Advertisement

ನದಿ ನೀರು ಇಳಿಕೆ: ಪುತ್ತೂರು-ಸುಳ್ಯದಲ್ಲಿ ಸೆಕೆ

03:54 PM Nov 29, 2017 | |

ಸುಳ್ಯ: ಉಭಯ ತಾಲೂಕಿನ ಜೀವನದಿಗಳಾದ ನೇತ್ರಾವತಿ, ಕುಮಾರ ಧಾರಾ ಹಾಗೂ ಪಯಸ್ವಿನಿಯಲ್ಲಿ ನೀರಿನ ಮಟ್ಟ ಇಳಿಕೆ ಕಂಡಿರುವುದು ಹಾಗೂ ಉಷ್ಣಾಂಶದಲ್ಲಿ ಭಾರೀ ಏರಿಕೆ ಉಂಟಾಗುತ್ತಿರುವುದು ಬೇಸಗೆಯ ಆರಂಭದಲ್ಲೇ ಬಿಸಿ-ಬಿಸಿ ಸುದ್ದಿ!.

Advertisement

ಫೆಬ್ರವರಿ ತನಕ ತನ್ನೊಡಲಲ್ಲಿ ಕೃಷಿಗೆ, ಜನರ ನಿತ್ಯಬಳಕೆಗೆ ಬೇಕಾದ ನೀರಿಗೆ ಬರ ಬಾರದಂತೆ ಹರಿಯುತ್ತಿದ್ದ ಈ ನದಿಗಳಲ್ಲಿ ಈ ಬಾರಿ ನವೆಂಬರ್‌ ಕೊನೆಯಲ್ಲೇ ನೀರಿನ ಮಟ್ಟ ಇಳಿಕೆ ಆಗಿದೆ. ಇದಕ್ಕೆ ಮುಖ್ಯ ಕಾರಣ ಏರಿದ ತಾಪಮಾನ, ಉಷ್ಣಾಂಶದಲ್ಲಿನ ದಿಢೀರ್‌ ವ್ಯತ್ಯಾಸ ಅನ್ನುತ್ತಾರೆ ಜಲ ತಜ್ಞರು.

ನೇತ್ರಾವತಿ ಉಭಯ ತಾಲೂಕಿನ ಪ್ರಮುಖ ನದಿ. ವಾರ್ಷಿಕ 430 ಟಿಎಂಸಿ ನೀರು ಇಲ್ಲಿ ಹರಿಯುತ್ತದೆ. ಜಲ ಸಂಪನ್ಮೂಲ ಇಲಾಖೆ 1994ರಿಂದ 2010ರ ತನಕದ ಸರ್ವೇ ಆಧಾರದಂತೆ ಪ್ರತೀ ವರ್ಷ ಜೂನ್‌ 1ರಿಂದ ಅಕ್ಟೋಬರ್‌ 30ರ ವರೆಗೆ ನೇತ್ರಾವತಿ ನದಿಯಲ್ಲಿ ಒಟ್ಟು 221.856 ಟಿಎಂಸಿ (ಅಂದಾಜು 201.7ರಿಂದ 240.6 ಟಿಎಂಸಿ) ನೀರು ಸಮುದ್ರ ಸೇರುತ್ತದೆ. ಆದರೆ ಕಳೆದ 6 ವರ್ಷಗಳಿಂದ ನೇತ್ರಾವತಿ ನದಿಯಲ್ಲಿ ಹರಿದ ನೀರಿನ ಪ್ರಮಾಣ 113.5ರಿಂದ 150.19 ಟಿಎಂಸಿ ಮಾತ್ರ  ಈ ಬಾರಿ ಜೂನ್‌ 1ರಿಂದ ಅಕ್ಟೋಬರ್‌ 30ರ ವರೆಗೆ ನೇತ್ರಾವತಿಯ 9 ಉಪನದಿಗಳು ಸೇರಿ ಪಶ್ಚಿಮ ಕರಾವಳಿ ಸೇರಿದ ನೀರಿನ ಪ್ರಮಾಣ ಕೇವಲ 110.1 ಟಿಎಂಸಿ ಅನ್ನುವ ಅಂಶ ಆತಂಕ ತರುವಂಥದ್ದು.

