ಚೆನ್ನೈ : ಎಐಎಡಿಎಂಕೆ ಪಕ್ಷದ ಎರಡೆಲೆ ಚುನಾವಣಾ ಚಿಹ್ನೆಯನ್ನು ಸ್ತಂಭನಗೊಳಿಸಿ ಮಧ್ಯಾವಧಿ ಆದೇಶ ಹೊರಡಿಸಿದ ಒಂದು ದಿನದ ತರುವಾಯ ಚುನಾವಣಾ ಆಯೋಗವು ಪ್ರತಿಷ್ಠೆಯ ಆರ್ ಕೆ ನಗರ ವಿಧಾನಸಭಾ ಉಪಚುನಾವಣೆಗಾಗಿ ಇಂದು ಗುರುವಾರ ಶಶಿಕಲಾ ಬಣಕ್ಕೆ ಹ್ಯಾಟ್ ಚಿಹ್ನೆಯನ್ನೂ ಓ ಪನ್ನೀರಸೆಲ್ವಂ ಬಳಗಕ್ಕೆ ಲೈಟ್ ಕಂಬದ ಚಿಹ್ನೆಯನ್ನೂ ನೀಡಿದೆ.
ಚುನಾವಣಾ ಆಯೋಗ ಓಎಸ್‌ಪಿ ಬಣಕ್ಕೆ ಎಐಎಡಿಎಂಕೆ ಪುರಚ್ಚಿ ತಲೈವಿ ಅಮ್ಮಾ ಎಂಬ ಹೆಸರನ್ನೂ ಶಶಿಕಲಾ ಬಣಕ್ಕೆ ಎಐಎಡಿಎಂಕೆ ಅಮ್ಮಾ ಎಂಬ ಹೆಸರನ್ನೂ ಇರಿಸಿದೆ.
ಮಾಜಿ ಮುಖ್ಯಮಂತ್ರಿ ಜೆ ಜಯಲಲಿತಾ ಅವರ ನಿಧನದಿಂದಾಗಿ ಆಕೆ ಪ್ರತಿನಿಧಿಸುತ್ತಿದ್ದ ಆರ್ ಕೆ ನಗರ ವಿಧಾನಸಭಾ ಕ್ಷೇತ್ರಕ್ಕೆ ಉಪ ಚುನಾವಣೆ ಅನಿವಾರ್ಯವಾಗಿದೆ.
ಆರ್ ಕೆ ನಗರ ಉಪಚುನಾವಣೆಗೆ ಓಎಸ್‌ಪಿ ಬಣವು ಇ ಮಧುಸೂದನ್ ಅವರನ್ನು ತನ್ನ ಅಭ್ಯರ್ಥಿಯನ್ನಾಗಿ ಘೋಷಿಸಿದೆ. ಶಶಿಕಲಾ ಬಣವು ಎಐಎಡಿಎಂಕೆ ಉಪ ಪ್ರಧಾನ ಕಾರ್ಯದರ್ಶಿಯಾಗಿರುವ ಶಶಿಕಲಾ ಅವರ ಸೋದರ ಸಂಬಂಧಿಯನ್ನು ಅಭ್ಯರ್ಥಿಯನ್ನಾಗಿ ಪ್ರಕಟಿಸಿದೆ.
ಎಪ್ರಿಲ್ 12ರಂದು ನಡೆಯುವ ಉಪಚುನಾವಣೆಗೆ ನಾಮ ಪತ್ರ ಸಲ್ಲಿಸಲು ಇಂದು ಗುರುವಾರ ಕೊನೇ ದಿನವಾಗಿದೆ.
ಈ ಮೊದಲು ಶಶಿಕಲಾ ಬಣವು ಎಐಎಡಿಎಂಕೆ ಪಕ್ಷದ ಎರಡೆಲೆಗಳ ಮೂಲ ಚಿಹ್ನೆಯೇ ತನಗೆ ಬೇಕೆಂದು ಚುನಾವಣಾ ಆಯೋಗಕ್ಕೆ ಅರ್ಜಿ ಸಲ್ಲಿಸಿತ್ತು. ಅದೇ ವೇಳೆ ಪನ್ನೀರಸೆಲ್ವಂ ಬಣ ಕೂಡ ಪಕ್ಷದ ಮೂಲ ಚಿಹ್ನೆ ತಮಗೇ ಸಲ್ಲತಕ್ಕದ್ದೆಂದು ವಾದಿಸಿತ್ತು.