ಅ್ಯಂಟಿಗುವಾ: ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್ ನ ಮೊದಲ ಪಂದ್ಯ ಆಡಲಿಳಿದ ಭಾರತ ತಂಡ ವಿಂಡೀಸ್ ವಿರುದ್ಧದ ಮೊದಲ ಇನ್ನಿಂಗ್ಸ್ ನಲ್ಲಿ ಆರಂಭಿಕ ಆಘಾತದ ಹೊರತಾಗಿಯೂ 206 ರನ್ ಗಳಿಸಿ ಆಡುತ್ತಿದೆ.
ಇಲ್ಲಿನ ಸರ್ ವಿವಿಯನ್ ರಿಚರ್ಡ್ ಕ್ರೀಡಾಂಗಣದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಗೆ ಇಳಿಸಲ್ಪಟ್ಟ ಟೀಂ ಇಂಡಿಯಾ ಆರಂಭಿಕ ಆಘಾತ ಅನುಭವಿಸಿತು. ಕನ್ನಡಿಗರಿಬ್ಬರು ಆರಂಭಿಕರಾಗಿ ಕಾಣಿಸಿಕೊಂಡರೂ ಅವರ ಜೊತೆಯಾಟ ಹೆಚ್ಚು ಹೊತ್ತು ನಡೆಯಲಿಲ್ಲ. ತಂಡದ ಮೊತ್ತ 5 ಆಗಿದ್ದಾಗ ಮಯಾಂಕ್ ಅಗರ್ವಾಲ್ ಅವರು ರೋಚ್ ಬೌಲಿಂಗ್ ನಲ್ಲಿ ಕೀಪರ್ ಶಾಯ್ ಹೋಪ್ ಗೆ ಕ್ಯಾಚ್ ನೀಡಿ ಔಟಾದರು. ಇವರ ಬೆನ್ನ ಹಿಂದೆ ಚೇತೇಶ್ವರ ಪೂಜಾರ ಮತ್ತು ನಾಯಕ ಕೊಹ್ಲಿ ಪೆವಿಲಿಯನ್ ಸೇರಿದಾಗ ತಂಡದ ಮೊತ್ತ 25 ರನ್ ಅಷ್ಟೇ!
ಅಲ್ಪ ಮೊತ್ತಕ್ಕೆ ಕುಸಿಯುವ ಭೀತಿಯಲ್ಲಿದ್ದ ಭಾರತ ತಂಡವನ್ನು ಆಧರಿಸಿದ್ದು ಕೆ.ಎಲ್ ರಾಹುಲ್ ಮತ್ತು ಉಪನಾಯಕ ಅಜಿಂಕ್ಯ ರಹಾನೆ. ತಾಳ್ಮೆಯಿಂದ ಬ್ಯಾಟಿಂಗ್ ನಡೆಸಿದ ಇವರಿಬ್ಬರೂ ನಾಲ್ಕನೇ ವಿಕೆಟ್ ಗೆ 68 ರನ್ ಜೊತೆಯಾಟ ನಡೆಸಿದರು. ಮತ್ತೆ ಉತ್ತಮ ಆರಂಭ ಪಡೆದ ರಾಹುಲ್ ಅದನ್ನು ದೊಡ್ಡ ಮೊತ್ತವನ್ನಾಗಿ ಪರಿವರ್ತಿಸಲಿಲ್ಲ. 44 ರನ್ ಗಳಿಸಿದ್ದ ವೇಳೆ ರೋಸ್ಟನ್ ಚೇಸ್ ಬೌಲಿಂಗ್ ನಲ್ಲಿ ಕೀಪರ್ ಗೆ ಕ್ಯಾಚ್ ನೀಡಿ ಔಟಾದರು.
ಐದನೇ ವಿಕೆಟ್ ಗೆ ರಹಾನೆ ಜೊತೆಯಾದ ಹನುಮ ವಿಹಾರಿ ನಿಧಾನವಾಗಿ ರನ್ ವೇಗ ಹೆಚ್ಚಿಸುವ ಪ್ರಯತ್ನ ಮಾಡಿದರು. ವಿಹಾರಿ 32 ರನ್ ಗಳಿಸಿ ಔಟಾದರೆ, ಉತ್ತಮ ಬ್ಯಾಟಿಂಗ್ ಮಾಡಿದ ರಹಾನೆ 81 ರನ್ ಕಲೆಹಾಕಿ ಔಟಾದರು.
68.5 ಓವರ್ ವೇಳೆಗೆ ಭಾರತ ಆರು ವಿಕೆಟ್ ನಷ್ಟಕ್ಕೆ 203 ರನ್ ಗಳಿಸಿದ್ದ ವೇಳೆಗೆ ಮಳೆರಾಯನ ಆಗಮನದಿಂದ ಪಂದ್ಯ ಸ್ಥಗಿತವಾಯಿತು. ಕೀಪರ್ ರಿಷಭ್ ಪಂತ್ 20ರನ್, ರವೀಂದ್ರ ಜಡೇಜ 3 ರನ್ ಗಳಿಸಿ ಎರಡನೇ ದಿನಕ್ಕೆ ಆಟ ಕಾಯ್ದುಕೊಂಡಿದ್ದಾರೆ.
ವಿಂಡೀಸ್ ಪರ ಕೇಮರ್ ರೋಚ್ ಮೂರು ವಿಕೆಟ್ ಪಡೆದರೆ, ಗ್ಯಾಬ್ರಿಯಲ್ ಎರಡು, ಚೇಸ್ ಒಂದು ವಿಕೆಟ್ ಪಡೆದು ಮಿಂಚಿದರು.