ಸುಮಾರು 12,497 ಕ್ಯುಬಿಕ್‌ ಮೀ. ನೀರು ತುಂಬಿಕೊಂಡು 148.5 ಕಿ.ಮೀ. ಹರಿಯುವ ನೇತ್ರಾವತಿ 4,25,280 ಚದರ ಕಿ.ಮೀ. ಭೂಮಿ ಹಸುರಾಗಿಸುತ್ತದೆ. ಹತ್ತು ಲಕ್ಷ ರೈತರಿಗೆ ತನ್ನೊಡಲಿನಿಂದ 464.62 ಟಿಎಂಸಿ ನೀರು ಒಪ್ಪಿಸುವುದು ಲೆಕ್ಕಾಚಾರ. ಈ ಬಾರಿ ಅದು ತಲೆಕೆಳಗಾಗಿದೆ. ಸೆ. 30ರ ವೇಳೆ ನೇತ್ರಾವತಿ ನದಿ ನೀರಿನ ಮಟ್ಟ 31.6 ಮೀಟರ್‌ ದಾಖಲಾಗಿತ್ತು. ಈ ವರ್ಷದ ನವೆಂಬರ್‌ ಮೊದಲ ವಾರದಲ್ಲಿ ಈ ಮಟ್ಟ 17.1 ಮೀಟರ್‌ಗೆ ಇಳಿದಿತ್ತು. ಜಿಲ್ಲೆಯಲ್ಲಿ ಮುಂಗಾರು ಮಳೆಯಲ್ಲಿ ಶೇ. 18ರಷ್ಟು ಕೊರತೆ ದಾಖಲಾಗಿದ್ದು, ರಾಜ್ಯ ವಿಪತ್ತು ನಿರ್ವಹಣ ಕೇಂದ್ರ ಜಿಲ್ಲೆಯನ್ನು ಕೊರತೆ ಮುಂಗಾರು ಪಟ್ಟಿಗೆ ಸೇರ್ಪಡೆಗೊಳಿಸಿದೆ.

ಕುಮಾರಧಾರೆ, ಪಯಸ್ವಿನಿ
ನೇತ್ರಾವತಿಯ ಜತೆಗೆ ಉಪ್ಪಿಂಗಡಿಯಲ್ಲಿ ಸಂಗಮಗೊಳ್ಳುವ ಕುಮಾರಧಾರೆಯಲ್ಲಿ ಹರಿವಿನ ಮಟ್ಟ ಸುರಕ್ಷಿತವಾಗಿಲ್ಲ. ಭಾಗಮಂಡಲದಿಂದ ಜೋಡುಪಾಲ ಮೂಲಕ ಸುಳ್ಯ ಪ್ರವೇಶಿಸುವ ಪಯಸ್ವಿನಿ, ಸುಳ್ಯ ತಾಲೂಕಿನ ಮೂಲಕ ಉಪ್ಪಿನಂಗಡಿಯನ್ನು ಬೆಸೆಯುವ ಕುಮಾರಧಾರೆಯನ್ನು ನಂಬಿದ ಸಾವಿರಾರು ಕುಟುಂಬಗಳಿಗೂ ಬರದ ಭೀತಿ ಆವರಿಸಿದೆ.

Advertisement

ಉಪ್ಪಿನಂಗಡಿಯಲ್ಲಿ ಕುಮಾರಧಾರೆಗೆ ಅಡ್ಡಲಾಗಿ ನಿರ್ಮಿಸುವ ಡ್ಯಾಂನಿಂದ ಪುತ್ತೂರು ನಗರಕ್ಕೆ ನೀರು ಪೂರೈಕೆಯಾಗುತ್ತದೆ. ಡ್ಯಾಂನಲ್ಲಿ ನೀರು ಇಳಿಮುಖಗೊಂಡರೆ, ನಗರದಲ್ಲಿ ಬರ ಭೀತಿ ಕಟ್ಟಿಟ್ಟ ಬುತ್ತಿ. ಪರ್ಯಾಯ ವ್ಯವಸ್ಥೆಗಳಾದ ಕೆರೆ ಹೂಳೆತ್ತಿ, ಅದನ್ನು ಬಳಸುವ ಬಗ್ಗೆ ನಗರಸಭೆ ಗಂಭೀರ ಚಿಂತನೆ ಮಾಡಿಲ್ಲ. ಕೇವಲ ಕೊಳವೆಬಾವಿಯನ್ನು ನಂಬಿರುವುದು ಕೂಡ ಇದಕ್ಕೆ ಕಾರಣ.

