ಬೆಳಗಾವಿ: ಅಂಕೋಲಾ ಉದ್ಯಮಿ ಆರ್.ಎನ್. ನಾಯ್ಕ ಹತ್ಯೆ ಪ್ರಕರಣದಲ್ಲಿ ತಪ್ಪಿತಸ್ಥರಾದ ಭೂಗತ ಲೋಕದ ಪಾತಕಿ ಬನ್ನಂಜೆ ರಾಜಾ ಸಹಿತ 9 ಮಂದಿಗೆ ಶಿಕ್ಷೆಯ ಪ್ರಮಾಣ ಎ.4ರಂದು ಪ್ರಕಟವಾಗಲಿದೆ.
ಇಲ್ಲಿನ ಕೋಕಾ (ಕರ್ನಾಟಕ ಸಂಘಟಿತ ಅಪರಾಧ ನಿಯಂತ್ರಣ ಕಾಯ್ದೆ) ನ್ಯಾಯಾಲಯ ಆಪಾದಿತರಿಗೆ ಶಿಕ್ಷೆಯ ಪ್ರಮಾಣ ಘೋಷಿಸಲಿದೆ. ಭೂಗತ ಪಾತಕಿ ಬನ್ನಂಜೆ ರಾಜಾ ಸಹಿತ 9 ಆರೋಪಿಗಳನ್ನು ದೋಷಿ ಎಂದು ನ್ಯಾಯಾಧೀಶ ಸಿ.ಎಂ. ಜೋಶಿ ಘೋಷಿಸಿದ್ದಾರೆ.
ಉಡುಪಿ ಮೂಲದ ಬನ್ನಂಜೆ ರಾಜಾ, ಉತ್ತರ ಪ್ರದೇಶದ ಜಗದೀಶ್ ಪಟೇಲ್, ವಿಜಯಪುರದ ಅಂಬಾಜಿ ಬಂಡುಗೋರ, ಕಾರ್ಕಳದ ಮಂಜುನಾಥ ನಾರಾಯಣ ಭಟ್, ಕೇರಳದ ಕೆ.ಎಂ. ಇಸ್ಮಾಯಿಲ್, ಅಚ್ಚಂಗಿ ಮಹೇಶ, ಸುಳ್ಯ ಸಂತೋಷ, ಜಗದೀಶಚಂದ್ರ ರಾಜ್ ಅರಸ್, ಅಂಕಿತಕುಮಾರ ಕಷ್ಯಪ್ ದೋಷಿಗಳು.
ರಬ್ದಿನ್ ಸಲೀಂ, ಮಹ್ಮದರ್ಷದ ಶಾಬಂದರಿ ಹಾಗೂ ಆನಂದ ನಾಯಕ ಎಂಬವರು ದೋಷಮುಕ್ತರಾಗಿದ್ದಾರೆ. ಭಟ್ಕಳದ ನಾಜೀಮ್ ನಿಲಾವರ್, ಮಂಗಳೂರಿನ ಹಾಜಿ ಆಮಿನ್ ಬಾಷಾ ಹಾಗೂ ಸಕಲೇಶಪುರದ ಸುಲೇಮಾನ್ ಜೈನುದ್ದೀನ್ ತಲೆಮರೆಸಿಕೊಂಡಿದ್ದಾರೆ. ಸರಕಾರದ ಪರವಾಗಿ ವಿಶೇಷ ಸರಕಾರಿ ಅಭಿಯೋಜಕರಾದ ಕೆ.ಜಿ. ಪುರಾಣಿಕಮಠ ಹಾಗೂ ಹೆಚ್ಚುವರಿ ವಿಶೇಷ ಅಭಿಯೋಜಕ ಶಿವಪ್ರಸಾದ ಆಳ್ವ ವಾದಿಸಿದ್ದರು.
ಅಂಕೋಲಾದ ಉದ್ಯಮಿ ಆರ್.ಎನ್. ನಾಯಕ ಅವರಿಗೆ 3 ಕೋಟಿ ರೂ. ಹಫ್ತಾ ನೀಡುವಂತೆ ಬನ್ನಂಜೆ ರಾಜಾ ಬೇಡಿಕೆ ಇಟ್ಟಿದ್ದ. 2012ರಲ್ಲಿ ವಿದೇಶದಿಂದಲೇ ಎರಡು ಸಲ ಇಂಟರ್‌ನೆಟ್ ಕರೆ ಮಾಡಿ ಬೆದರಿಕೆ ಹಾಕಿದ್ದ. ಹಣ ನೀಡಲು ನಿರಾಕರಿಸಿದ್ದಕ್ಕೆ ಉದ್ಯಮಿಯನ್ನು ಹತ್ಯೆಗೈಯಲು ಪ್ಲಾÂನ್ ಮಾಡಿದ್ದ. ಆರ್.ಎನ್. ನಾಯ್ಕ ಅವರು ಚೇರ್ಮನ್ ಆಗಿದ್ದ ದ್ವಾರಕಾ ಕೋ ಆಪರೇಟಿವ್ ಸೊಸೈಟಿಯಿಂದ 2013ರ ಡಿ. 21ರಂದು ಮಧ್ಯಾಹ್ನ 1:30ರ ಸುಮಾರಿಗೆ ಕಾರಿನಲ್ಲಿ ಮನೆಯತ್ತ ತೆರಳುವಾಗ ಕೆ.ಸಿ. ರಸ್ತೆಯಲ್ಲಿ ನಾಲ್ವರು ಬಂದೂಕುಧಾರಿಗಳು ಕಾರನ್ನು ಅಡ್ಡಗಟ್ಟಿ ಗುಂಡು ಹಾರಿಸಿ ಕೊಲೆ ಮಾಡಿದ್ದರು. ಗುಂಡಿನ ಚಕಮಕಿಯಲ್ಲಿ ಆರೋಪಿ ಉತ್ತರ ಪ್ರದೇಶದ ವಿವೇಕಕುಮಾರ ಉಪಾಧ್ಯ ಎಂಬಾತ ಮೃತಪಟ್ಟಿದ್ದ.