Advertisement
ಘಟನೆಯಲ್ಲಿ ಒಬ್ಬರಿಗೆ ಗಂಭೀರ, ಆರು ಮಂದಿಗೆ ಸಾಧಾರಣ ಗಾಯಗಳಾಗಿವೆ. ಮೃತರೆಲ್ಲರೂ ಟವೇರಾ ವಾಹನ ಪ್ರಯಾಣಿಕರಾಗಿದ್ದು, ಭಟ್ಕಳ ಮೂಲದವರು. ವಾಹನದಲ್ಲಿ ಒಟ್ಟು 12 ಮಂದಿ ಪ್ರಯಾಣಿಕರಿದ್ದು, ಚಾಲಕ ಪವಾಡ ಸದೃಶವಾಗಿ ಗಾಯಗಳಿಲ್ಲದೆ ಪಾರಾಗಿದ್ದಾರೆ.
Related Articles
ಟವೇರಾ ವಾಹನದಲ್ಲಿದ್ದವರು ಸಮೀಪ ಸಂಬಂಧಿಗಳಾಗಿದ್ದು, ಭಟ್ಕಳದ ಬೈಲೂರಿನಿಂದ ವಿವಿಧ ತೀರ್ಥಕ್ಷೇತ್ರಗಳನ್ನು ಸಂದರ್ಶಿಸಲು ಪ್ರಯಾಣ ಬೆಳೆಸಿದ್ದರು. ಗುರುವಾರ ಕೊಲ್ಲೂರು, ಶೃಂಗೇರಿ, ಹೊರನಾಡು ಕ್ಷೇತ್ರಗಳನ್ನು ಸಂದರ್ಶಿಸಿ ರಾತ್ರಿ ಧರ್ಮಸ್ಥಳದಲ್ಲಿ ತಂಗಿದ್ದರು. ಬೆಳಗ್ಗೆ ದೇವರ ದರ್ಶನ ಮಾಡಿ ಅಲ್ಲಿಂದ ಹೊರಟಿದ್ದು, ಮಧ್ಯಾಹ್ನ ಪಿಲಿಕುಳ ನಿಸರ್ಗಧಾಮವನ್ನು ಸಂದರ್ಶಿಸಿ ಅನಂತರ ಊರಿಗೆ ಮರಳುವ ಯೋಚನೆಯಲ್ಲಿದ್ದರು.
Advertisement
ಧರ್ಮಸ್ಥಳ ಕಡೆಯಿಂದ ಬರುತ್ತಿದ್ದ ಟವೇರಾದ ಚಾಲಕ ಬ್ರಹ್ಮರಕೂಟ್ಲು ಟೋಲ್‌ಗೇಟ್‌ಗಿಂತ ಸ್ವಲ್ಪ ಹಿಂದೆ ಅಗಲ ಕಿರಿದಾದ ಸೇತುವೆಯ ಕೊನೆಯಲ್ಲಿ ಮಂಗಳೂರು ಕಡೆಯಿಂದ ಬರುತ್ತಿದ್ದ ಬುಲೆಟ್ ಟ್ಯಾಂಕರನ್ನು ಕಂಡು ಬ್ರೇಕ್ ಹಾಕಿದ್ದಾರೆ. ವೇಗವಾಗಿದ್ದ ಟವೇರಾ ನಿಯಂತ್ರಣ ತಪ್ಪಿ ತಿರುಚಿ ಮುಂದೆ ಹೋಗಿ ಟ್ಯಾಂಕರ್‌ನ ಎಡಬದಿಗೆ ಢಿಕ್ಕಿಯಾಗಿದ್ದು, ರಸ್ತೆಬದಿಯ ತಡೆಗೋಡೆಯಿಂದಾಗಿ ಕೆಳಕ್ಕುರುಳದೆ ನಿಂತಿದೆ. ಈ ಸಂದರ್ಭ ಟವೆರಾ ಬಾಗಿಲು ತೆರೆದುಕೊಂಡಿದ್ದು, ಮೃತರಿಬ್ಬರು ಹೊರಕ್ಕೆ ಎಸೆಯಲ್ಪಟ್ಟಿದ್ದಾರೆ.
