Advertisement
ನದಿಗಳನ್ನು ಜೀವಿಗಳೆಂದೆ ಕರೆಯಬಹುದು. ಪ್ರತಿಯೊಂದಕ್ಕೂ ವಿಭಿನ್ನ ಆಧ್ಯಾತ್ಮಿಕ ಸೆಳೆತವಿದೆ. ಗುಣಸ್ವಭಾವ, ವ್ಯಕ್ತಿತ್ವವಿದೆ ಮತ್ತು ಪೋಷಕಾಂಶ ಸಾಗಿಸುವ ಸಾಮರ್ಥ್ಯವನ್ನು ಪಡೆದಿರುವುದರಿಂದ ಅವು ಪ್ರಕೃತಿ ಸೃಷ್ಟಿಸಿದ ನೈಸರ್ಗಿಕ ಮೂಲಸೌಕರ್ಯವಾಗಿದೆ. ಆದ್ದರಿಂದ ನದಿಗಳು ಮಾತೃಸಮಾನ. ಆಹಾರ ಮತ್ತು ಪೋಷಕಾಂಶವನ್ನು ಒದಗಿಸುತ್ತದೆ. ಆ ಮೂಲಕ ವ್ಯಾಪಕ ಆರ್ಥಿಕ ಚಟುವಟಿಕೆಗಳಿಗೆ ಪ್ರೋತ್ಸಾಹವನ್ನೂ ನೀಡುತ್ತದೆ. ಜನರ ಆಧ್ಯಾತ್ಮಿಕ ಬೆಳವಣಿಗೆಗೆ ನದಿಗಳು ಹಿನ್ನೆಲೆಯನ್ನು ಸೃಷ್ಟಿಸುತ್ತವೆ. ಭಾರತದ ಪ್ರಮುಖ 13 ನದಿಗಳು ಸುಮಾರು 18.90 ಲಕ್ಷ ಚದರ ಮೀ. ಫಲವತ್ತಾದ ಜಲಾನಯನ ಪ್ರದೇಶವನ್ನು ಒದಗಿಸಿದೆ. ದೇಶದ ಪ್ರಮುಖ 13 ನದಿಗಳು, 202 ಉಪನದಿಗಳೂ ಒಳಗೊಂಡಂತೆ 42,830 ಕಿ.ಮೀ. ವಿಸ್ತಾರವುಳ್ಳ ಶೇ.57.45 ಭೌಗೋಳಿಕ ಪ್ರದೇಶವನ್ನು ಆವರಿಸಿದೆ.
Related Articles
Advertisement
ಯುರೋಪಿನ ದೊಡ್ಡ ನದಿ ರೈನ್; ಜರ್ಮನಿ, ಸ್ವಿಸ್, ಫ್ರಾನ್ಸ್, ನೆದರ್‌ಲ್ಯಾಂಡ್ಸ್, ಆಸ್ಟ್ರಿಯಾ ಮುಂತಾದ ದೇಶಗಳನ್ನು ಸಂಪರ್ಕಿಸುವ ಕೊಂಡಿಯಾಗಿದೆ. ರೈನ್ ಯುರೋಪಿನ ಇತಿಹಾಸ, ಸಂಸ್ಕೃತಿ ಮತ್ತು ಪರಂಪರೆಯೊಂದಿಗೆ ಬೆರೆತಿದೆ. ಆದರೆ ಈ ನದಿಯ ಪರಿಸರ ಅವನತಿಯಿಂದಾಗಿ ಯುರೋಪಿನ ಕೃಷಿ, ಆರ್ಥಿಕತೆ, ಸಂಸ್ಕೃತಿ ಮತ್ತು ಸಾಮಾಜಿಕ ಜೀವನಕ್ಕೆ ಅಪಾಯ ಬಂದೊದಗಿತ್ತು. ಉದ್ದಿಮೆಗಳ ರಾಸಾಯ ನಿಕ ತ್ಯಾಜ್ಯದಿಂದಾಗಿ ನದಿ ನೀರು ಕಲುಷಿತಗೊಂಡು ಮೀನಿನ ಸಂತತಿ ಕ್ಷೀಣವಾಗಲಾರಂಭಿಸಿತು. ಅಲ್ಲಿನ ನಾಯಕರು ಸಕಾಲದಲ್ಲಿ ಎಚ್ಚೆತ್ತ ಪರಿಣಾಮ ನದಿ ಪುನಶ್ಚೇತನಗೊಂಡು ಮರಳಿ ಅಭಿವೃದ್ಧಿಯ ಹಳಿಯಲ್ಲಿ ನಿಂತಿದೆ. ನದಿಯಲ್ಲಿ ಸಲ್ಮಾನ್ ಮೀನುಗಳ ಸಂತತಿ ಅಭಿವೃದ್ಧಿಗೊಳ್ಳತೊಡಗಿದೆ. ನದಿ ಮರಳಿ ಪುನಶ್ಚೇತನಗೊಳ್ಳಬೇಕಾದರೆ ಸಮಯ ಮತ್ತು ಅಪಾರ ಹಣ ಖರ್ಚಾಗುತ್ತದೆ. ರೈನ್ ನದಿಯ ಪುನಶ್ಚೇತನ ಕಣ್ಣು ತೆರೆಸುತ್ತದೆ. ಅದು ನದಿ ಪುನರುಜ್ಜೀವನದ ದಿಸೆಯಲ್ಲಿ ಅನೇಕ ದೇಶಗಳಿಗೆ ಸ್ಫೂರ್ತಿಯಾಗಿದೆ.
