ಉಡುಪಿ: ವಿದ್ಯಾನಗರಿಯೆಂದೇ ಹೆಸರುವಾಸಿಯಾಗಿರುವ ಮಣಿಪಾಲ ತನ್ನ ಪ್ರಾಕೃತಿಕ ಸೌಂದರ್ಯಕ್ಕೂ ಹೆಸರುವಾಸಿಯಾಗಿದೆ. ಮಣಿಪಾಲ ಆಸುಪಾಸಿನಲ್ಲಿರುವ ಹಲವಾರು ಪ್ರಾಕೃತಿಕ ತಾಣಗಳು ಪ್ರಕೃತಿ ಪ್ರಿಯರನ್ನು ಆಗಾಗ್ಗೆ ತನ್ನತ್ತ ಸೆಳೆಯುತ್ತಿರುತ್ತವೆ. ಇನ್ನು ಮಣಿಪಾಲ ನಗರದ ಹೃದಯ ಭಾಗದಲ್ಲಿರುವ ಮುಖ್ಯ ರಸ್ತೆಯ ಇಕ್ಕೆಲಗಳಲ್ಲಿ ಹಲವಾರು ಬೃಹತ್ ಮರಗಳಿದ್ದು ಆ ಮರಗಳ ರೆಂಬೆಗಳು ವಿವಿಧ ಜಾತಿಯ ಪಕ್ಷಿಗಳಿಗೆ ಆಶ್ರಯ ತಾಣವಾಗಿದೆ.
ಆದರೆ ಇದೀಗ ಈ ಭಾಗದಲ್ಲಿ ಚತುಷ್ಪಥ ರಸ್ತೆ ಕಾಮಗಾರಿ ನಡೆಯುತ್ತಿರುವುದರಿಂದ ಮಣಿಪಾಲ ಟೈಗರ್ ಸರ್ಕಲ್ ಬಳಿಯಲ್ಲಿದ್ದ ಬೃಹತ್ ಮರವನ್ನು ಇಂದು ಕಡಿದುರುಳಿಸಲಾಗಿದೆ. ಏಕಾಏಕಿ ತಮ್ಮ ಸೂರನ್ನು ಕಡಿದು ಹಾಕಿದ್ದರಿಂದ ಕಂಗಾಲಾದ ನೂರಾರು ಹಕ್ಕಿಗಳಲ್ಲಿ ಕೆಲವು ಸ್ಥಳದಲ್ಲೇ ಸತ್ತುಬಿದ್ದರೆ ಇನ್ನು ಕೆಲವು ಹಕ್ಕಿಗಳು ಕಡಿದು ಹಾಕಿದ ಮರದ ಆಸುಪಾಸಿನಲ್ಲೇ ದಿನಪೂರ್ತಿ ದಿಕ್ಕುತೋಚದಂತೆ ಕುಳಿತಿದ್ದ ದೃಶ್ಯ ನೋಡುಗರ ಮನಕಲುಕುವಂತಿತ್ತು.
