ಕನ್ನಡದಲ್ಲಿ ಆರ್‌ಜೆಗಳು ತೆರೆಯ ಮೇಲೆ ಕಾಣಿಸಿಕೊಂಡಿರುವುದು ಹೊಸ ವಿಚಾರವೇನಲ್ಲ. ಹಾಗೇ ಆರ್‌ಜೆ ನೇತ್ರ ಅವರಿಗೂ ಸಿನಿಮಾ ಹೊಸದಲ್ಲ. ಆದರೀಗ ಹೊಸದೊಂದು ಮೈಲಿಗಲ್ಲಿನತ್ತ ತಮ್ಮ ಚಿತ್ತ ಹರಿಸಿದ್ದಾರೆ ಎಂಬುದೇ ಈ ಹೊತ್ತಿನ ವಿಶೇಷ. ಹೌದು, “ಆಟಗಾರ’ ಹಾಗೂ “ರಿಂಗ್‌ರೋಡ್-ಶುಭಾ’ ಚಿತ್ರದ ಬಳಿಕ “ಬಿಗ್‌ಬಾಸ್’ ಮನೆಗೆ ಹೋಗಿದ್ದ ಆರ್‌ಜೆ ನೇತ್ರ, ಹೊರ ಬಂದವರಿಗೆ ಸಿನಿಮಾ ಹುಡುಕಿ ಬಂದದ್ದು “6 ನೇ ಮೈಲಿ’. ಈ ಚಿತ್ರ ಈ ವಾರ ತೆರೆಗೆ ಬರುತ್ತಿದೆ.
ಈ ಕುರಿತು ಹೇಳಿಕೊಳ್ಳುವ ನೇತ್ರ, “ಕಥೆ ಮತ್ತು ಪಾತ್ರ ಕೇಳಿದಾಗ ಇಲ್ಲೊಂದು ಚಾಲೆಂಜ್ ಪಾತ್ರ ಇದೆ ಅಂತೆನಿಸಿತು. ಕೂಡಲೇ ಗ್ರೀನ್‌ಸಿಗ್ನಲ್ ಕೊಟ್ಟೆ. ಆದರೆ ಚಿತ್ರದಲ್ಲಿ ಸಂಚಾರಿ ವಿಜಯ್ ಇದ್ದಾರೆ ಅಂದಾಗ, ಒಂದಷ್ಟು ಭಯ ಶುರುವಾಗಿದ್ದುಂಟು. ಯಾಕೆಂದರೆ, ನಟನೆಯಲ್ಲಿ ರಾಷ್ಟ್ರಮಟ್ಟದ ಗಮನಸೆಳೆದ ಸಂಚಾರಿ ವಿಜಯ್ ಜೊತೆ ಹೇಗಪ್ಪಾ ಕೆಲಸ ಮಾಡೋದು, ಅವರ ಮುಂದೆ ನಾನು ಡಮ್ಮಿ ಪೀಸ್ ಆಗಿಬಿಡ್ತೀನಾ’ ಎಂಬ ಪ್ರಶ್ನೆ ಕಾಡಿದ್ದು ನಿಜ. ಕೊನೆಗೆ ಚಾಲೆಂಜಿಂಗ್ ತಗೊಂಡು ಕೆಲಸ ಮಾಡಿದಾಗಲೇ ಮಾತಿಗೂ ನಟನೆಗೂ ಎಷ್ಟೊಂದು ವ್ಯತ್ಯಾಸ ಇದೆ ಅಂತ ಗೊತ್ತಾಗಿದ್ದು ಎನ್ನುತ್ತಾರೆ ನೇತ್ರ.
ಈ ಚಿತ್ರದಲ್ಲಿ ನನ್ನ ಪಾತ್ರಕ್ಕೆ ಪ್ರಾಮುಖ್ಯತೆ ಇದೆ. ನನಗಿಲ್ಲಿ ಎರಡು ಶೇಡ್ ಪಾತ್ರವಿದೆ. ಮೊದಲರ್ಧ ಒಂದು ರೀತಿಯ ಪಾತ್ರವಿದ್ದರೆ, ದ್ವಿತಿಯಾರ್ಧದಲ್ಲಿ ಇನ್ನೊಂದು ಶೇಡ್ ಪಾತ್ರವಿದೆ. ಅದೊಂದು ರೀತಿಯ ಸ್ಟ್ರಾಂಗ್ ವುಮೆನ್ ಪಾತ್ರ. ತೆರೆಯ ಮೇಲೆ ನನ್ನ ಪಾತ್ರ ನೋಡಿದರೆ, ಖಂಡಿತ ಎಲ್ಲರಿಗೂ ಇಷ್ಟವಾಗುತ್ತೆ. ಪಾತ್ರದ ಬಗ್ಗೆ ಹೇಳುವುದಾದರೆ, ಟ್ರಕ್ಕಿಂಗ್‌ಗೆ ಹೋದಾಗ, ಕೆಲವೊಂದ ಘಟನೆಗಳು ನಡೆದು ಹೋಗುತ್ತವೆ. ಆಮೇಲೆ ಏನೆಲ್ಲಾ ಆಗಿಹೋಗುತ್ತೆ ಎನ್ನುವುದು ಕಥೆ.
