Advertisement
ಬಸ್ರೂರು ಮೂರು ಕೈ ಸಮೀಪ ಅಂಡರ್‌ಪಾಸ್ ಕಾಮಗಾರಿ ನಡೆಯುತ್ತಿರುವುದರಿಂದ ಈಗ ಕುಂದಾಪುರದ ಸರ್ವಿಸ್ ರಸ್ತೆಯಿಂದ ವಿನಾಯಕ ಚಿತ್ರ ಮಂದಿರದವರೆಗೆ ಸರ್ವಿಸ್ ರಸ್ತೆಯಲ್ಲಿ ಮಾತ್ರ ಸಂಚಾರಕ್ಕೆ ಅನುವು ಮಾಡಿಕೊಡಲಾಗಿದೆ. ಮಂಗಳವಾರ ಸಂಜೆ ವೇಳೆಗೆ ಜೆಸಿಬಿ ವಾಹನದ ಕೊಕ್ಕೆ ವಿದ್ಯುತ್ ವಯರನ್ನು ಎಳೆದುಕೊಂಡು ಹೋದ ಪರಿಣಾಮ ವಿದ್ಯುತ್ ಟ್ರಾನ್ಸ್‌ಫರ್ ಕಂಬ ಮುರಿದು ಬಿದ್ದಿದ್ದು, ಅದರ ಬಳಿಕ ಅದು ಮತ್ತೆರಡು ಕಂಬಗಳಿಗೆ ತಾಗಿ, ಅದು ಕೂಡ ಬಸ್ರೂರು ಮೂರು ಕೈ ಸಮೀಪದ ರಸ್ತೆಗೆ ಬಿದ್ದಿದೆ. ಇದರಿಂದ ರಾ.ಹೆ. 66 ರಲ್ಲಿ ಸಂಚಾರ ದಟ್ಟಣೆ ಹೆಚ್ಚಿದ್ದುದರಿಂದ ಟ್ರಾಫಿಕ್ ಜಾಮ್ ಉಂಟಾಗಿತ್ತು. ಅದಲ್ಲದೆ ರೋಗಿಯನ್ನು ಆಸ್ಪತ್ರೆಗೆ ತುರ್ತಾಗಿ ಕೊಂಡೊಯ್ಯುತ್ತಿದ್ದ ಆ್ಯಂಬುಲೆನ್ಸ್‌ವೊಂದು ಈ ವಾಹನ ದಟ್ಟಣೆಯಲ್ಲಿ ಸಿಕ್ಕಿ ಹಾಕಿಕೊಂಡಿತ್ತು. ಬಳಿಕ ಪೊಲೀಸರು ಸಂಚಾರಕ್ಕೆ ವ್ಯವಸ್ಥೆ ಮಾಡಿಕೊಟ್ಟರು. ಬಳಿಕ ಕುಂದಾಪುರ ಸಂಚಾರ ಪೊಲೀಸರು ಸ್ಥಳಕ್ಕಾಗಮಿಸಿ, ಸುಗಮ ಸಂಚಾರಕ್ಕೆ ಅನುವು ಮಾಡಿಕೊಟ್ಟರು.
ಮೂರು ದೊಡ್ಡ ಹಾಗೂ ಎರಡು ಸಣ್ಣ ವಿದ್ಯುತ್ ಕಂಬಗಳು ಮುರಿದು ಬಿದ್ದ ಪರಿಣಾಮ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಿದೆ. ಕುಂದಾಪುರ ಪರಿರಸದ ಶೇ. 25 ರಷ್ಟು ಭಾಗದಲ್ಲಿ ರಾತ್ರಿಯಿಡೀ ವಿದ್ಯುತ್ ಪೂರೈಕೆ ಸ್ಥಗಿತಗೊಳಿಸಲಾಗಿದೆ.