Advertisement
ಜಿಲ್ಲೆಯಲ್ಲಿ ಮಧ್ಯಾಹ್ನ ವೇಳೆ 36 ಡಿ.ಸೆ.ನಷ್ಟು ಗರಿಷ್ಠ ಉಷ್ಣಾಂಶ ದಾಖಲಾಗುತ್ತಿದ್ದು, ವಿಪರೀತ ಸೆಕೆಯಿಂದ ಜನರು ಮನೆಯಿಂದ ಹೊರಬರುವುದನ್ನು ಕಡಿಮೆ ಮಾಡಿದ್ದಾರೆ. ಇದೇ ಕಾರಣಕ್ಕೆ ನಗರದ ಪ್ರಮುಖ ರಸ್ತೆಗಳಲ್ಲಿ ಮಧ್ಯಾಹ್ನ ವೇಳೆ ಜನಸಂಚಾರ ಕೂಡ ವಿರಳವಾಗಿದೆ.
ಬಿಸಿಲಿನ ಝಳಕ್ಕೆ ಕರಾವಳಿ ಮಂದಿ ತತ್ತರಿಸಿದ್ದು, ಮನೆಯಿಂದ ಹೊರ ಬಂದರೆ ಮೈ ಸುಡುವಂತಹ ರಣಬಿಸಿಲು. ಮನೆಯೊಳಗೆ ಇದ್ದರೆ ವಿಪರೀತ ಸೆಕೆ. ಇದರಿಂದ ಪಾರಾಗಲು ನಗರದ ಮಂದಿ ಏರ್ ಕೂಲರ್, ಹವಾನಿಯಂತ್ರಿತ ವಸ್ತುಗಳ ಮೊರೆಹೋಗುತ್ತಿದ್ದಾರೆ. ಇನ್ನು, ದ್ವಿಚಕ್ರವಾಹನ ಸವಾರರಿಗೆ ಹೆಲ್ಮೆಟ್ ಕಡ್ಡಾಯವಾಗಿದ್ದು, ಸೆಕೆ ಪ್ರಮಾಣ ಹೆಚ್ಚಳದಿಂದ ಹೆಲ್ಮೆಟ್ ಹಾಕಿದರೆ ಕುತ್ತಿಗೆಯಲ್ಲಿ ಅಲರ್ಜಿ ಸಮಸ್ಯೆ ಉಂಟಾಗುತ್ತಿದೆ.
Related Articles
Advertisement
ನಗರದ ಕೆಲವು ಕಡೆಗಳಲ್ಲಿ ಕಲ್ಲಂಗಡಿ, ಅನಾನಸು, ಮುಳ್ಳು ಸೌತೆ ಮೊದಲಾದವುಗಳನ್ನು ಹೋಳುಗಳಾಗಿ ಮಾಡಿ ಮಾರಲಾಗುತ್ತಿದೆ. ಎಳನೀರಿಗೆ ಬೇಡಿಕೆ ಹೆಚ್ಚಿದಂತೆ ಕೆಲವು ಅಂಗಡಿಗಳಲ್ಲಿ ಬೆಲೆ ಕೂಡ ಹೆಚ್ಚಾಗಿದೆ. ಈ ಹಿಂದೆ ಊರಿನ ಎಳನೀರಿಗೆ 30 ರೂ. ಇತ್ತು.
ಇದೀಗ 32 ರೂ.ಗೆ ಮಾರುತ್ತಿದ್ದಾರೆ. ಹೈಬ್ರೀಡ್ ಎಳನೀರು ಬೆಲೆ 35 ರೂ. ಆಗಿದೆ. ಬೇಸಗೆ ಹೆಚ್ಚಾದಂತೆ ಸಾಂಕ್ರಾಮಿಕ ರೋಗದ ಭೀತಿ ಎದುರಾಗಿದೆ. ಬೇಸಗೆಯಲ್ಲಿ ಹೆಚ್ಚಾಗಿ ಚಿಕನ್ ಪಾಕ್ಸ್, ಅಲರ್ಜಿ, ತುರಿಕೆ, ಸಿಡುಬು, ಹೆಪಟೈಟಿಸ್ ಇತ್ಯಾದಿಗಳ ಬಗ್ಗೆ ಸಾರ್ವಜನಿಕರು ಎಚ್ಚರಿಕೆ ವಹಿಸಬೇಕಿದೆ.
