Advertisement

ರಸ್ತೆ, ಚರಂಡಿ ಬೇಡಿಕೆಯೇ ಪ್ರಮುಖ ಸಮಸ್ಯೆ

10:21 PM Feb 09, 2020 | Sriram |

ಕುಂದಾಪುರ: ಅತ್ತ ನಗರ ಇತ್ತ ಹಳ್ಳಿ ಎಂಬಂತಹ ಪರಿಸರ ಇರುವ ವಾರ್ಡ್‌ ಇದು. ಪುರಸಭೇ ವ್ಯಾಪ್ತಿಯಾದರೂ ಗ್ರಾಮೀಣ ಪ್ರದೇಶವನ್ನೂ ಒಳಗೊಂಡಂತಿದೆ.

Advertisement

ಬಸ್ರೂರುಮೂರುಕೈ ಬಳಿ ಶಿವಮೊಗ್ಗ ಹೆದ್ದಾರಿ ಬದಿಯಲ್ಲಿ ಚರಂಡಿ ಇಲ್ಲ. ಬಸ್‌ ನಿಲ್ಲಿಸಲು ಸೂಕ್ತ ವ್ಯವಸ್ಥೆ ಇಲ್ಲ. ಸರ್ವಿಸ್‌ ರಸ್ತೆಯೇ ಇಲ್ಲಿ ಹೆದ್ದಾರಿಯಾದ ಕಾರಣ ಪ್ರಯಾಣಿಕರಿಗೆ ಗೊಂದಲ, ತೊಂದರೆಯಾಗುತ್ತಿದೆ. ಸಂಜೆ ಹಾಗೂ ಬೆಳಗ್ಗಿನ ವೇಳೆ ಸಾವಿರಾರು ಮಕ್ಕಳಿಗೆ ಅನನುಕೂಲವಾಗುತ್ತಿದೆ. ಆಗಾಗ ಅಪಾಯಗಳು ಸಂಭವಿಸುತ್ತಿರುತ್ತವೆ. ಬಸ್‌ಗಳಂತೂ ಪಾದಚಾರಿಗಳ ಮೇಲೆ ಕರುಣೆ ಕನಿಕರ ತೋರಿಸದೇ ಸಂಚರಿಸುತ್ತವೆ. ರಸ್ತೆ ಬದಿ ಚರಂಡಿ ಮಾಡಿ ಮಳೆಗಾಲದ ತೊಂದರೆ ನಿವಾರಿಸಬೇಕಿದೆ. ಪಾದಚಾರಿಗಳಿಗೆ ಬೊಬ್ಬರ್ಯನಕಟ್ಟೆಯಿಂದ ಬಸ್ರೂರುಮೂರುಕೈ ಪ್ರದೇಶದಲ್ಲಿ ತಿರುಗಾಡಲು ಅಸಾಧ್ಯವಾಗಿದೆ. ಆದ್ದರಿಂದ ರಸ್ತೆ ಬದಿ ಪಾದಚಾರಿಗಳಿಗೆ ಸರಿಯಾದ ಫ‌ುಟ್‌ಪಾತ್‌ ಮಾಡಬೇಕಿದೆ. ಇರುವ ಫ‌ುಟ್‌ ಪಾತ್‌ ಕೂಡಾ ಅಲ್ಲಲ್ಲಿ ಏರುತಗ್ಗುಗಳಿಂದ ಕೂಡಿದೆ. ರಾತ್ರಿ ವೇಳೆ ಸಂಚಾರ ದುಸ್ಸಾಧ್ಯವೇ ಸರಿ.

ಚರಂಡಿ ಅವಸ್ಥೆ
ಹುಂಚಾರಬೆಟ್ಟಿನಲ್ಲಿ ಕಾಂಕ್ರಿಟ್‌ ರಸ್ತೆಯಿದೆ. ಅದರ ಪಕ್ಕದ ಚರಂಡಿ ತೆರೆದ ಸ್ಥಿತಿಯಲ್ಲೇ ಇದೆ. ಇದರಿಂದಾಗಿ ಈ ಭಾಗದ 30ರಷ್ಟು ಮನೆಯ ನಿವಾಸಿಗಳಿಗೆ ನಿತ್ಯ ಸೊಳ್ಳೆಯ ಸಂಗೀತದ ನಾದದ ಅನುರಣನ ಕೇಳುತ್ತಿರುತ್ತದೆ. ಕೊಳಕು ನೀರಿನ ವಾಸನೆ. ಚರಂಡಿ ನೀರು ಹರಿಯುವುದೂ ಇಲ್ಲ. ನಿಂತ ನೀರಿನಲ್ಲಿ ಸೊಳ್ಳೆ , ಕ್ರಿಮಿಕೀಟಗಳು ಉತ್ಪತ್ತಿಯಾಗಿ ಆಗಬಹುದಾದ ರೋಗಕಾರಕ ಪರಿಸ್ಥಿತಿಗೆ ಉತ್ತರದಾಯಿಗಳು ಯಾರು ಎಂದು ಈವರೆಗೂ ಇಲ್ಲಿನವರಿಗೆ ಗೊತ್ತಿಲ್ಲ. ಚರಂಡಿಗೆ ಸ್ಲಾಬ್‌ ಅಳವಡಿಸಿದರೆ ವಾಹನಗಳ ಓಡಾಟಕ್ಕೂ ಅನುಕೂಲ, ಮನೆಯವರಿಗೂ ಸಹ್ಯ ವಾತಾವರಣ ಇದೆ.

