Advertisement

ನದಿ ನೀರು ಕ್ಷೀಣ-ಜಾಕ್‌ವೆಲ್‌ ತಳಕ್ಕೆ ರಂಧ್ರ

01:09 PM Jun 01, 2017 | Team Udayavani |

ಹರಿಹರ: ನಗರಕ್ಕೆ ನೀರು ಪೂರೈಸುವ ಕವಲೆತ್ತು ಜಾಕ್‌ವೆಲ್‌ ರಂಧ್ರಗಳಿಗೆ ನದಿ ನೀರು ದೊರೆಯದ ಕಾರಣ ನಗರಸಭೆ ಅಧಿಕಾರಿಗಳು ಬುಧವಾರ ಜಾಕ್‌ವೆಲ್‌ನ ಕೆಳಭಾಗದಲ್ಲಿ ಹೊಸ ರಂಧ್ರ ಕೊರೆದು ಬಾವಿಗೆ ನೀರು ಹರಿಯುವಂತೆ ಮಾಡಿದರು.

Advertisement

ನದಿ ಪಾತ್ರದ ಜನವಸತಿ ಪ್ರದೇಶಗಳಿಗೆ ಕುಡಿಯುವ ಉದ್ದೇಶಕ್ಕೆಂದು ಜಲಾಶಯದಿಂದ 15 ದಿನಗಳ ಹಿಂದೆ ತುಂಗಭಧ್ರ ನದಿಗೆ ನೀರು ಹರಿಸಲಾಗಿತ್ತು. ಆದರೆ ನೀರಿನ ಹರಿವು ಕ್ಷೀಣಿಸಿರುವ ಪರಿಣಾಮ ಮುಂಚಿನ ಎರಡು ರಂಧ್ರಗಳಿಗೆ ನೀರು ದೊರೆಯದಾಗಿ ಕಳೆದೆರಡು ದಿನಗಳಿಂದ ನಗರಕ್ಕೆ ನೀರು ಪೂರೈಸಲಾಗಿರಲಿಲ್ಲ. 

ಬುಧವಾರ ಸಂಜೆ ಜಾಕ್‌ವೆಲ್‌ ಸ್ಥಳಕ್ಕೆ ತೆರಳಿ ಪರಿಶೀಲಿಸಿದ ನಗರಸಭೆ ಅಧ್ಯಕ್ಷೆ ಆಶಾ ಮರಿಯೋಜಿರಾವ್‌ ಮತ್ತಿತರರು, ಜಾಕ್‌ವೆಲ್‌ ರಂಧ್ರಗಳ ಕೆಳ ಮಟ್ಟದಲ್ಲಿ ನದಿ ನೀರು ಹರಿಯುತ್ತಿರುವುದನ್ನು ಗಮನಿಸಿ ಜಾಕ್‌ ವೆಲ್‌ನ ಗೋಡೆಯ ಆ ರಂಧ್ರಗಳಿಗಿಂತ ಕೆಳಭಾಗದಲ್ಲಿ ಹೊಸ ರಂಧ್ರ ಅಥವಾ ಪ್ರವೇಶದ್ವಾರ ಕೊರೆಸುವ ನಿರ್ಣಯ ಕೈಗೊಂಡರು. 

ಅದರಂತೆ ತಕ್ಷಣ ನಗರಸಭೆ ಜೆಸಿಬಿ ವಾಹನ ತರಿಸಿ ಜಾಕ್‌ವೆಲ್‌ನ ಮುಂಚಿನ ರಂಧ್ರಗಳಿಗಿಂತ ಎರಡು ಅಡಿ ಕೆಳಭಾಗದಲ್ಲಿ ಹೊಸದಾಗಿ 2-3 ಅಡಿ ವ್ಯಾಸದ ರಂಧ್ರ ಕೊರೆಸಿದರು. ಕ್ಷಣಮಾತ್ರದಲ್ಲಿ ನದಿ ನೀರು ರಭಸವಾಗಿ ಜಾಕ್‌ ವೆಲ್‌ನೊಳಗೆ ಪುಟಿಯತೊಡಗಿತು. ಕೆಲ ಹೊತ್ತಿನಲ್ಲಿ ಮೋಟರ್‌ ಪಂಪ್‌ ಗಳು ನೀರೆತ್ತತೊಡಗಿದ್ದು, ಗುರುವಾರದಿಂದ ಮತ್ತೆ ನಗರದ ನೀರು ಪೂರೈಕೆ ಸುಗಮವಾಗಲಿದೆ. 

ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅಧ್ಯಕ್ಷೆ ಆಶಾ, ಕಳೆದ ಶನಿವಾರದಿಂದಲೇ ನೀರೆತ್ತುವುದು ಸ್ಥಗಿತಗೊಂಡಿದ್ದು, ಈ ಬಗ್ಗೆ ಪೌರಾಯುಕ್ತರನ್ನು ಕೇಳಿದರೆ ವಿದ್ಯುತ್‌ ವ್ಯತ್ಯಯದ ನೆಪ ಹೇಳುತ್ತಿದ್ದರು. ಇಂಜಿನಿಯರ್‌ಗಳು ನದಿಯಲ್ಲಿ ನೀರಿಲ್ಲ ಎಂದಿದ್ದರು.

Advertisement

ಸ್ಥಳಕ್ಕೆ ಬಂದು ನೋಡಿದರೆ ಯಥೇತ್ಛ ನೀರು ಹರಿಯುತ್ತಿದ್ದರೂ ಜಾಕ್‌ವೆಲ್‌ ಸಿಗದ ಸಿ ಕಾರಣ ಕೆಳಗಡೆ ಹೊಸ ರಂಧ್ರ ಕೊರೆಸಲು ಸೂಚಿಸಿದೆ ಎಂದರು. ನಗರಸಭೆ ಸದಸ್ಯ ಸಿಗ್ಬತ್‌ ಉಲ್ಲಾ ಮಾತನಾಡಿ, 13 ವರ್ಷಗಳ ಹಿಂದೆ ಜಾಕ್‌ವೆಲ್‌ ನಿರ್ಮಿಸಿದ್ದು, ನೀರಿನ ಸೆಳವಿಗೆ ಮಣ್ಣು ಕೊಚ್ಚಿ ಹೋಗಿ ನದಿ ಆಳ ಹೆಚ್ಚಾಗಿರುವುದರಿಂದ ಜಾಕ್‌ವೆಲ್‌ ರಂಧ್ರಗಳು ಹರಿಯುವ ನೀರಿಗೆ ಸಿಗುತ್ತಿರಲಿಲ್ಲ.

ಅಧಿಕಾರಿಗಳು ಕೂಡಲೇ ಜಾಕ್‌ವೆಲ್‌ ಹೂಳು ತೆಗೆಸಬೇಕು. ಕಳೆದ 6 ತಿಂಗಳಿಂದ ಗ್ಯಾರೇಜ್‌ನಲ್ಲಿ ಬಿಟ್ಟಿರುವ ನಗರಸಭೆ ಜೆಸಿಬಿ ದುರಸ್ತಿಪಡಿಸಿ, ಖಾಸಗಿ ವಾಹನಕ್ಕೆ ಪಾವತಿಸುವ ಸಾರ್ವಜನಿಕ ಹಣ ಪೋಲು ಮಾಡುವುದನ್ನು ನಿಲ್ಲಿಸಬೇಕು ಎಂದರು. ಈ ಕುರಿತು ಏ.13ರಂದು “ನದಿಯಲ್ಲಿ ನೀರಿದ್ದರೂ ಜನತೆಗೆ ಲಭ್ಯವಿಲ್ಲ’ ಎಂಬ ಶೀರ್ಷಿಕೆಯಡಿ ಉದಯವಾಣಿ ವರದಿ ಪ್ರಕಟಿಸಿತ್ತು. 

Advertisement

Udayavani is now on Telegram. Click here to join our channel and stay updated with the latest news.

Next