Advertisement
ಉತ್ತರ ಕನ್ನಡದ ಕಾಳಿ ನದಿಗೆ ಅಣೆಕಟ್ಟುಗಳ ಸರಮಾಲೆ ಇದೆ. ಸುಪಾ, ಕಾನೇರಿ, ಬೊಮ್ಮನಹಳ್ಳಿ, ತಟ್ಟಿಹಳ್ಳ, ಕೊಡಸಳ್ಳಿ, ಕದ್ರಾಗಳಲ್ಲಿ ಜಲಾಶಯವಿದೆ. ಸುಮಾರು 184 ಕಿಲೋ ಮೀಟರ್ ಹರಿಯುತ್ತಿದ್ದ ನದಿ ಇಂದು 40 ಕಿಲೋ ಮೀಟರ್ ಕೂಡಾ ಹರಿಯುತ್ತಿಲ್ಲ, ನಮ್ಮ ವಿದ್ಯುತ್ ಲಾಭಕ್ಕೆ ನಿಂತು ನಿಂತು ಸಾಗುತ್ತಿದ್ದಾಳೆ. 40 ವರ್ಷಗಳೀಚೆಗೆ ಕಾಳಿ ವಿದ್ಯುತ್ ಶಕ್ತಿ ಮಾತೆಯಾಗಿ ಬದಲಾಗಿದ್ದಾಳೆ. ಹರಿಯುವ ನದಿ ನಿಂತಿದ್ದಕ್ಕೆ ಕಣಿವೆಯ ಕಾಡು ಮುಳುಗಿದೆ. ಕೃಷಿ ಭೂಮಿಗಳು ಜಲಸಮಾಧಿಯಾಗಿವೆ. ನದಿಯ ಜೊತೆ ಒಡನಾಡಿ ನೀರಿನ ನಿಜ ಬದುಕು ಅರ್ಥಮಾಡಿಕೊಂಡವರು ನಿರಾಶ್ರಿತರಾಗಿ ಹೊಸ ನೆಲೆಗೆ ಹೋಗಿದ್ದಾರೆ. ನದಿ ದಂಡೆಯ ಹೆಬ್ಬಿದಿರು ನಂಬಿದ್ದ ಗಜಪಡೆ ಆಹಾರಕ್ಕೆ ಭತ್ತ, ಬಾಳೆ ತೋಟ ಹುಡುಕುತ್ತಿವೆ. ನದಿ ಕೊನೆಯ ಕಾರವಾರದ ಸದಾಶಿವಘಡದ ಸಮುದ್ರತಟದ ಮೀನುಗಾರರಿಗೂ, ನದಿಮೂಲ ಕುಶಾವಳಿಯ ಕುಣಬಿ ವನವಾಸಿಗರಿಗೂ ನದಿ ನೋಟದ ಅನುಭವದಲ್ಲಿ ವ್ಯತ್ಯಾಸವಿದೆ. ದಂಡೆ ನಿವಾಸಿಗಳ ಕೊಂಕಣಿ, ಕನ್ನಡ, ಮರಾಠಿ, ಹವ್ಯಕ, ಸಿದ್ದಿ, ಗೌಳಿ, ಅಟ್ಟೆಕುಣಬಿಯರ ಭಾಷಾ ಸೊಬಗು ಕಾಡು ಸಂಕುಲಗಳಿಗೆ ಬೆರಗಿನ ಹೆಸರಿಟ್ಟಿದೆ. ಕಾಟಾಕ್ವಯ್(ಕಾಜಾಣ), ಕಟ್ರಿಕೆಮಿಯಾವ್(ಕಪ್ಪಿರುವೆ)ಗಳ ಪಟ್ಟಿ ಮಾಡುತ್ತ ಕಾಳಿಸಂಡೋ(ಮೂಲ)ದಿಂದ ಕಾರವಾರದತ್ತ ಮೂಲನಿವಾಸಿಗಳನ್ನು ಮಾತಾಡಿಸಿದರೆ ಕಾಳಿ ಕಾವ್ಯ ಕೇಳಬಹುದು. ಕಾಡು ನದಿ ಕಣಿವೆಯ ಜನಕ್ಕೆ ಬದುಕುವ ಕೌಶಲ್ಯ ಕಲಿಸಿದೆ, ಶಕ್ತಿ ತುಂಬಿದೆ. ಆಹಾರ, ಕೃಷಿ ಬದುಕುಗಳಲ್ಲಿ ಹೆಜ್ಜೆ ಹೆಜ್ಜೆಗೆ ವಿಶೇಷತೆ ಬೆಳೆಸಿದೆ.
