ಯುವ ಕತೆಗಾರ ಸಂದೀಪ ಈಶಾನ್ಯ ಮೆಸೇಜಿಸಿ “”ಅಕ್ಕಾ , ನಿಮ್ಮ ಅಂಗಳದಂಚಿನಲ್ಲಿ ಹರಿಯುವ ನದಿಯ ಕುರಿತು ಮತ್ತೂಮ್ಮೆ ಬರೆಯಿರಿ” ಅಂದಿದ್ದ. ಜೀವದ ಗೆಳತಿಯಂತೆ ಸಖ್ಯ ಬೆಳೆಸಿಕೊಂಡಿದ್ದ ನದಿಯ ಕುರಿತು ಈಗ ಯೋಚಿಸುವುದ್ದಕ್ಕೇ ಭಯವಾಗುತ್ತಿದೆ ಅಂತ ಅವನಿಗೆ ಹೇಗೆ ಹೇಳಲಿ? ಯಾವೊತ್ತೂ ತನ್ನ ಪಾಡಿಗೆ ತೆಪ್ಪಗೆ ಅಂಗಳದ ಬದಿಯಲ್ಲಿ , ಊರ ಕಿನಾರೆಯಲ್ಲಿ ಬಳಸಿ ಹೋಗುತ್ತಿದ್ದ ನದಿ ಎರಡು ವರ್ಷಗಳ ಹಿಂದೆ ಹುಚ್ಚೆದ್ದು ಕುಣಿದು, ಕೆನ್ನೀರ ಹೊಳೆಯಾಗಿ ಹರಿದು, ಮನೆ-ಮಠ, ಊರು-ಕೇರಿ ಎಲ್ಲವನ್ನೂ ತೊಳೆದು ನೆಲಸಮ ಮಾಡಿದ್ದನ್ನು ನೋಡಿದ ಮೇಲೆ, ನದಿಯೆಂದರೆ ದಿಗಿಲು. ಬೇಕೆನ್ನಿಸಿದಾಗಲೆಲ್ಲ ಹೊಳೆಯ ಬದಿಯಲ್ಲಿ ನಿಂತು, ನನ್ನೊಳಗಿನ ನೂರು ಮಾತುಗಳನ್ನು ಅದರೊಂದಿಗೆ ತೇಲಿಬಿಟ್ಟು ನಿರಾಳವಾಗುತ್ತಿದ್ದೆ. ಇತ್ತೀಚೆಗೆ ಭಯಾನಕ ಕೆನ್ನೀರಿನೊಂದಿಗೆ ತೇಲಿಬಂದ ಅದೆಷ್ಟೋ ದಾರುಣ ದೃಶ್ಯಗಳನ್ನು ನೋಡಿದ ಮೇಲೆ ನದಿಯ ಕಡೆಗೆ ಮುಖಮಾಡುವುದನ್ನು ನಿಲ್ಲಿಸಿದ್ದೇನೆ. ನದಿಯೀಗ ಮಾಮೂಲಿಯಂತೆಯೇ ಹರಿಯುತ್ತಿದೆ. ಬಿಡಿ, ಅದರದ್ದೇನು ತಪ್ಪಿದೆ? ಅದು ಇಲ್ಲಿತನಕ ಸಹಿಸಿದ್ದೇ ಹೆಚ್ಚು. ಆದರೆ ಯಾರದೋ ತಪ್ಪಿಗೆ ಇನ್ಯಾರೋ ಅನುಭವಿಸುವ ಪಾಡು. ಅದಿರಲಿ, ನಿಮಗೆ ನನ್ನ ಮನೆಯ ಪಕ್ಕ ಹರಿಯುವ ನದಿಯ ಕುರಿತು ಹೇಳಲೇಬೇಕು.
