ಹಾವೇರಿ: ರೈತ ಹುತಾತ್ಮ ದಿನಾಚರಣೆ, ತುಂಗಭದ್ರಾ ನದಿಯಿಂದ ಜಿಲ್ಲೆಯ ಎಲ್ಲ ಕೆರೆಗಳಿಗೆ ನೀರು ತುಂಬಿಸುವ ಯೋಜನೆ ಅನುಷ್ಠಾನ ಹಾಗೂ ಬರ ಪರಿಹಾರಕ್ಕೆ ಆಗ್ರಹಿಸಿ ಜೂ. 10ರಂದು ಬೆಳಗ್ಗೆ 10:00ಕ್ಕೆ ನಗರದ ಸಿದ್ದಪ್ಪ ವೃತ್ತದಲ್ಲಿ ರಸ್ತೆತಡೆ ಚಳವಳಿ ಹಮ್ಮಿಕೊಳ್ಳಲಾಗಿದೆ ಎಂದು ರಾಜ್ಯ ರೈತ ಸಂಘ ಹಾಗೂ ಹಸಿರುಸೇನೆ ಜಿಲ್ಲಾ ಘಟಕದ ಪ್ರಧಾನ ಕಾರ್ಯದರ್ಶಿ ಮಲ್ಲಿಕಾರ್ಜುನ ಬಳ್ಳಾರಿ ತಿಳಿಸಿದರು.
ನಗರದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರೈತರ ಕೃಷಿ ಸಾಲ ಸಂಪೂರ್ಣ ಮನ್ನಾ ಮಾಡಬೇಕು. ರಾಜ್ಯದಲ್ಲಿ ಮಳೆ ಕೊರತೆ ಸಾಧ್ಯತೆ ಇರುವುದರಿಂದ ಮೋಡಬಿತ್ತನೆಗೆ ಕ್ರಮ ಕೈಗೊಳ್ಳಬೇಕು. ತುಂಗಾ ಮೇಲ್ದಂಡೆ ಕಾಲುವೆಗೆ ಜಮೀನು ಕಳೆದುಕೊಂಡ ರೈತರಿಗೆ ಪರಿಹಾರ ಕೊಡಬೇಕು. ಜಿಲ್ಲೆಗೆ ಪ್ರತ್ಯೇಕ ಸಹಕಾರಿ ಬ್ಯಾಂಕ್ ಹಾಗೂ ಪ್ರತ್ಯೇಕ ಹಾಲು ಒಕ್ಕೂಟ ಸ್ಥಾಪಿಸಬೇಕು. 2016-17, 2017-18ನೇ ಸಾಲಿನ ಮುಂಗಾರು ಹಾಗೂ ಹಿಂಗಾರು ಬೆಳೆವಿಮೆ ಬಿಡುಗಡೆ ಮಾಡಬೇಕು. ಗ್ರಾಮೀಣ ಪ್ರದೇಶದ ರಸ್ತೆ ದುರಸ್ತಿ ಮಾಡಬೇಕು. ಹಾಲಿನ ಪ್ರೋತ್ಸಾಹಧನ ಬಿಡುಗಡೆ ಮಾಡಬೇಕು. ಹಾಗೂ ಅಂತಿಮ ಸಂಸ್ಕಾರದ ಹಣವನ್ನು ಕೂಡಲೇ ಬಿಡುಗಡೆ ಮಾಡಬೇಕು ಎಂದು ಚಳವಳಿ ಮೂಲಕ ಒತ್ತಾಯಿಸಲಾಗುವುದು ಎಂದು ತಿಳಿಸಿದರು.
ಚುನಾವಣೆ ಬಂದಾಗ ಮಾತ್ರ ರಾಜಕೀಯ ಪಕ್ಷಗಳಿಗೆ ರೈತರು ನೆನಪಿಗೆ ಬರುತ್ತಾರೆ. ಸಾಲ ಮನ್ನಾದಂಥ ಘೋಷಣೆ ಮಾಡಿ ಸುಳ್ಳು ಭರವಸೆ ಕೊಡುತ್ತ ನಾಡಿನ ಜನರಿಗೆ ಅನ್ಯಾಯವೆಸಗಿದ್ದಾರೆ. ಜಿಲ್ಲೆಯಲ್ಲಿ ಭೀಕರ ಬರಗಾಲದಿಂದ ಕೊಳವೆಬಾವಿಗಳು ಬತ್ತಿ ಹೋಗಿವೆ. ತೋಟದ ಬೆಳೆ ಸಂಪೂರ್ಣ ನಷ್ಟವಾಗಿದೆ. ಕುಡಿಯುವ ನೀರಿನ ಅಭಾವ ತೀವ್ರವಾಗಿದೆ. ಆದರೆ, ಇದಾವುದನ್ನೂ ತಲೆಕೆಡಿಸಿಕೊಳ್ಳದ ರಾಜಕೀಯ ಪಕ್ಷಗಳು ಕುರ್ಚಿಗಾಗಿ ಸರ್ಕಸ್ ನಡೆಸಿರುವುದು ವಿಷಾದನೀಯ ಎಂದರು.
ಹಾವೇರಿ ಗೋಲಿಬಾರ್ ನಡೆದು 11 ವರ್ಷ ಗತಿಸಿ 12ನೇ ವರ್ಷಕ್ಕೆ ಪಾದಾರ್ಪಣೆ ಮಾಡಿದೆ ಎಂದು ಹೇಳಲು ವಿಷಾದವೆನಿಸುತ್ತದೆ. ಅಂದು ಬೀಜ, ಗೊಬ್ಬರಕ್ಕಾಗಿ ಚಳವಳಿ ಮಾಡುತ್ತಿದ್ದ ರೈತರ ಮೇಲೆ ಗೋಲಿಬಾರ್ ನಡೆಸಿ ಇಬ್ಬರು ರೈತರನ್ನು ಬಲಿ ಪಡೆಯಲಾಗಿತ್ತು. ಹಾಗಾಗಿ ಜೂ. 10 ಜಿಲ್ಲೆಯ ಪಾಲಿಗೆ ಕರಾಳ ದಿನವಾಗಿದೆ. ಆ ದಿನವನ್ನು ರೈತ ಹೋರಾಟ ದಿನವನ್ನಾಗಿ ಆಚರಿಸಿಕೊಂಡು ಬರಲಾಗಿದೆ ಎಂದು ತಿಳಿಸಿದರು.
ರೈತ ಸಂಘಟನೆ ಪ್ರಮುಖರಾದ ಸುರೇಶ ಚಲವಾದಿ, ಹೇಮಣ್ಣ ಕೋಡಿಹಳ್ಳಿ, ಶಂಕರಪ್ಪ ಅರಗಂಜಿ, ವೀರಭದ್ರಪ್ಪ ಯಲಿಗಾರ, ಮಲ್ಲಪ್ಪ ಗಿರಿಲಿಂಗಪ್ಪನವರ ಸುದ್ದಿಗೋಷ್ಠಿಯಲ್ಲಿದ್ದರು.