ನದಿಯನ್ನು ನಿಮ್ಮ ತಾಯಿಯಂತೆ ಪೂಜಿಸಿ ಅದು ನಿಮ್ಮನ್ನು ಕಾಪಾಡುತ್ತದೆ :
ನದಿಯನ್ನು ನಿಮ್ಮ ತಾಯಿಯಂತೆ ಪೂಜಿಸಿದರೆ ಅದು ನಿಮ್ಮನ್ನು ಕಾಪಾಡುತ್ತದೆ ಎಂಬ ನಮ್ಮ ಸಂತರು ಮತ್ತು ಸ್ವಾಮೀಜಿಗಳ ಮಾತನ್ನು ಕೇಂದ್ರ ಸರಕಾರದ ನದಿ ಅಭಿವೃದ್ಧಿ ವಿಷನ್ ದಾಖಲೆಯೂ ಪುಷ್ಟೀಕರಿಸುತ್ತದೆ. ಸಾಮಾನ್ಯ ಮನುಷ್ಯನೊಬ್ಬನಿಗೆ ಸ್ವಾಸ್ಥ್ಯ ನದಿಗಳಲ್ಲಿ ಅಡಗಿರುವ ಆರ್ಥಿಕ ಲಾಭಗಳ ಅರಿವು ಇಲ್ಲದಿದ್ದರೂ ಅವನು ನದಿಯನ್ನು ದೇವೀ ಎಂಬ ಭಾವನೆಯೊಂದಿಗೆ ಪೂಜಿಸುತ್ತಾನೆ. ಆದ್ದರಿಂದ ನದಿಯನ್ನು ರಕ್ಷಿಸುತ್ತಾನೆ. ಸಂತರೂ ಸ್ವಾಮೀಜಿಗಳು ತಮ್ಮ ಯೋಗ ಶಕ್ತಿಯಿಂದ ನದಿಗಳ ಆರ್ಥಿಕ, ಸಾಮಾಜಿಕ ಮತ್ತು ಆಧ್ಯಾತ್ಮಿಕ ಲಾಭಗಳನ್ನು ಕಂಡಿದ್ದರು. ಪರಿಸರ ವಿಜ್ಞಾನಿಗಳು ಮಾನವನ ಮೇಲೆ ನದಿಗಳ ಧನಾತ್ಮಕ ಪರಿಣಾಮಗಳನ್ನು ಈಗ ತಿಳಿದುಕೊಂಡಿದ್ದಾರೆ.
ನಮಾಮಿ ಗಂಗಾ :
ಪವಿತ್ರ ಗಂಗಾ ನದಿಯನ್ನು ಮಾಲಿನ್ಯದಿಂದ ರಕ್ಷಿಸಲು ಕೇಂದ್ರ ಸರಕಾರ 2014ರಲ್ಲಿ “ನಮಾಮಿ ಗಂಗೆ’ ಕಾರ್ಯಕ್ರಮವನ್ನು ಘೋಷಿಸಿತು. ಜೀವ ವೈವಿಧ್ಯದ ಪರಿಷ್ಕರಣೆ, ಜನರಲ್ಲಿ ಪರಿಸರ ಜಾಗೃತಿಯನ್ನುಂಟು ಮಾಡುವುದು, ಗ್ರಾಮಗಳ ಆರ್ಥಿಕ ಮತ್ತು ಆಧ್ಯಾತ್ಮಿಕ ಅಭಿವೃದ್ಧಿಗಾಗಿ ಗಂಗಾ ಗ್ರಾಮಗಳನ್ನು ಅಭಿವೃದ್ಧಿಪಡಿಸುವುದು ಯೋಜನೆಯ ಉದ್ದೇಶ. ಕಳೆದ ಐದು ವರ್ಷಗಳಿಂದ ಗಂಗಾನದಿಯನ್ನು ಉಳಿಸುವ ಪ್ರಯತ್ನ ತೀವ್ರಗೊಂಡಿದ್ದು ಹೆಚ್ಚೆಚ್ಚು ಸ್ವಯಂಸೇವಕರು, ದಾನಿಗಳು, ರಾಜಕಾರಣಿಗಳು, ಯುವಕರು, ಸಂತರು ಮತ್ತು ಮಠಾಧೀಶರು ಗಂಗಾಮಾತೆಯನ್ನು ರಕ್ಷಿಸುವಲ್ಲಿ ಆಸಕ್ತಿ ತೋರಿದ್ದಾರೆ. ಹಿಮಾಲಯದಿಂದ ಬಂಗಾಲಕೊಲ್ಲಿಯವರೆಗಿನ ಗಂಗಾ ನದಿಯ, ಸುಮಾರು 2,500 ಕಿ.ಮೀ. ಪ್ರಯಾಣವು ಮಿಲಿಯಗಟ್ಟಳೆ ಜನರಿಗೆ ಜೀವನೋಪಾಯವಾಗಿದೆ. ಜಗತ್ತಿನ ಅತೀ ಶ್ರೀಮಂತ ಜೀವವೈವಿಧ್ಯವನ್ನು ಹೊಂದಿದ್ದು, ಕಲಾವಿದರು, ಕವಿಗಳು, ತಣ್ತೀಜ್ಞಾನಿಗಳು ಮತ್ತು ಚಿತ್ರಕಾರರಿಗೆ ಸ್ಫೂರ್ತಿಯ ಸೆಲೆ-ನೆಲೆಯಾಗಿದೆ.