ಪ್ರತೀದಿನ ಬೆಳಿಗ್ಗೆ ಮತ್ತು ಸಾಯಂಕಾಲದ ಸಮಯದಲ್ಲಿ ಈ ಮರಗಳ ತುಂಬೆಲ್ಲಾ ಹಕ್ಕಿಗಳ ಕಲರವವೇ ತುಂಬಿರುತ್ತದೆ. ಮತ್ತು ಇದರ ಅಡಿಯಲ್ಲಿ ಸಾಗುವವರಿಗೆ ಮತ್ತು ನಿಲ್ಲಿಸಿದ ವಾಹನಗಳಿಗೆ ‘ಹಿಕ್ಕೆ ಪ್ರಸಾದ’ವೂ ಸಿಗುತ್ತಿರುತ್ತದೆ! ಆದರೆ ಏನೇ ಆದರೂ ಈ ಹಕ್ಕಿಗಳ ಕಲರವ ಈ ಭಾಗದ ಜನರ ನಿತ್ಯ ಜೀವನದ ಒಂದು ಭಾಗವೇ ಆಗಿ ಹೋಗಿತ್ತು. ಆದರೆ ಇದೀಗ ರಸ್ತೆ ಅಗಲವಾಗುತ್ತಿದೆ, ಆದರೆ ಈ ಮೂಕಜೀವಿಗಳ ವಿಚಾರದಲ್ಲಿ ನಮ್ಮ ಮನಸ್ಸು ಕಿರಿದಾಗುತ್ತಿದೆ, ಇವುಗಳ ಮೂಕವೇದನೆಯನ್ನು ಕಂಡವರ ಹೃದಯ ಭಾರವಾಗುತ್ತಿದೆ. ಇನ್ನು ಇಲ್ಲಿ ಹಕ್ಕಿಗಳ ಕಲರವ ಕೇಳಿಸದು, ‘ಹಿಕ್ಕೆ ಪ್ರಸಾದ’ವೂ ಸಿಗದು.
ಗೂಡಿನಲ್ಲಿರುವ ತನ್ನ ಮರಿಗೆ ಆಹಾರವನ್ನು ಹುಡುಕಿ ಹೊರಟಿದ್ದ ಅದೆಷ್ಟೋ ಹಕ್ಕಿಗಳು ಹಿಂತಿರುಗಿ ಬರುವಷ್ಟರಲ್ಲಿ ಎಷ್ಟೋ ಕಾಲದಿಂದ ಅವುಗಳ ನೆಲೆಯಾಗಿದ್ದ ಮರವೇ ನೆಲಕ್ಕೊರಗಿತ್ತು. ಇನ್ನು ಮರದಲ್ಲಿದ್ದ ಗೂಡುಗಳಲ್ಲಿದ್ದ ಮೊಟ್ಟೆಗಳು ಮತ್ತು ಹಕ್ಕಿಮರಿಗಳು ಮರದ ರೆಂಬೆ ಕೊಂಬೆಗಳೊಂದಿಗೇ ನೆಲಕ್ಕೆ ಬಿದ್ದು ನಾಶವಾಗಿ ಹೋಗಿದ್ದವು.
ಅಭಿವೃದ್ಧಿ ಕಾರ್ಯಗಳನ್ನು ನಡೆಸುವಾಗ ಅಕ್ಕಪಕ್ಕದ ಮರಗಳನ್ನು ಕಡಿಯುವುದು ಅನಿವಾರ್ಯವಾದರೂ ಈ ಸಂದರ್ಭದಲ್ಲಿ ಮರಗಳಲ್ಲಿ ಆಶ್ರಯ ಪಡೆದುಕೊಂಡಿರುವ ಪಕ್ಷಿಗಳಿಗೆ ಬದಲೀ ನೆಲೆ ಒದಗಿಸಿಕೊಡುವ ನಿಟ್ಟಿನಲ್ಲಿ ಪಕ್ಷಿ ಪ್ರಿಯರೊಂದಿಗೆ ಚರ್ಚಿಸಿ ಮುಂದುವರಿಯುತ್ತಿದ್ದರೆ ಮೂಕ ಜೀವಿಗಳು ಈ ರೀತಿ ನರಳಾಡುವುದನ್ನು ತಪ್ಪಿಸಬಹುದಿತ್ತಲ್ಲವೇ? ಮುಂಬರುವ ದಿನಗಳಲ್ಲಾದರೂ ಜಿಲ್ಲಾಡಳಿತ ಮತ್ತು ಕಾಮಗಾರಿಯ ಗುತ್ತಿಗೆದಾರರು ಈ ಕುರಿತಾಗಿ ಗಮನಹರಿಸುವರೇ ಎಂಬ ಪ್ರಶ್ನೆ ಪಕ್ಷಿ ಪ್ರಿಯರದ್ದು ಮತ್ತು ಸ್ಥಳೀಯರದ್ದಾಗಿದೆ.