ಬೆಂಗಳೂರು/ಹುಬ್ಬಳ್ಳಿ: ಉತ್ತರ ಕರ್ನಾಟಕ, ಮಲೆನಾಡು ಭಾಗದಲ್ಲಿ ಮಳೆ ಅಬ್ಬರಿಸುತ್ತಿದ್ದು, ಜನಜೀವನ ಅಸ್ತವ್ಯಸ್ತವಾಗಿದೆ. ಪ್ರಮುಖ ಜಲಾಶಯಗಳ ಒಳಹರಿವು ಹೆಚ್ಚಾಗಿದ್ದು, ಪ್ರವಾಹ ಸ್ಥಿತಿ ನಿರ್ಮಾಣವಾಗಿದೆ. ಗುರುವಾರ ಮುಂಜಾನೆ 8.30ಕ್ಕೆ ಅಂತ್ಯಗೊಂಡ 24 ತಾಸುಗಳ ಅವಧಿಯಲ್ಲಿ ಯಲ್ಲಾಪುರದಲ್ಲಿ ರಾಜ್ಯದಲ್ಲಿಯೇ ಅಧಿಕ 18 ಸೆಂ.ಮೀ.ಮಳೆ ಸುರಿಯಿತು.
ಉತ್ತರ ಕನ್ನಡ ಜಿಲ್ಲೆಯಲ್ಲಿ ಘಟ್ಟದ ಮೇಲ್ಭಾಗದಲ್ಲಿ ಧಾರಾಕಾರ ಮಳೆ ಆಗುತ್ತಿರುವುದರಿಂದ ಬೇಡ್ತಿ, ಕಾಳಿ ನದಿಯಲ್ಲಿ ನೀರಿನ ಹರಿವು ಹೆಚ್ಚಾಗಿದೆ. ಕೊಡಸಳ್ಳಿ ಜಲಾಶಯದಿಂದ 0.2 ಟಿಎಂಸಿ ಅಡಿ ನೀರು ಹೊರ ಬಿಡಲಾಗುತ್ತಿದ್ದು, ಕದ್ರಾ ಜಲಾಶಯ ಭರ್ತಿಗೆ ಕ್ಷಣಗಣನೆ ಆರಂಭವಾಗಿದೆ. ಭರ್ಜರಿ ಮಳೆಯಿಂದ ಕೊಡಸಳ್ಳಿ ಮತ್ತು ಕದ್ರಾ ಜಲಾಶಯಗಳಿಂದ 24 ಗಂಟೆ ಜಲವಿದ್ಯುತ್ ಉತ್ಪಾದನೆ ನಡೆದಿದೆ.
ಗಂಗಾವಳಿ ನದಿ ಅಪಾಯದ ಮಟ್ಟ ಮೀರಿದ್ದರಿಂದ ಅಂಕೋಲಾ ತಾಲೂಕಿನ ಹಲವು ಗ್ರಾಮಗಳ ಜನರನ್ನು ಸುರಕ್ಷಿತ ಪ್ರದೇಶಕ್ಕೆ ಸಾಗಿಸಲು ದೋಣಿ ವ್ಯವಸ್ಥೆ ಕಲ್ಪಿಸಲಾಗಿದೆ. ರಾಮನಗುಳಿ ಬಳಿ ರಾಷ್ಟ್ರೀಯ ಹೆದ್ದಾರಿ ಮೇಲೆ ಭಾರೀ ಪ್ರಮಾಣದ ಗುಡ್ಡ ಕುಸಿದು ಬಿದ್ದಿದ್ದರಿಂದ ಹುಬ್ಬಳ್ಳಿ-ಅಂಕೋಲಾ ಮಧ್ಯೆ ರಾಷ್ಟ್ರೀಯ ಹೆದ್ದಾರಿಯಲ್ಲಿ ಎಂಟು ಗಂಟೆ ಕಾಲ ಸಂಚಾರ ಸ್ಥಗಿತಗೊಂಡಿತ್ತು. ಮಂಗಳೂರಿನಿಂದ ಹುಬ್ಬಳ್ಳಿ ಕಡೆಗೆ ಪಾಮ್ ಆಯಿಲ್ ಹೊತ್ತೂಯ್ಯುತ್ತಿದ್ದ ಲಾರಿ ಮಣ್ಣಿನಡಿ ಸಿಲುಕಿದ್ದು, ಚಾಲಕ ಪ್ರಾಣಾಪಾಯದಿಂದ ಪಾರಾಗಿದ್ದಾನೆ. ಅರಬೈಲ್ ಸಮೀಪದ ಡಬ್ಗುಳಿಯಲ್ಲಿ ಭಾರೀ ಭೂಕುಸಿತ ಉಂಟಾಗಿದ್ದು, ಸಂಪರ್ಕ ಕಡಿತಗೊಂಡಿದೆ. ಬಳ್ಳಾರಿ ಜಿಲ್ಲೆ ಹೂವಿನಹಡಗಲಿಯಲ್ಲಿ ತುಂಗಭದ್ರಾ ನದಿಯ ಒಳ ಹರಿವು ಹೆಚ್ಚುತ್ತಿದ್ದು, ರಾಜವಾಳ ಡ್ಯಾಂ ಭರ್ತಿಯಾಗಿದೆ. ಸಿಂಗಟಾಲೂರು ಬ್ಯಾರೇಜ್‌ಗೂ ಭಾರೀ ಪ್ರಮಾಣದ ನೀರು ಹರಿದು ಬರುತ್ತಿದೆ. ಧಾರವಾಡ, ಬೆಳಗಾವಿ ಜಿಲ್ಲೆಯಲ್ಲೂ ಭಾರೀ ಮಳೆಯಾಗಿದ್ದು, ಜನಜೀವನ ಅಸ್ತವ್ಯಸ್ತವಾಗಿದೆ. ಗೋವಾದಲ್ಲೂ ಭಾರೀ ಮಳೆಯಾಗುತ್ತಿದ್ದು, ಮಹದಾಯಿ ನದಿ ಉಕ್ಕಿ ಹರಿಯುತ್ತಿದೆ.