ಬೆಳಗಾವಿ: ಕಾರ್ತಿಕ ಏಕಾದಶಿಯಂದು ಪಂಢರಪುರದ ಶ್ರೀ ವಿಠ್ಠಲನ ದರ್ಶನಕ್ಕೆ ಹೊರಟಿದ್ದ ಬೆಳಗಾವಿ ತಾಲೂಕಿನ ಐವರು ವಾರಕರಿಗಳು ಭೀಕರ ರಸ್ತೆ ಅಪಘಾತದಲ್ಲಿ ಮೃತಪಟ್ಟ ಘಟನೆ ಶುಕ್ರವಾರ ಬೆಳಗಿನ ಜಾವ ಮಹಾರಾಷ್ಟ್ರದ ಸಾಂಗೋಲ್ಯಾ ಬಳಿ ಸಂಭವಿಸಿದೆ.
ಬೆಳಗಾವಿ ತಾಲೂಕಿನ ಮಂಡೋಳಿ ಗ್ರಾಮದ ನಾಲ್ವರು ಹಾಗೂ ಹಂಗರಗಾ ಗ್ರಾಮದ ಒಬ್ಬ ವಾರಕರಿ ಮೃತಪಟ್ಟಿದ್ದಾರೆ. ಏಳು ಜನರು ಗಾಯಗೊಂಡಿದ್ದಾರೆ.
ಬುಲೇರೋ ಟೆಂಪೋ ವಾಹನದಲ್ಲಿ ಮಂಡೋಳಿಯಿಂದ ಗುರುವಾರ ರಾತ್ರಿ ವಾಹನ ಹೊರಟಿತ್ತು. ಪಂಢರಪುರಕ್ಕೆ ತೆರಳುತ್ತಿದ್ದ ವಾರಕರಿಗಳು ಸಾಂಗೋಲ್ಯಾದಿಂದ ಸುಮಾರು 10 ಕಿ.ಮೀ. ದೂರದಲ್ಲಿ ಹೋದಾಗ ಶುಕ್ರವಾರ ಬೆಳಗಿನ ಜಾವ 4 ಗಂಟೆ ಸುಮಾರಿಗೆ ಟ್ರ್ಯಾಕ್ಟರ್ ಹಾಗೂ ಬುಲೇರೋ ಟೆಂಪೋ ನಡುವೆ ಭೀಕರ ಅಪಘಾತ ಸಂಭವಿಸಿದೆ.
ಇಟ್ಟಿಗೆ ತುಂಬಿಕೊಂಡು ಟ್ರಾಕ್ಟರ್ ಹೊರಟಿತ್ತು. ಹಿಂದಿನಿಂದ ಜೋರಾಗಿ ಬಂದ ಬುಲೇರೋ ವಾಹನ ಟ್ರ್ಯಾಕ್ಟರ್ ಗೆ ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ವಾಹನದಲ್ಲಿದ್ದ ಮೃತದೇಹಗಳನ್ನು ಹೊರ ತೆಗೆಯಲು ಹರಸಾಹಸ ಪಡಬೇಕಾಯಿತು.
ಈ ಎರಡೂ ವಾಹನಗಳ ಅಪಘಾತದಲ್ಲಿ ಬುಲೇರೋ ಟೆಂಪೋ ಸಂಪೂರ್ಣ ನಜ್ಜುಗುಜ್ಜಾಗಿದೆ.
ಮೃತರ ಹೆಸರುಗಳು ಇನ್ನೂ ಪತ್ತೆ ಆಗಿಲ್ಲ. ಮಂಡೋಳಿ ಹಾಗೂಬಹಂಗರಗಾದಿಂದ ಸ್ಥಳೀಯರು ಸಾಂಗೋಲ್ಯಾದತ್ತ ತೆರಳಿದ್ದಾರೆ. ಈ ಎರಡೂ ಊರುಗಳಲ್ಲಿ ಸೂತಕದ ವಾತಾವರಣ ನಿರ್ಮಾಣವಾಗಿದೆ.