ಮಾದನಹಿಪ್ಪರಗಿ: ರಸ್ತೆ ಮಧ್ಯೆದಲ್ಲಿ ಕಸದ ರಾಶಿ. ಇದರಲ್ಲಿ ಹಂದಿಗಳ ವಾಸ. ವಾರಕ್ಕೊಮ್ಮೆ ಒಂದೊಂದು ವಾರ್ಡ್‌ನ ಕಸ ಗೂಡಿಸುವುದು. 15 ದಿನಕ್ಕೊಮ್ಮೆ ಕಸ ವಿಲೇವಾರಿ, ತಿಂಗಳಲ್ಲಿ ಒಂದೆರಡು ಸಲ ಚರಂಡಿ ಸ್ವಚ್ಛತೆ. ಇದು ಇಲ್ಲಿನ ಗ್ರಾಮ ಪಂಚಾಯಿತಿ ಕಾರ್ಯವೈಖರಿ.
ಗ್ರಾಮ 12 ಸಾವಿರಕ್ಕಿಂತ ಹೆಚ್ಚು ಜನಸಂಖ್ಯೆ ಹೊಂದಿದೆ. ಸ್ಥಳಿಯವಾಗಿಯೇ ಗ್ರಾಮ ಪಂಚಾಯಿತಿ ಇದ್ದು, ಇದಕ್ಕೆ ಉಪ ಗ್ರಾಮ ವಾಡಿ ಇದೆ. ಎಂಟು ವಾರ್ಡ್‌ಗಳನ್ನು ಹೊಂದಿದ್ದು 24 ಜನ ಪಂಚಾಯಿತಿ ಸದಸ್ಯರಿದ್ದಾರೆ. ಆದರೆ ಯಾರೂ ಗ್ರಾಮದ ಸಮಸ್ಯೆಗಳ ಬಗ್ಗೆ ಸಾಮಾನ್ಯ ಸಭೆಗಳಲ್ಲಿ ಮಾತನಾಡುತ್ತಿಲ್ಲ.
ನರೇಗಾ ಕಾಮಗಾರಿ, ಅನುದಾನ ಎಷ್ಟು ಬಂತು? ಎಷ್ಟು ಖರ್ಚಾಯಿತು? ಎನ್ನುವ ಚರ್ಚೆಗೆ ಗ್ರಾಪಂ ಸಭೆಗಳಲ್ಲಿ ಚರ್ಚೆಯಾಗುತ್ತಿದಯೇ ವಿನಃ ಗ್ರಾಮ ಸ್ವಚ್ಛತೆ ಕುರಿತು ಯಾರು ವಿಚಾರ ಮಾಡುತ್ತಲೇ ಇಲ್ಲ. ಗ್ರಾಮದಲ್ಲಿ ಕಸದ ತೊಟ್ಟಿಗಳಿಲ್ಲದೇ ಇರುವುದರಿಂದ ಗ್ರಾಮಸ್ಥರು ಬೀದಿಯಲ್ಲಿಯೇ ಕಸ ಎಸೆಯುತ್ತಿದ್ದಾರೆ. ಈ ಕಸದಲ್ಲೇ ಹಂದಿಗಳು ಓಡಾಡಿ ರಸ್ತೆ ತುಂಬಾ ಹರಡುತ್ತಿವೆ.
ಸರದಿಯಂತೆ ಒಂದು ವಾರ್ಡ್‌ನಲ್ಲಿ ಒಂದು ದಿನ ಮಾತ್ರ ಕಸ ಗೂಡಿಸುತ್ತಾರೆ. ಹೀಗಾಗಿ ಕಸ ನಿರ್ವಹಣೆ ಸಮಸ್ಯೆ ಇದೆ. ಇದರಿಂದಾಗಿ ಹಂದಿಗಳ ಕಾಟ ವೀಪರಿತವಾಗಿದೆ. ಒಮ್ಮೊಮ್ಮೆ ಗ್ರಾಮಸ್ಥರ ಮನೆಗಳಲ್ಲಿಯೂ ಹಂದಿಗಳು ಪ್ರವೇಶಿಸುತ್ತಿವೆ. ಹೀಗಾಗಿ ಇಲ್ಲಿನ ನಿವಾಸಿಗಳು ಮನೆಯ ಬಾಗಿಲಿಗೆ ಸಣ್ಣದೊಂದು ಕಬ್ಬಿಣ ಅಥವಾ ಕಟ್ಟಿಗೆಯ ಕಿರು ಬಾಗಿಲು ಹಚ್ಚಿಕೊಂಡಿದ್ದಾರೆ.
