ಶಿಡ್ಲಘಟ್ಟ: ರಸ್ತೆ ನಿರ್ಮಾಣ ಮಾಡುವ ವಿಚಾರದಲ್ಲಿ ಕಾಂಗ್ರೆಸ್-ಜೆಡಿಎಸ್ ಕಾರ್ಯಕರ್ತರ ನಡುವೆ ಘರ್ಷಣೆ ನಡೆದು ಹಲವರು ಗಾಯಗೊಂಡು ಗುಡಿಸಲು ಮನೆಯನ್ನು ಅಗ್ನಿಸ್ಪರ್ಶ ಮಾಡಿರುವ ಘಟನೆ ತಾಲೂಕಿನ ಇ.ತಿಮ್ಮಸಂದ್ರ ಗ್ರಾಮ ಪಂಚಾಯಿತಿಯ ಸಡ್ಲುವಾರಹಳ್ಳಿ ಗ್ರಾಮದಲ್ಲಿ ನಡೆದಿದೆ.
ಕ್ಷೇತ್ರದ ಶಾಸಕ ವಿ.ಮುನಿಯಪ್ಪ ಮೂಲಕ ಮಂಜೂರಾದ ಅನುದಾನದಲ್ಲಿ ಸಡ್ಲುವಾರಹಳ್ಳಿ ಗ್ರಾಮದಲ್ಲಿ ಜಯರಾಂರೆಡ್ಡಿ ಎಂಬುವರು ಸೀಮೆಂಟ್ ರಸ್ತೆ ನಿರ್ಮಿಸಲು ಮುಂದಾಗಿದ್ದ ಸಂದರ್ಭದಲ್ಲಿ ಗ್ರಾಮ ಪಂಚಾಯಿತಿ ಸದಸ್ಯ ಜೆಡಿಎಸ್ ರಮೇಶ್ ಜೆಸಿಬಿಗೆ ಅಡ್ಡಲಾಗಿ ನಿಂತು ರಸ್ತೆ ಕಾಮಗಾರಿ ನಡೆಸಬಾರದು ನಾವು ಗ್ರಾಮ ಪಂಚಾಯಿತಿಯಿಂದ ರಸ್ತೆಯನ್ನು ಅಭಿವೃಧ್ಧಿಗೊಳಿಸುತ್ತೇವೆ ಎಂದು ಆಕ್ಷೇಪ ವ್ಯಕ್ತಪಡಿಸಿದರೆನ್ನಲಾಗಿದೆ ವಿಷಯ ತಿಳಿದ ಕೂಡಲೇ ಗ್ರಾಪಂ ಮಾಜಿ ಅಧ್ಯಕ್ಷ ದೇವರಾಜ್ ಮಧ್ಯಪ್ರವೇಶಿಸಿ ಅಭಿವೃಧ್ಧಿ ವಿಷಯದಲ್ಲಿ ಯಾರು ಗಲಾಟೆ ಮಾಡಿಕೊಳ್ಳುವ ಅವಶ್ಯಕತೆಯಿಲ್ಲ ಊರಿನ ಅಭಿವೃಧ್ಧಿಗಾಗಿ ಎಲ್ಲರು ಅನುದಾನವನ್ನು ತಂದು ಮಾಡಲಿ ಯಾರು ಸಹ ವಿರೋಧ ಅಥವಾ ಆಕ್ಷೇಪ ಮಾಡುವುದು ಸೂಕ್ತವಲ್ಲವೆಂದು ಸಮಾಧಾನಗೊಳಿಸಿದ್ದಾರೆ.
ಇದನ್ನೂ ಓದಿ : ಹುದ್ದೆ ನೇಮಕಾತಿಗೆ ವ್ಯಕ್ತಿಯಿಂದ ಹಣ ಸ್ವೀಕರಿಸುತ್ತಿದ್ದ ಮಹಿಳಾ ಅಧಿಕಾರಿ ಎಸಿಬಿ ಬಲೆಗೆ
ನಂತರ ಇದೇ ವಿಚಾರದಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ಕಾರ್ಯಕರ್ತರ ಮಧ್ಯೆ ಘರ್ಷಣೆ ನಡೆದು ಜೆಡಿಎಸ್‍ನ ನಾಗಭೂಷಣ್‍ಚಾರಿ-ರಮೇಶ್ ಹಾಗೂ ಕಾಂಗ್ರೆಸ್‍ನ ಜಯರಾಂರೆಡ್ಡಿ-ನರಸಿಂಹಮೂರ್ತಿ ಗಾಯಗೊಂಡಿದ್ದಾರೆ ಎಂದು ಹೇಳಲಾಗಿದ್ದು ಮತ್ತೊಂದಡೆ ಜೆಡಿಎಸ್‍ನ ನಾಗಭೂಷಣ್‍ಚಾರಿ ಸಹಚರರು ನರಸಿಂಹಮೂರ್ತಿ ಅವರಿಗೆ ಸೇರಿದ ಗುಡಿಸಲಿಗೆ ಬೆಂಕಿ ಇಟ್ಟಿದ್ದಾರೆ ಎನ್ನಲಾಗಿದೆ.
ವಿಷಯ ತಿಳಿದ ಕೂಡಲೇ ದಿಬ್ಬೂರಹಳ್ಳಿ ಪೋಲಿಸ್ ಠಾಣೆಯ ಪಿಎಸ್‍ಐ ನಾರಾಯಣಪ್ಪ ಮತ್ತು ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಗ್ರಾಮದಲ್ಲಿ ಶಾಂತಿ ನೆಲೆಸಲು ಕ್ರಮ ಕೈಗೊಂಡಿದ್ದಾರೆ ಘಟನೆಗೆ ಸಂಬಂಧಿಸಿದಂತೆ ಎರಡು ಕಡೆಯಿಂದ ದೂರು-ಪ್ರತಿದೂರು ದಾಖಲಿಸಿಕೊಂಡು ತನಿಖೆಯನ್ನು ಮುಂದುವರೆಸಿದ್ದಾರೆ.