ಗಂಗೆ ಒಂದು ಆಧ್ಯಾತ್ಮಿಕ ರಾಜಧಾನಿ :
ಗಂಗೆಯು ಅನೇಕ ಕಡೆಗಳಲ್ಲಿ ಶುದ್ಧಿಯಾಗಿದ್ದಾಳೆ ಎಂಬುದು ಸಂತಸದ ವಿಚಾರ. ನದಿಯಲ್ಲಿ ಜಲಚರ ಜೀವಿಗಳ ಚಟುವಟಿಕೆಗಳು ಅದರ ಪುನಶ್ಚೇತನದ ಮಾಪನವಾಗಿದೆ. ಒಂದು ಸಮೀಕ್ಷೆಯಂತೆ ಗಂಗಾ ತೀರದಲ್ಲಿ ಸುಮಾರು 21 ಡಾಲ್ಫಿನ್‌ಗಳಿದ್ದರೆ ಈಗ ಸುಮಾರು 35 ರಿಂದ 39 ರಷ್ಟಿವೆ. ದೇಶದ ಬಹುಪಾಲು ಭವಿಷ್ಯ ಗಂಗಾನದಿಯ ಕಲ್ಯಾಣವನ್ನು ಅವಲಂಬಿಸಿದೆ ಮತ್ತು ನದಿಯನ್ನು ಪುನರುಜ್ಜೀವನಗೊಳಿಸುವಲ್ಲಿ, ಮಾಲಿನ್ಯರಹಿತವಾಗಿಡುವಲ್ಲಿ ಸರ್ವ ಪ್ರಯತ್ನ ಅಗತ್ಯ ಎಂದು ಅಲ್ಲಹಾಬಾದ್ ಉಚ್ಚನ್ಯಾಯಾಲಯ ಹೇಳಿದೆ. ದೇಶಾದ್ಯಂತ ಈಗ ನಡೆಯುತ್ತಿರುವ ನದಿ ರಕ್ಷಿಸಿ ಆಂದೋಳನಕ್ಕೆ ಮುಖ್ಯ ಸ್ಫೂರ್ತಿ ಗಂಗೆಯ ಪುನಶ್ಚೇತನ.
ನದಿಗಳ ಪುನಶ್ಚೇತನ ಒಂದು ಸಾಮೂಹಿಕ ಆಂದೋಲನವಾಗಬೇಕು. ಜನರಲ್ಲಿ ನದಿಗಳ ಬಹು ವಿಧದ ಲಾಭಗಳ ಬಗ್ಗೆ ಜಾಗೃತಿಯುಂಟಾಗಬೇಕು. ಈ ಕಾರ್ಯದಲ್ಲಿ ಜನರು ಭಾಗಿಗಳಾದರೆ, ಅಪಾರ ಸರಕಾರೀ ಹಣವೂ ಉಳಿತಾಯವಾಗುತ್ತದೆ. ಜನರು ಶ್ರಮದಾನದ ಮೂಲಕ ತಮ್ಮ ರಾಜ್ಯಗಳಲ್ಲಿ ಹರಿಯುವ ನದಿಗಳ ಪುನಶ್ಚೇತನ ಕಾರ್ಯಗಳಲ್ಲಿ ಸ್ವಯಂಪ್ರೇರಣೆ
ಯಿಂದ ತಮ್ಮನ್ನು ತೊಡಗಿಸಿಕೊಳ್ಳಬೇಕು. ಜನಪ್ರತಿನಿಧಿಗಳು ಪಕ್ಷಭೇದ ಮರೆತು ಪಾದಯಾತ್ರೆಯ ಮೂಲಕ ಜನಜಾಗೃತಿಯನ್ನುಂಟು ಮಾಡಬೇಕು. ನದಿಗಳ ಪುನಶ್ಚೇತನದಿಂದ ದೇಶ ಅಭಿವೃದ್ಧಿ ಮತ್ತು ಏಳಿಗೆಯನ್ನು ಸಾಧಿಸಲು ಸಾಧ್ಯವಿದೆ.
-ಜಲಂಚಾರು ರಘುಪತಿ ತಂತ್ರಿ, ಉಡುಪಿ