ಪಯಸ್ವಿನಿ ಹರಿಯುವ ಸುಳ್ಯ ನಗರದಲ್ಲಿ ನೀರು ಹಿಡಿದಿಡುವ ಯಾವುದೇ ಅಣೆಕಟ್ಟುಗಳು ಇಲ್ಲ. ಮಾರ್ಚ್‌ನಲ್ಲಿ ನಾಗಪಟ್ಟಣದ ಬಳಿ ನದಿಗೆ ಅಡ್ಡಲಾಗಿ ನಿರ್ಮಿಸುವ ಮರಳು ಕಟ್ಟವೇ ಕುಡಿಯುವ ನೀರಿಗೆ ಆಧಾರ. ಈ ಬಾರಿ ಬಿಸಿಲಿನ ತೀವ್ರತೆ ಕಂಡಾಗ, ಫೆಬ್ರವರಿಯಲ್ಲಿಯೇ ಕಟ್ಟ ಅಳವಡಿಸಬೇಕಾದೀತು.

ಉಷ್ಣಾಂಶ ಏರಿಳಿಕೆ
ಚಳಿಗಾಲವೋ ಬೇಸಗೆಯೋ ಎಂಬ ಅನುಮಾನ ಮೂಡುವಷ್ಟು ಬದಲಾವಣೆ ವಾತಾವರಣದಲ್ಲಿ ಕಂಡಿದೆ. ರಾತ್ರಿ ಸೆಕೆ ಇದ್ದರೆ, ಬೆಳಗ್ಗೆ ಚಳಿ, ಇನ್ನೊಂದು ದಿನ ಮಂಜು, ಮತ್ತೊಂದು ದಿನ ಮೋಡ ಕವಿದ ವಾತಾವರಣ ಕಂಡು ಬರುತ್ತಿದ್ದು, ಇದರಿಂದ ಆರೋಗ್ಯ, ಕೃಷಿಯ ಮೇಲೂ ದುಷ್ಪರಿಣಾಮ ಉಂಟಾಗುತ್ತಿದೆ. ಪುತ್ತೂರು, ಸುಳ್ಯ ನಗರದಲ್ಲಿ ಮಂಗಳವಾರ ಮಧ್ಯಾಹ್ನದ ವೇಳೆ 32ರಿಂದ 36 ಡಿಗ್ರಿ ಸೆಲ್ಸಿಯಸ್‌ ಉಷ್ಣಾಂಶ ದಾಖಲಾಗಿದೆ. ಇಷ್ಟು ಉಷ್ಣಾಂಶ ಮಾರ್ಚ್‌ ತಿಂಗಳಲ್ಲಿ ದಾಖಲಾದರೆ ಅಚ್ಚರಿ ಇರುತ್ತಿರಲಿಲ್ಲ. ಆದರೆ, ನವೆಂಬರ್‌ ಕೊನೆಯಲ್ಲೇ ಕಂಡು ಬಂದಿರುವುದು ಪರಿಸರವನ್ನು ಬೇಕಾಬಿಟ್ಟಿಯಾಗಿ ಹಾಳುಗೈಯುತ್ತಿ ರುವುದಕ್ಕೆ ಎಚ್ಚರಿಕೆಯ ಸೂಚನೆ.

ತಾಪಮಾನದ ಬದಲಾವಣೆ 
ಜಾಗತಿಕ ತಾಪಮಾನದಲ್ಲಿ ಉಂಟಾದ ಬದಲಾವಣೆಯೇ ಈ ವ್ಯತ್ಯಾಸಗಳಿಗೆ ಕಾರಣ. ಸಂಪೂರ್ಣ ಚಳಿ ಆವರಿಸಿಕೊಳ್ಳಬೇಕಿದ್ದ ಈ ಹೊತ್ತಲ್ಲಿ, ಅಂತಹ ಲಕ್ಷಣಗಳು ಕಾಣುತ್ತಿಲ್ಲ. ತಾಪಮಾನದಲ್ಲಿನ ಬದಲಾವಣೆಗೆ ಹಸಿರು ಸಂಪತ್ತು ನಾಶ, ವಾಯು ಮಾಲಿನ್ಯದಂತಹ ಪರಿಸರ ಮಾರಕ ಹೆಜ್ಜೆಗಳೇ ಕಾರಣ. 
ಡಾ| ಶ್ರೀಶ ಕುಮಾರ್‌, ಉಪನ್ಯಾಸಕರು

ಕಿರಣ್‌ ಪ್ರಸಾದ್‌ ಕುಂಡಡ್ಕ 

Advertisement

Udayavani is now on Telegram. Click here to join our channel and stay updated with the latest news.

Next