ಅಫಜಲಪುರ: ಸಾಮಾನ್ಯವಾಗಿ ಗ್ರಾಮೀಣ ರಸ್ತೆಗಳು, ಜಿಲ್ಲಾ ಮುಖ್ಯ ರಸ್ತೆಗಳು, ರಾಜ್ಯ-ರಾಷ್ಟ್ರೀಯ ಹೆದ್ದಾರಿಗಳು ಹದಗೆಟ್ಟಾಗ ಸಂಬಂಧಪಟ್ಟ ಇಲಾಖೆ ಅಧಿಕಾರಿಗಳು ಸ್ಪಂದಿಸಿ ಸಮಸ್ಯೆ ಸರಿಪಡಿಸುವ ಕೆಲಸ ಮಾಡುತ್ತಾರೆ. ಆದರೆ ಪಟ್ಟಣದ ಬಸವೇಶ್ವರ ವೃತ್ತದಲ್ಲಿ ರಾಷ್ಟ್ರೀಯ ಹೆದ್ದಾರಿ ತಿಂಗಳಿಗೊಮ್ಮೆ ಕಿತ್ತು ಹೋಗುತ್ತಿದ್ದರೂ ಗಮನಿಸುವರೇ ಇಲ್ಲದಂತಾಗಿದ್ದು, ಸಂಚಾರಕ್ಕೆ ಕಿರಿಕಿರಿ ಎನಿಸುತ್ತಿದೆ.
ಅದರಲ್ಲೂ ಈಗ ಮಳೆಗಾಲ ಇರುವುದರಿಂದ ಹೆದ್ದಾರಿ ಕಿತ್ತುಕೊಂಡು ಹೋಗಿ ದೊಡ್ಡ ದೊಡ್ಡ ಗುಂಡಿಗಳು ಬಿದ್ದಿವೆ. ಹೊಂಡದಲ್ಲಿ ಸಾಕಷ್ಟು ಪ್ರಮಾಣದ ನೀರು ನಿಂತು ಹೆದ್ದಾರಿ ಯಾವುದು, ಹೊಂಡ ಯಾವುದೆಂದು ಗೊತ್ತಾಗದಂತಾಗಿದೆ. ದ್ವಿಚಕ್ರ, ತ್ರಿಚಕ್ರ ವಾಹನ ಸವಾರರು ಹೊಂಡದಲ್ಲಿ ಬಿದ್ದು ಗಾಯಗೊಂಡ ಉದಾಹರಣೆಗಳಿವೆ. ದೊಡ್ಡ ಗಾತ್ರದ ವಾಹನಗಳು ಸುಗಮವಾಗಿ ಸಂಚರಿಸಲು ಆಗುತ್ತಿಲ್ಲವಾಗಿದೆ. ಅಫಜಲಪುರ ಪಟ್ಟಣದಲ್ಲಿ ರಸ್ತೆಗಳೆಂದರೆ ಕೊಚ್ಚೆ ಗುಂಡಿ, ರಾಡಿ, ಗಲೀಜಿನಿಂದಲೇ ಕೂಡಿರಲಿವೆ ಎನ್ನುವಂತಾಗಿದೆ.
ಸ್ಪಂದಿಸದ ಹೆದ್ದಾರಿ ಪ್ರಾಧಿಕಾರ: ಈ ಸಮಸ್ಯೆ ಸರಿಪಡಿಸುವ ಜವಾಬ್ದಾರಿ ಇರುವುದು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರಕ್ಕೆ. ಹೀಗಾಗಿ ಸಮಸ್ಯೆ ಸರಿಪಡಿಸುವಂತೆ ದೂರವಾಣಿ ಕರೆ ಮಾಡಿದರೆ ಯಾರೊಬ್ಬರು ಸ್ಪಂದಿಸುತ್ತಿಲ್ಲ. ಇದರಿಂದಾಗಿ ಸಾರ್ವಜನಿಕರು, ವಾಹನ ಸವಾರರಿಗೆ ಸಮಸ್ಯೆ ತಲೆದೋರಿದೆ. ಸ್ಥಳೀಯ ಪುರಸಭೆಯವರು ಪಟ್ಟಣದ ಮುಖ್ಯ ರಸ್ತೆಗಳನ್ನು ಸರಿಪಡಿಸುವಲ್ಲಿ ವಿಫಲವಾದರೆ, ಇನ್ನೊಂದೆಡೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದವರು ಹೆದ್ದಾರಿ ಸರಿಪಡಿಸುವ ಗೋಜಿಗೆ ಹೋಗುತ್ತಿಲ್ಲ. ಇವರ ನಡುವೆ ಜನ ಹೈರಾಣ ಆಗಿರುವುದಂತೂ ಸುಳ್ಳಲ್ಲ.
ರಸ್ತೆ ಯಾವುದು, ಹೊಂಡ ಯಾವುದೆಂದು ಗೊತ್ತಾಗುತ್ತಿಲ್ಲ. ತಿಂಗಳಿಗೊಮ್ಮೆ ಡಾಂಬರ್ ಹಾಕುವ ಬದಲಾಗಿ ಶಾಶ್ವತವಾಗಿ ಪರಿಹಾರ ನೀಡುವ ಕೆಲಸ ಏಕೆ ಮಾಡುತ್ತಿಲ್ಲ ಎನ್ನುವುದು ಸಾರ್ವಜನಿಕರ ಪ್ರಶ್ನೆ. ಪಟ್ಟಣದಲ್ಲಿ ರಸ್ತೆ ಸಂಚಾರ ನರಕಯಾತನೆ ಅನುಭವ ನೀಡುತ್ತಿದೆ ಎನ್ನುತ್ತಾರೆ ವಾಹನ ಸವಾರರು.
ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದವರೊಂದಿಗೆ ಮಾತನಾಡಿ ಆದಷ್ಟು ಬೇಗ ರಾಷ್ಟ್ರೀಯ ಹೆದ್ದಾರಿ ಸಮಸ್ಯೆ ಸರಿಪಡಿಸುವಂತೆ ಸೂಚಿಸುತ್ತೇನೆ.
-ಎಂ.ವೈ. ಪಾಟೀಲ, ಶಾಸಕ
-ಮಲ್ಲಿಕಾರ್ಜುನ ಹಿರೇಮಠ