ತಡೆಗೋಡೆ ಇಲ್ಲದಿದ್ದರೆ ಟವೆರಾ ಮೂವತ್ತು ಅಡಿ ಆಳಕ್ಕೆ ಉರುಳಿಬೀಳುವ ಸಾಧ್ಯತೆ ಇತ್ತು.
ಘಟನೆ ನಡೆದ ತತ್‌ಕ್ಷಣ ಸ್ಥಳೀಯರು ಮತ್ತು ಟೋಲ್‌ಗೇಟ್ ಸಿಬಂದಿ ಸಂದೀಪ್ ಧಾವಿಸಿ ಬಂದು ಗಾಯಾಳುಗಳನ್ನು ಆಸ್ಪತ್ರೆಗೆ ಸಾಗಿಸಲು ನೆರವಾದರು. ಬಂಟ್ವಾಳ ವೃತ್ತ ನಿರೀಕ್ಷಕರು ಅದೇ ದಾರಿಯಲ್ಲಿ ಬರುತ್ತಿದ್ದು, ತತ್‌ಕ್ಷಣ ಸಂಚಾರಕ್ಕೆ ಅಡಚಣೆ ಆಗದಂತೆ ವಾಹನ ತೆರವಿಗೆ ಕೆಲವೇ ನಿಮಿಷಗಳಲ್ಲಿ ಕ್ರಮ ಕೈಗೊಂಡರು.
ಘಟನೆಯ ಬಳಿಕ ಸ್ವಲ್ಪ ಹೊತ್ತು ಹೆದ್ದಾರಿಯಲ್ಲಿ ಸಂಚಾರ ಅಡಚಣೆ ಆಗಿತ್ತು. ಬಂಟ್ವಾಳ ನಗರ ಮತ್ತು ಗ್ರಾಮಾಂತರ ಪೊಲೀಸ್ ಠಾಣೆಗಳ ಹೆಚ್ಚುವರಿ ಸಿಬಂದಿ ಸ್ಥಳಕ್ಕೆ ಧಾವಿಸಿ ಸಂಚಾರ ಅಡಚಣೆ ತೆರವು ಮಾಡಿದರು.
ಘಟನೆಯ ಮಾಹಿತಿ ಸಿಗುತ್ತಿದ್ದಂತೆ ಜಿಲ್ಲಾ ಪೊಲೀಸ್ ಅಧೀಕ್ಷಕ ಲಕ್ಷ್ಮೀಪ್ರಸಾದ್ ಮಂಗಳೂರಿಂದ ಧಾವಿಸಿ ಬಂದರಲ್ಲದೆ ಆಸ್ಪತ್ರೆಗೂ ಭೇಟಿ ನೀಡಿ ಗಾಯಾಳುಗಳ ಆರೋಗ್ಯ ವಿಚಾರಿಸಿದರು. ಎಎಸ್‌ಪಿ ಸೈದುಲ್ ಅಡಾವತ್, ಬಂಟ್ವಾಳ ವೃತ್ತ ನಿರೀಕ್ಷಕ ನಾಗರಾಜ್ ಟಿ.ಡಿ., ಸಬ್ ಇನ್‌ಸ್ಪೆಕ್ಟರ್ ಚಂದ್ರಶೇಖರ, ಪ್ರಸನ್ನ, ಮಂಜುನಾಥ್ ಸ್ಥಳದಲ್ಲಿದ್ದು ಸಂಚಾರ ಅಡಚಣೆ ಆಗದಂತೆ ಕ್ರಮ ಕೈಗೊಂಡರು.