Related Articles
Advertisement
ಸ್ವಾತಂತ್ರ್ಯಪೂರ್ವದಲ್ಲಿ ಕ್ರಿ.ಶ 1895-1937ರ ಕಾಲದಲ್ಲಿ ಕೆನರಾದಲ್ಲಿ ಬರೆದ 42 ಅರಣ್ಯ ಕಾರ್ಯ ಯೋಜನೆಯ ವರದಿ ಓದಿದರೆ ಬ್ರಿಟೀಷರ ಕಾಳಿ ಕಣಿವೆಯ ತೇಗದ ಪ್ರೀತಿ ಕಾಣಿಸುತ್ತದೆ. ಮರದ ದೋಣಿಗಳು ನದಿಯಲ್ಲಿ ತೇಲಿ ಸಾರಿಗೆ ಸಂಪರ್ಕಕ್ಕೆ ಅನುಕೂಲವಾಗಿದ್ದು ಒಂದು ಮುಖವಾದರೆ ಇಲ್ಲಿ ಮರವೇ ನದಿಗುಂಟ ತೇಲಿದೆ. ಕ್ರಿ.ಶ 1905ರಲ್ಲಿ ಕ್ಲಿಕ್ಕಿಸಿದ ಒಂದು ಅಪರೂಪದ ಕಾಳಿ ನದಿಯ ಚಿತ್ರ ಕಾರವಾರದಲ್ಲಿದೆ. ಅದರಲ್ಲಿ ನದಿಯಲ್ಲಿ ತೇಲುವ ಮರ ಸಂಪತ್ತು ನೋಡಬಹುದು! ಇನ್ನೊಂದು ವಿಶೇಷವೆಂದರೆ ಕರಾವಳಿಯ ಎಲ್ಲ ನದಿಗಳಂಚಿನಲ್ಲಿ ಮರಕೊಯ್ಯುವ (ಸಾಮಿಲ್‌ಗಳು ) ಉದ್ದಿಮೆಗಳಿವೆ. ನೀರಲ್ಲಿ ಮುಳುಗಿಸಿ ಕಾಡು ಮರವನ್ನು ಕೀಟಬಾಧೆಯಿಂದ ಸಂರಕ್ಷಿಸುವುದು ಮರ ರಕ್ಷಣೆಯ ವೈಜಾnನಿಕ ವಿಧಾನವಾಗಿದೆ. ಇದಕ್ಕೆ ಪೂರಕವಾಗಿ ನೀರಲ್ಲಿ ತೇಲಿ ಬಂದ ನಾಟಾಗಳು ನದಿಯಂಚಿನಲ್ಲಿ ಸಾಮಿಲ್ ಜನನಕ್ಕೆ ಕಾರಣವಾಗಿದೆ.