ರಸ್ತೆ ಅರ್ಧ ಆಗಿದೆ
ಲಭ್ಯ ಅನುದಾನದಲ್ಲಿ ರಸ್ತೆ ಕಾಂಕ್ರಿಟ್‌ ಕಾಮಗಾರಿಯಾಗಿದೆ. ಆದರೆ ಇನ್ನೊಂದು ಸ್ವಲ್ಪ ದೂರ ಆಗುತ್ತಿದ್ದರೆ ಇನ್ನಷ್ಟು ಮನೆಯವರಿಗೆ ಅನುಕೂಲವಾಗುತ್ತಿತ್ತು ಎನ್ನುತ್ತಾರೆ ಅಂಗವಿಕಲರಾದ ಗುರುರಾಜ್‌. ಬೀದಿದೀಪ ಇಲ್ಲ, ಕಂಬ ಅಳವಡಿಸಿದ್ದರೂ ದೀಪಗಳನ್ನೇ ಹಾಕಿಲ್ಲ. ರಸ್ತೆ ಬದಿ ಕಳೆಗಿಡಗಳು ತುಂಬಿ ಸಂಚಾರ ಕಷ್ಟವಾಗಿದೆ ಎನ್ನುತ್ತಾರೆ ಅವರು.

ರಿಂಗ್‌ ರೋಡ್‌ ಬೇಕು
ಈಸ್ಟ್‌ವೆಸ್ಟ್‌ ರೋಡ್‌ನಿಂದ ಬೆಟ್ಟಾಗರ ರಸ್ತೆ ಮೂಲಕ ಮುಖ್ಯ ರಸ್ತೆವರೆಗೆ ರಿಂಗ್‌ ರೋಡ್‌ ಬೇಕು ಎನ್ನುತ್ತಾರೆ ಇಲ್ಲಿನ ನಿವಾಸಿಗಳು.

Advertisement

ಕಾಮಗಾರಿ
ವಾರ್ಡ್‌ನ ಸದಸ್ಯರಿಗೆ ಅಧಿಕಾರ ಇಲ್ಲ ಎಂದು ಕಾಮಗಾರಿಯೇ ಆಗಿಲ್ಲ ಎಂದೇನಿಲ್ಲ. ಸದಸ್ಯರ ಬೇಡಿಕೆ, ಪುರಸಭೆ ಅಧಿಕಾರಿಗಳ ಸ್ಪಂದನೆಯಿಂದ ಇಲ್ಲಿ ಒಂದಷ್ಟು ಕಾಮಗಾರಿಯೂ ಆಗಿದೆ. ಸ್ಥಗಿತವಾಗಿದ್ದ ಒಳಚರಂಡಿ ಕಾಮಗಾರಿ ಆರಂಭವಾಗಿದೆ. ವಿವಿಧೆಡೆ ಚರಂಡಿಗೆ ಸ್ಲಾಬ್‌ ಅಳವಡಿಸಲಾಗಿದೆ. ಹನುಮಾನ್‌ ಗ್ಯಾರೇಜ್‌ ಹಿಂಬದಿ, ಮಧುಗ್ಯಾಸ್‌ ಗೋದಾಮು ಬಳಿ, ನಾಗಬೊಬ್ಬರ್ಯ ದೈವಸ್ಥಾನ ಬಳಿ ರಸ್ತೆ ಅಭಿವೃದ್ಧಿ ಮಾಡಲಾಗಿದೆ.

ಶಾಲೆಯ ಸಮಸ್ಯೆ
ಈ ವಾರ್ಡ್‌ನಲ್ಲಿ ಒಂದು ಕಿರಿಯ ಪ್ರಾಥಮಿಕ ಶಾಲೆಯಿದೆ. ಈ ಶಾಲೆಗೆ ಹೆಚ್ಚಿನ ಸ್ವಂತ ಜಾಗ ಇಲ್ಲ. ಆದ್ದರಿಂದ ಮಕ್ಕಳಿಗೆ ಆಟವಾಡಲು ಮೈದಾನವೇ ಇಲ್ಲ. ಇರುವ 10 ಸೆಂಟ್ಸ್‌ ಜಾಗದಲ್ಲಿ ಶಾಲಾ ಕಟ್ಟಡ, ಬಿಸಿಯೂಟ ಕಟ್ಟಡ ಎಂದಿದೆ. ಶಾಲೆಯಿಂದ ಇಳಿಯೋದೇ ರಸ್ತೆಗೆ ಎಂಬಂತಹ ಸ್ಥಿತಿಯಿದೆ. ಶಾಲೆಗೆ ಮಳೆಗಾಲದಲ್ಲಿ ಮಕ್ಕಳಿಗೆ ಬರಲು ಕೆಸರುಮಯ ರಸ್ತೆ. ಗದ್ದೆ, ಕೆಸರು ರಸ್ತೆಯನ್ನು ದಾಟಿಕೊಂಡು, ಬಿದ್ದುಕೊಂಡು ಎದ್ದುಕೊಂಡು ಮಕ್ಕಳು ಬರಬೇಕು. ಈಗ ಇಲ್ಲಿಗೆ ಒಂದಷ್ಟು ಜಲ್ಲಿ ಹುಡಿ ಹಾಕಲಾಗಿದೆ. ಆದರೆ ಖಾಸಗಿ ಜಾಗ ಇರುವ ಕಾರಣ ಇಲ್ಲಿಗೆ ಶಾಶ್ವತ ರಸ್ತೆ, ಆಟದ ಮೈದಾನ ಕನಸಾಗಿಯೇ ಉಳಿಯುವ ಆತಂಕ ಇದೆ.