ಬಂಟ್ವಾಳ ತಹಶೀಲ್ದಾರ್ ರಶ್ಮಿ ಎಸ್.ಆರ್., ಕಂದಾಯ ಅಧಿಕಾರಿ ರಾಮ ಕಾಟಿಪಳ್ಳ, ಕಳ್ಳಿಗೆ ಗ್ರಾಮ ಲೆಕ್ಕಾಧಿಕಾರಿ ಪ್ರಶಾಂತ್, ಸಿಬಂದಿ ಅಶೋಕ್, ಸದಾಶಿವ ಕೈಕಂಬ ಸ್ಥಳಕ್ಕೆ ಆಗಮಿಸಿದ್ದರು.
ಹತ್ತಿರದ ಸಂಬಂಧಿಗಳುದುರ್ಘಟನೆಯಲ್ಲಿ ಮೃತಪಟ್ಟ ಗೋವಿಂದ ಮೊಗೇರ ಮತ್ತು ಪದ್ಮಾವತಿ ಗಂಡ-ಹೆಂಡಿರು. ಮೃತ ನಾಗರಾಜ ಇವರ ಪುತ್ರ. ಪುತ್ರಿ ಯಮುನಾ ಗಾಯಗೊಂಡಿದ್ದರೆ ಅವರ ಪತಿ ಗಣೇಶ ಮೃತಪಟ್ಟಿದ್ದಾರೆ. ಗೋವಿಂದ ಅವರ ಭಾವ ಶಿವಾನಂದ ಗಂಭೀರ ಗಾಯಗೊಂಡು ಜೀವನ್ಮರಣ ಸ್ಥಿತಿಯಲ್ಲಿದ್ದು, ಅವರ ಪತ್ನಿ ಜ್ಯೋತಿ ಕೂಡ ಗಾಯಗೊಂಡಿದ್ದಾರೆ. ಈ ದಂಪತಿಯ ಪುಟ್ಟ ಮಕ್ಕಳಾದ ಯಶ್ವಿನ್ ಮತ್ತು ವರ್ಷಾ ಕೂಡ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ. ಗಾಯಾಳು ಗಣೇಶ್ ಗೋವಿಂದ-ಪದ್ಮಾವತಿ ದಂಪತಿಯ ಪುತ್ರನಾಗಿದ್ದರೆ, ಅಕ್ಷಯ್ ಮೃತ ಗೋವಿಂದ ಅವರ ಸಹೋದರನ ಪುತ್ರ. ಚಾಲಕ ಪಾರು
ದುರ್ಘಟನೆಯಲ್ಲಿ ಟವೇರಾ ಚಾಲಕ ರಾಜೇಶ್ ತರಚು ಗಾಯ ಕೂಡ ಇಲ್ಲದೆ ಪವಾಡ ಸದೃಶವಾಗಿ ಪಾರಾಗಿದ್ದಾರೆ. ಘಟನೆಯ ಬಳಿಕ ಪೊಲೀಸರು ಚಾಲಕನನ್ನು ಪ್ರಶ್ನಿಸಿದಾಗ ಆತ ಘಟನೆಯಿಂದ ದಿೂ¾ಢನಾಗಿದ್ದು, ಉತ್ತರಿಸಲಾಗಲಿಲ್ಲ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ. ಚಿನ್ನಾಭರಣ ಕಾಣೆ ?
ಗಂಭೀರ ಸ್ವರೂಪದ ಘಟನೆ ನಡೆದು ಗಾಯಾಳುಗಳು ಜೀವನ್ಮರಣ ಸ್ಥಿತಿಯಲ್ಲಿದ್ದಾಗಲೂ ಗಾಯಾಳೊಬ್ಬರ ಚಿನ್ನಾಭರಣ ಕಾಣೆಯಾಗಿದೆ. ಘಟನೆ ಸಂದರ್ಭ ಅದು ಬಿದ್ದು ಹೋಗಿದೆಯೋ ಯಾರಾದರೂ ಎಗರಿಸಿದ್ದಾರೆಯೋ ಎಂಬುದು ಸ್ಪಷ್ಟವಾಗಿಲ್ಲ. ಆದರೆ ಚಿನ್ನಾಭರಣ ಕಾಣೆಯಾದ ಬಗ್ಗೆ ವದಂತಿ ಸೃಷ್ಟಿಯಾಗಿದೆ.