ ಅಕ್ರಮ ನಡೆಯುವ ಸ್ಥಳದಲ್ಲಿ ಪೊಲೀಸ್ ಕಾವಲು ಹಾಕಲಾಗಿದೆ. ಹಂಪಿ ಪ್ರಾಧಿ ಕಾರದ ಆಯುಕ್ತರಿಗೆ ಕರೆ ಮಾಡಿ ಸೂಕ್ತ ಹದ್ದುಬಸ್ತು ಮಾಡಿ ಪ್ರಾ ಧಿಕಾರದ ವ್ಯಾಪ್ತಿಯ ಬೆಟ್ಟಗುಡ್ಡ ಪ್ರದೇಶದಲ್ಲಿ ಕಾವಲು ಹಾಕುವಂತೆ ತಿಳಿಸಲಾಗಿದೆ.
ಕಾಲುವೆ ಮೇಲೆ ಬೃಹತ್ ಗಾತ್ರದ ವಾಹನ ಮತ್ತು ಅತೀ ಭಾರದ ವಸ್ತು ಸಾಗಾಟ ನಿಷೇಧ ಮಾಡಲಾಗಿದ್ದು, ಕಾಲುವೆ ಮೇಲೆ ಹೋಗುವ ಬೃಹತ್ ವಾಹನಗಳ ವಿರುದ್ಧ ಕೇಸ್ ದಾಖಲಿಸಲಾಗುತ್ತದೆ.
– ರುದ್ರೇಶ ಉಜ್ಜನಕೊಪ್ಪ, ಡಿವೈಎಸ್‌ಪಿ
– ಕೆ.ನಿಂಗಜ್ಜ