ಅಮವಾಸ್ಯೆ, ಹುಣ್ಣಿಮೆಗಳು ಕಾಳಿ ಸಂಗಮದಲ್ಲಿ ಜಲಚರಗಳ ಸುಗ್ಗಿ ಕಾಲ. ಸಮುದ್ರ ಇಳಿತದ ಹೊತ್ತಿನಲ್ಲಿ ಸೇತುವೆಯಲ್ಲಿ ನಿಂತು ಕಾಳಿ ನದಿ ನೋಡಿದರೆ ನೂರಾರು ಮಹಿಳೆಯರು, ಮಕ್ಕಳೆಲ್ಲ ನದಿಗಿಳಿದು ಚಿಪ್ಪಿಕಲ್ಲು( ಬಳಚು, ಮೃದ್ವಂಗಿ) ಸಂಗ್ರಹಕ್ಕೆ ಪೈಪೋಟಿಗೆ ಇಳಿಯುತ್ತಾರೆ. ಕಾಲವಾ, ಕೊಂಡಿ, ತಿಸರೆ, ಕುರುಟೆ, ಕುಬಿ ಸಂಗ್ರಹಿಸುತ್ತಾರೆ. ಚಿಪ್ಪು ಹಿಡಿದು ಮಾರುವುದು ಬಡವರ ಅನ್ನದ ದಾರಿಯಾಗಿದೆ. ಸಮುದ್ರ ಸಂಗಮದಲ್ಲಿ ಸಿಹಿನೀರು, ಉಪ್ಪು ನೀರು ಸೇರುವ ತಾಣಗಳಲ್ಲಿ ವಿಶೇಷವಾಗಿ ಮೃದ್ವಂಗಿಗಳು ಬೆಳೆಯುತ್ತವೆ. ಇವು ಸಾಗರದ ಇಳಿತದ ಸಮಯಕ್ಕೆ ನದಿ ಮಕ್ಕಳಿಗೆ ದೊರೆಯುತ್ತದೆ. ನೀರಲ್ಲಿ ಮುಳುಗೇಳುತ್ತ ಹುಡುಕಾಟ ನಡೆಯುತ್ತದೆ. ಆದರೆ ಇದೇ ನದಿ ದಂಡೆಯ ದಾಂಡೇಲಿಯ ಕಾಗದ ಕಾರ್ಖಾನೆ ಕಾಡಿನ ಬಿದಿರು ಕಡಿದು, ನೆಡುತೋಪಿನ ಅಕೇಶಿಯಾ ಮರ ನಂಬಿ ಸಾವಿರಾರು ಕೋಟಿಯ ಉದ್ಯಮವಾಗಿದೆ.
ಜಲ ಮಾಲಿನ್ಯದ ಮುಖಗಳನ್ನು ನದಿದಂಡೆಯಲ್ಲಿ ನೋಡಬಹುದು. ಒಂದು ರೂಪಾಯಿ ಬಂಡವಾಳ ವಿನಿಯೋಗಿಸಿದೇ ನಿಸರ್ಗ ಅಕ್ಷರ ಬಾರದ ಬಡ ಮಕ್ಕಳಿಗೆ ಚಿಪ್ಪು ಉತ್ಪಾದಿಸಿ ಬದುಕಿಗೆ ದಾರಿ ತೋರಿಸಿದೆ. ನದಿ ನೋಡುವಾಗ ಪಾರಂಪರಿಕ ಬದುಕಿನ ಸೂಕ್ಷ್ಮಗಳು ಕಾಡುತ್ತವೆ.
ಕಾಳಿ ನದಿಗೆ ಕದ್ರಾದಲ್ಲಿ ಅಣೆಕಟ್ಟು ನಿರ್ಮಾಣವಾದಾಗ ಹಲವರು ನದಿಯ ಸಿಹಿ ನೀರಿನ ಹರಿವು ಕಡಿಮೆಯಾಗುವುದರಿಂದ ಸಮುದ್ರದ ಉಪ್ಪು ನೀರು ಒಳನುಸುಳುತ್ತಿದೆಯೆಂದರು. ಬೇಸಿಗೆಯಲ್ಲಿ ಕಾಡು ಗುಡ್ಡದಿಂದ ಸಾಗರ ಸೇರುವ ನದಿ ನೀರಿನ ಪ್ರಮಾಣ ಕಡಿಮೆಯಾಗುತ್ತಿದ್ದಂತೆ ಸಮುದ್ರದ ನೀರು ನದಿಗುಂಟ ಒಳ ನುಸುಳುತ್ತದೆ. ಸಮುದ್ರ ಸಂಗಮದಿಂದ ಹತ್ತಾರು ಕಿಲೋ ಮೀಟರ್ ದೂರದವರೆಗೂ ಉಪ್ಪು ನೀರು ನುಗ್ಗಿ ಭತ್ತದ ಗದ್ದೆ, ತರಕಾರಿ, ತೋಟಕ್ಕೆಲ್ಲ ತೊಂದರೆಯಾಗುತ್ತದೆ. ಉಪ್ಪು ಮಣ್ಣಿನಲ್ಲಿ ಬೆಳೆ ಬೆಳೆಯಲು ಅಸಾಧ್ಯವಾಗಿ ರೈತರು ಸಂಕಷ್ಟಕ್ಕೆ ಸಿಲುಕುತ್ತಾರೆ. ಸಿಹಿ ನೀರಿನ ಜಲಚರಗಳು ಮಾಯವಾಗುತ್ತವೆ. ಅಕ್ಕಪಕ್ಕದ ಕೃಷಿ ಹಸಿರು ಪರಿವರ್ತನೆಯಾಗುತ್ತದೆ. ನೀರಿನ ಗುಣ ಬದಲಾದರೆ ನದಿ ದಡದ ಬದುಕು ಕಂಗಾಲಾಗುತ್ತದೆ.