ಶ್ವಾನಗಳ ಆರೈಕೆಗೆ ಹೀಗಿರಲಿಇನ್ನು ಮನೆಯಲ್ಲಿರುವ ಶ್ವಾನಗಳು ಕೂಡ ಬಿಸಿಲಿನ ತಾಪಕ್ಕೆ ಬಹುಬೇಗ ಬಳಲುತ್ತವೆ. ಹಾಗಾಗಿ ಅವುಗಳನ್ನು ಆದಷ್ಟು ನೆರಳಿನ ಪ್ರದೇಶದಲ್ಲಿರಿಸಿ, ಶುದ್ಧ ಕುಡಿಯುವ ನೀರಿನ ವ್ಯವಸ್ಥೆ ಮಾಡಬೇಕು. ಬಿಸಿಲಿನ ಝಳ ಹೆಚ್ಚಾಗುವ ಮೊದಲು ಶ್ವಾನಗಳನ್ನು ವಾಕಿಂಗ್‌ಗೆ ಕರೆದುಕೊಂಡು ಹೋಗಬೇಕು. ತಣ್ಣಗಿನ ನೀರಿನಲ್ಲಿ ಸ್ನಾನ ಮಾಡಿಸಬೇಕು. ನೀರಿನ ಅಂಶವಿರುವ ಆಹಾರವನ್ನು ತಿನ್ನಲು ಕೊಡಬೇಕು. ಅವುಗಳ ಕೂದಲು ಆದಷ್ಟು ಟ್ರಿಮ್ ಮಾಡಿದರೆ ಉತ್ತಮ. ಇನ್ನು ಜಾನುವಾರುಗಳಿಗೆ ಮನೆ ಮುಂದೆ, ಪಕ್ಷಿಗಳಿಗೆ ಕೊಂಚ ಎತ್ತರದ ಪ್ರದೇಶದಲ್ಲಿ ನೀರು ಇಡುವ ವ್ಯವಸ್ಥೆ ಮಾಡಿದರೆ ಉತ್ತಮ. ಎರಡು ವರ್ಷಗಳ ಹಿಂದೆ ಹೀಗೆ ಸೆಕೆ ಇತ್ತು !
ಎರಡು ವರ್ಷಗಳ ಹಿಂದೆ ಇದೇ ರೀತಿಯ ಉರಿ ಬಿಸಿಲು ಕರಾವಳಿಯಲ್ಲಿತ್ತು. 2017ರ ಮಾ.2ರಂದು 39.6 ಡಿ.ಸೆ. ಗರಿಷ್ಠ ತಾಪಮಾನ ದಾಖಲಾಗಿತ್ತು. ಇದಾದ ಬಳಿಕ 2018ರಲ್ಲಿ ಮಾ.12ರಂದು 36.8 ಡಿ.ಸೆ. ತಾಪಮಾನ ದಾಖಲಾಗಿತ್ತು. ಇದೀಗ 2019ರಲ್ಲೂ ಸುಮಾರು 37 ಡಿ.ಸೆ. ನಷ್ಟು ತಾಪಮಾನ ದಾಖಲಾಗುತ್ತಿದ್ದು, ಹವಾಮಾನ ಇಲಾಖೆ ಅಧಿಕಾರಿಗಳು ಹೇಳುವಂತೆ ಮುಂದಿನ ದಿನಗಳಲ್ಲಿ ಮತ್ತಷ್ಟು ಏರಿಕೆಯಾಗುವ ಸಾಧ್ಯತೆ ಇದೆ. ಚುನಾವಣ ಪ್ರಚಾರಕ್ಕೆ ಬಿಸಿ ತಾಪ
ಜಿಲ್ಲೆಯಲ್ಲಿ ಚುನಾವಣೆಯ ಕಾವು ಏರಿದ್ದು, ಅಭ್ಯರ್ಥಿಗಳು ಮತ್ತು ಕಾರ್ಯಕರ್ತರು
ಕೂಡ ತಮ್ಮ ಪಕ್ಷದ ಪರವಾಗಿ ಪ್ರಚಾರ ಪ್ರಾರಂಭಿಸಿದ್ದಾರೆ. ನಗರದಲ್ಲಿ ಏರುತ್ತಿರುವ
ಬಿಸಿಲಿನ ತಾಪಕ್ಕೆ ವಿವಿಧ ರಾಜಕೀಯ ಪಕ್ಷಗಳ ಕಾರ್ಯಕರ್ತರು ಕೂಡ ಹೈರಾಣಾಗಿದ್ದಾರೆ. ಏರಿದ ಉಷ್ಣಾಂಶ
ಈ ಬಾರಿ ಗರಿಷ್ಠ. ಕನಿಷ್ಠ ಉಷ್ಣಾಂಶದಲ್ಲಿ ಏರಿಳಿತವಾಗಿದೆ. ಸದ್ಯದ ಮುನ್ಸೂಚನೆಯ ಪ್ರಕಾರ ಕೆಲವು ದಿನಗಳ ಕಾಲ ಇದೇ ರೀತಿಯ ತಾಪಮಾನ ಇರಲಿದೆ.
– ಗವಾಸ್ಕರ್ ಸಾಂಗ,
ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರ ವಿಜ್ಞಾನಿ ನವೀನ್ ಭಟ್ ಇಳಂತಿಲ