ವಿಶೇಷವೆಂದರೆ, ಸುಮಾರು 12 ದಿನಗಳ ಕಾಲ ರಾತ್ರಿಯಿಡೀ ಚಿತ್ರೀಕರಣ ನಡೆದಿದೆ. ಕೆಲವೊಮ್ಮೆ ಹಗಲು-ರಾತ್ರಿಯೂ ನಿರಂತರ ಚಿತ್ರೀಕರಣ ಮಾಡಿದ್ದುಂಟು. ರಾತ್ರಿ ಚಿತ್ರೀಕರಣ ನನಗೊಂದು ವಿಶೇಷ ಅನುಭವ ಕಟ್ಟಿಕೊಟ್ಟಿದ್ದು ಸುಳ್ಳಲ್ಲ. ಸಂಜೆ ಆಗುತ್ತಿದ್ದಂತೆಯೇ ಸಾಕಪ್ಪಾ ಕೆಲಸ ಅಂದುಕೊಳ್ಳುವ ನನಗೆ, ರಾತ್ರಿಯೆಲ್ಲಾ ಚಿತ್ರೀಕರಣದಲ್ಲಿರಬೇಕಾಗಿತ್ತು. ಅದರಲ್ಲೂ ಯಲ್ಲಾಪುರ, ಶಿರಸಿಯ ದಟ್ಟ ಕಾಡಿನ ನಡುವೆ ಓಡುವ, ಸುತ್ತಾಡುವ ದೃಶ್ಯಗಳಿದ್ದವು. ಅದೆಷ್ಟು ಮೈಲಿಗಳನ್ನು ದಾಟಿದ್ದೇವೋ ಗೊತ್ತಿಲ್ಲ. ಕತ್ತಲ ಕಾಡಲ್ಲಿ ಓಡೋದೇ ಒಂದು ಚಾಲೆಂಜ್ ಆಗಿತ್ತು. ಇನ್ನು, ಈ ಚಿತ್ರದಲ್ಲಿ ಸಾಕಷ್ಟು ಅನುಭವ ಆಗಿದೆ. ನಾಯಕ ಸಂಚಾರಿ ವಿಜಯ್ ಅವರೊಂದಿಗೆ ಒಳ್ಳೆಯ ಕೆಲಸ ಕಲಿತುಕೊಂಡೆ ಎಂದು ವಿವರ ಕೊಡುತ್ತಾರೆ ನೇತ್ರ.
ಅವರಿಗೆ ಆರ್‌ಜೆ ಮಾತು ಮುಖ್ಯವೋ, ನಟನೆ ಮುಖ್ಯವೋ ಎಂಬ ಪ್ರಶ್ನೆ ಮುಂದಿಟ್ಟಾಗ, “ಆರ್‌ಜೆ ಆಗಿ ಮೈಕ್ ಮುಂದೆ ಸುಲಭವಾಗಿ ಮಾತಾಡಬಹುದು. ಅಲ್ಲಿ ವಾಯ್ಸವೊಂದೇ ಪ್ರತಿಯೊಂದನ್ನು ಹೇಳುತ್ತಾ ಹೋಗುತ್ತೆ. ಆದರೆ, ಸಿನಿಮಾ ಹಾಗಲ್ಲ, ಕ್ಯಾಮೆರಾ ಮುಂದೆ ಹೇಗೆ ಇರಿ¤àವಿ, ಯಾವ ದೃಶ್ಯಕ್ಕೆ ಎಂಥಾ ಅಭಿನಯ ಕೊಡಬೇಕು ಎಂಬ ಚಾಲೆಂಜ್ ಇರುತ್ತೆ. ಆರ್‌ಜೆಯಾಗಿ ವಾಯ್ಸ ಬ್ಯಾಲೆನ್ಸ್ ಮಾಡಿದರೆ, ನಟಿಯಾಗಿ ಫೇಸ್, ಬಾಡಿಲಾಂಗ್ವೇಜ್ ಬ್ಯಾಲೆನ್ಸ್ ಮಾಡಬೇಕು. ಅದೊಂದು ದೊಡ್ಡ ಚಾಲೆಂಜ್ ಎನ್ನುವ ನೇತ್ರ, ಸಹೋದರ ರಿಷಿ ಜೊತೆ ನಟಿಸಲು ಉತ್ಸಾಹದಲ್ಲಿದ್ದಾರೆ. ಒಳ್ಳೆಯ ಕಥೆ ಬಂದರೆ ಖಂಡಿತ ನಟಿಸ್ತೀನಿ. ಸದ್ಯಕ್ಕೆ ಈ ಚಿತ್ರ ರಿಲೀಸ್ ಬಳಿಕ ಬೇರೊಂದು ಸಿನಿಮಾ ಕುರಿತು ಹೇಳ್ತೀನಿ ಎಂದಷ್ಟೇ ಹೇಳುತ್ತಾರೆ ನೇತ್ರ.