ಅನುದಾನ ಬಂದಂತೆ ಕಾಮಗಾರಿ
ದೊಡ್ಡ ಪ್ರಮಾಣದಲ್ಲಿ ಅನುದಾನ ಇಲ್ಲ. ಪುರಸಭೆ, ಶಾಸಕರು ಎಂದು ಅನುದಾನ ನೀಡಿದಂತೆ ನಮ್ಮ ವಾರ್ಡ್‌ ವ್ಯಾಪ್ತಿಯ ಕಾಮಗಾರಿಗಳನ್ನು ಮಾಡಿಸಲಾಗುತ್ತಿದೆ. ಆದರೆ ಜನರ ಬೇಡಿಕೆ ಪಟ್ಟಿ ದೊಡ್ಡದಿದೆ. ಅನುದಾನದ ಲಭ್ಯತೆ ಕಡಿಮೆಯಿದೆ. ಆದ್ದರಿಂದ ಬಹಳಷ್ಟು ಬೇಡಿಕೆಗಳು ಈಡೇರಿಕೆಗಾಗಿ ಕಾಯುತ್ತಿವೆ.
-ಶೇಖರ ಪೂಜಾರಿ,
ಸದಸ್ಯರು, ಪುರಸಭೆ

ಚರಂಡಿ ಆಗಬೇಕು
ಬಸ್ರೂರು ಮೂರುಕೈಯಿಂದ ಹರಿದು ಬರುವ ನೀರು ಹೆದ್ದಾರಿಯಲ್ಲಿ ಸಾಗಿ ಹೆದ್ದಾರಿ ಬದಿಯ ಮನೆಗಳಿಗೂ ಬರುತ್ತವೆ. ಹೆದ್ದಾರಿ ಪಕ್ಕದಲ್ಲಿ ಪಾದಚಾರಿ ರಸ್ತೆಯೂ ಇಲ್ಲ, ಸರಿಯಾದ ಚರಂಡಿಯೂ ಇಲ್ಲಿಲ್ಲ. ಈ ನಿಟ್ಟಿನಲ್ಲಿ ಪುರಸಭೆ ಹಾಗೂ ಲೋಕೋಪಯೋಗಿ ಇಲಾಖೆ ಕ್ರಮ ವಹಿಸಬೇಕು.
-ಶಿವರಾಮ ಭಟ್‌, ನಿವೃತ್ತ ಎಸ್‌ಡಿಇ, ದೂರಸಂಪರ್ಕ ಇಲಾಖೆ

ಚರಂಡಿಗೆ ಸ್ಲಾಬ್‌ ಅಗತ್ಯ
ಈ ಭಾಗದಲ್ಲಿ ಚರಂಡಿ ಕಾಮಗಾರಿಗೆ ಸ್ಲಾಬ್‌ ಅಳವಡಿಸದೇ ಸೊಳ್ಳೆ, ಕೊಳಚೆ ನೀರಿನ ತಾಪತ್ರಯ ತಪ್ಪುತ್ತಿಲ್ಲ. ಹುಂಚಾರಬೆಟ್ಟು ನಿವಾಸಿಗಳಿಗೆ ಸೊಳ್ಳೆಕಾಟದಿಂದ ಮುಕ್ತಿ ನೀಡಿ, ವಾಸನೆಯಿಂದ ಮುಕ್ತಗೊಳಿಸಬೇಕಿದೆ.
-ರಾಜೇಶ್‌,
ಹುಂಚಾರಬೆಟ್ಟು ನಿವಾಸಿ

ಬೇಕಾದ್ದೇನು?
-ರಿಂಗ್‌ ರೋಡ್‌ಗೆ ಬೇಡಿಕೆಯಿದೆ
-ರಸ್ತೆ ಕಾಮಗಾರಿ ಪೂರ್ಣವಾಗಬೇಕಿದೆ
-ಚರಂಡಿಗೆ ಸ್ಲಾಬ್‌, ಚರಂಡಿ ನಿರ್ಮಾಣವಾಗಬೇಕಿದೆ

Advertisement

Udayavani is now on Telegram. Click here to join our channel and stay updated with the latest news.

Next