ಗ್ರಾಮದ ಮಧ್ಯದಲ್ಲಿಯೇ (ಕಚೇರಿಯಲ್ಲಿ) ಪಾಳು ಬಿದ್ದ ಜಾಗವಿದ್ದು, ಇದನ್ನೇ ಮಹಿಳೆಯರು ಶೌಚಕ್ಕೆ ಬಳಸುತ್ತಾರೆ. ಇದು ಕೂಡಾ ಹಂದಿಗಳ ತಾಣವಾಗಿದೆ. ಮಹಿಳೆಯರಿಗಾಗಿಯೇ ಗ್ರಾಮದಲ್ಲಿ ನಾಲ್ಕು ಸಾರ್ವಜನಿಕ ಶೌಚಾಲಯಗಳಿವೆ. ಆದರೆ ನಿರ್ವಹಣೆ ಕೊರತೆಯಿಂದ ಬಾಗಿಲು ಮುಚ್ಚಿಕೊಂಡೇ ಇವೆ. ಈ ಕುರಿತು ಗ್ರಾಪಂ ಹಂದಿಗಳ ಮಾಲೀಕರನ್ನು ಕರೆದು ಎಚ್ಚರಿಕೆ ನೀಡಿಲ್ಲ. ಈ ಕುರಿತು ಗ್ರಾಪಂಗೆ ಕೇಳಿದರೆ ದೂರು ನೀಡಿದರೆ ಮಾತ್ರ ವಿಚಾರಿಸುತ್ತೇವೆ ಎನ್ನುತ್ತಿದ್ದಾರೆ ಎಂದು ಗ್ರಾಮಸ್ಥರು ಅಳಲು ತೋಡಿಕೊಂಡಿದ್ದಾರೆ.
ಆಳಂದ ತಾಲೂಕಿನಲ್ಲಿಯೇ ದೊಡ್ಡ ಗ್ರಾಮ ಮಾದನಹಿಪ್ಪರಗಿ. ಪಂಚಾಯಿತಿಯಲ್ಲಿ ಕರ್ಮಚಾರಿಗಳ ಕೊರತೆಯಿದೆ. ದಿನಗೂಲಿ ನೌಕರರು ಕಡಿಮೆ ಇದ್ದಾರೆ. ಗ್ರಾಮದ ಕುಡಿಯುವ ನೀರಿನ ಪಂಪಸೆಟ್‌ಗಳ ನಿರ್ವಹಣೆಗೆ ಜಾಸ್ತಿ ಖರ್ಚಾಗುತ್ತದೆ. ಸರ್ಕಾರದ ಅನುದಾನವೂ ಸಾಕಾಗುತ್ತಿಲ್ಲ. ಸ್ಥಳೀಯ ಸಂಪನ್ಮೂಲ ಕ್ರೋಢಿಕರಣ ಹೆಚ್ಚಾಗಬೇಕು. ಇದು ಗ್ರಾಮ ಪಂಚಾಯಿತಿ ಪಟ್ಟಣ ಪಂಚಾಯಿತಿ ಆದರೆ ಮಾತ್ರ ಸಾಧ್ಯವಾಗಬಲ್ಲದು.
–ಪ್ರಭು ಎಸ್. ಗಡಗಿ, ಪಿಡಿಒ
-ಪರಮೇಶ್ವರ ಭೂಸನೂರ