ನದಿಗಳ ನೆಲೆ ಬೆಲೆಯ ಅರಿವಿಲ್ಲದಿದ್ದರೂ ನೀರಿನ ಬೆಲೆಯಂತೂ ನಮಗೆಲ್ಲ ತಿಳಿದಿದೆ. ಗುಡ್ಡಬೆಟ್ಟದಲ್ಲಿ ಕೃಷಿ ನಂಬಿ ಬದುಕಿದ ಜನಪದರಿಗೆ ನದಿದಂಡೆಯ ಕಲ್ಲು, ಮರಗಳಲ್ಲಿ ದೇವರು ಕಾಣಿಸುತ್ತಿತ್ತು. ಈಗ ರಾಜಕಾರಣಿಗಳಿಗೆ ಪ್ರತಿ ನದಿಗಳ ನೀರಿನಲ್ಲಿ ವೋಟು, ನೋಟು ಕಾಣಿಸುತ್ತಿದೆ. ಯೋಜನೆ ಹೆಣೆಯುವ ಕೆಲಸ ನಡೆಯುತ್ತಿದೆ. ನದಿ ನಂಬಿ ಬದುಕಿದ ಉದ್ಯಮಗಳು ನದಿ ನುಂಗುವ ಆಟ ಆಡುತ್ತಿವೆ. ರಾಜಕಾರಣಿಗಳ ಬೆಂಗಾವಲಿನಲ್ಲಿರುವ ಉದ್ದಿಮೆಗಳು ನದಿದಂಡೆಯ ಉದ್ದಕ್ಕೂ ಹೊಸ ನಗರವಾಗಿ ಬೆಳೆಯುತ್ತಿವೆ. ಕಾಡು, ನೀರುಳಿಸಲು ಕಾನೂನಿದೆ. ನದಿಯ ಪರವಕಾಲತ್ತುಗಳಲ್ಲಿ ಮೀನಿನ ಮಾತಿಗಿಂತ ಜಮೀನಿನ ಮಾತು ಕೇಳಿಸುತ್ತಿದೆ. ಗಾಳ ಹಿಡಿದು ಒಂದು ಮೀನು ಹಿಡಿಯಲು ಎರಡು ತಾಸು ಕುಳಿತು ನದಿ ಅರಿಯುವ ಸಂಯಮ ಇಂದು ಯಾರಿಗಿದೆ? ಬದುಕಿನ ಅವಸರದ ಆಟಕ್ಕೆ ಮೀನಲ್ಲ, ನದಿಯನ್ನೇ ಹಿಡಿಯುವ ಕೆಲಸ ನಡೆದಿದೆ. ಮನುಕುಲವೇ ಮೇಲುಗೈ ಸಾಧಿಸಿರುವಾಗ ನಿಸರ್ಗದ ಸಹಜ ಕಣ್ಣಿನಲ್ಲಿ ನದಿ ನೋಡುವ ಮನಸ್ಸಾದರೂ ಯಾರಿಗಿದೆ?
ಶಿವಾನಂದ ಕಳವೆ