ಮನೆಕೆಲಸಗಳನ್ನು ಲಗುಬಗೆಯಲ್ಲಿ ಮುಗಿಸಿ, ಪ್ರತಿದಿನ ಹೊಳೆಯ ಬದಿಗೆ ಹೋಗಿ ನಾನು ಬಟ್ಟೆ ತೊಳೆಯುವುದು ರೂಢಿ. ಬಟ್ಟೆ ತೊಳೆಯುವಲ್ಲಿ ಮೊಣಕಾಲಿನವರೆಗೆ ನೀರು ಬರುತ್ತಿತ್ತು. ಈ ಹತ್ತು ವರುಷಗಳ ಅವಧಿಯಲ್ಲಿ ನಾ ಬಟ್ಟೆ ತೊಳೆಯುವ ಜಾಗದ ನೀರು ಆರುತ್ತಾ, ಪಾದ ಮುಳುಗುವಷ್ಟು ಬಂದು ನಿಂತಾಗಲೇ ನಡುಕ ಶುರುವಾದದ್ದು. ಎಷ್ಟು ಮೊಗೆದರೂ ನದಿನೀರು ಖಾಲಿಯಾಗುವುದೇ ಇಲ್ಲ ಅನ್ನುವ ನನ್ನ ಭ್ರಮೆ ಸುಳ್ಳಾಯಿತಾ? ನಾನು ನೀರಿಗೆ ಇಳಿದದ್ದು ಗೊತ್ತಾದ್ದದ್ದೇ ತಡ, ಬಣ್ಣ ಬಣ್ಣದ ಮೀನುಗಳು ರೆಕ್ಕೆಯಾಡಿಸುತ್ತಾ ಕಾಲನ್ನು ಸ್ವತ್ಛಗೊಳಿಸುತ್ತಾ ತಮ್ಮ ಪ್ರೀತಿಯನ್ನು ವ್ಯಕ್ತಪಡಿಸುತ್ತಿದ್ದವು. ಬಟ್ಟೆ ತುಂಬಿಸಿಕೊಂಡು ಹೋದ ಬಾಲ್ದಿಯನ್ನು ನೀರಲ್ಲಿ ಮುಳುಗಿಸಿದರೆ ಸಾಕು, ಪೊಡಿಇಡೀ ಮೀನುಗಳೆಲ್ಲ ಪುಳಕ್ಕನೆ ಅದರೊಳಗೆ ನುಗ್ಗಿ ಬಿಡುತ್ತಿದ್ದವು. ಅವುಗಳನ್ನು ಜತನದಲ್ಲಿ ನೀರಿರುವ ಬಾಟಲ್‌ಗೆ ತುಂಬಿಸಿ ಮಕ್ಕಳಿಗೆ ತೋರಿಸಲು ತೆಗೆದುಕೊಂಡು ಹೋಗುತ್ತಿದ್ದೆ. ಆದರೆ, ಎರಡೇ ದಿನದಲ್ಲಿ ಅವು ಅಸು ನೀಗುವುದ ಕಂಡು ಮತ್ತೆಂದೂ ಮೀನು ಹಿಡಿಯಲಿಲ್ಲ. ಈಗ ಹೊಳೆಯ ಮೀನುಗಳು ಎಲ್ಲಿ ಹೋದವೋ? ಒಂದೇ ಒಂದು ಮೀನುಗಳು ಬಾಲ ಕುಣಿಸುತ್ತಾ ಓಡಿ ಬರುವುದಿಲ್ಲ. ನೀರಿಗೆ ಪಾದ ಸೋಕಿಸಿದ ತಕ್ಷಣ ಒಂದೇ ಸಮ ಭಯಬಿದ್ದಂತೆ ಓಡಿ ಅಲ್ಲೆಲ್ಲೋ ಆಳದಲ್ಲಿ ಅವಿತುಕೊಳ್ಳುತ್ತವೆ.
ಮೊದಲೆಲ್ಲ ಬಲೆಹಾಕಿ ಮೀನು ಹಿಡಿಯುವುದು ನಮ್ಮ ಹಳ್ಳಿಯವರ ಹವ್ಯಾಸ. ಪ್ರತಿದಿನ ಹಿಡಿದಷ್ಟೂ ರಾಶಿ ರಾಶಿ ಸಿಗುತ್ತಿದ್ದ ತರೇವಾರಿ ಜಾತಿಯ ಮೀನುಗಳು. ಯಾರ ಮನೆಯಲ್ಲೂ ಮೀನಿಲ್ಲದೆ ಊಟವಿಲ್ಲ. ಅವುಗಳೆಲ್ಲವನ್ನು ಹಿಡಿದು ರುಚಿ ನೋಡಿದ ನಮ್ಮ ಜನರು, ಈಗ ಹೊಳೆಯಲ್ಲಿ ಮೀನುಗಳೇ ಸಿಗುವುದಿಲ್ಲ ಅಂತ ಅಲವತ್ತು ಕೊಳ್ಳುತ್ತಾರೆ. ಹೊಳೆಯ ದಂಡೆಯ ಬದಿಯಲ್ಲಿ ಮೀನುಮೊಟ್ಟೆಗಳು, ಗೊದ್ದ ಮೊಟ್ಟೆಗಳು ಬಲೆ ಹಾಕಿದಂತೆ ಇರುತ್ತಿದ್ದವು. ಇದನ್ನೆಲ್ಲ ನಾನೇ ನೋಡಿದ್ದಾ? ಕರೆಂಟ್ ಬಂದರೆ ಸಾಕು ಹೊಳೆಯ ಬದಿಯಲ್ಲಿರುವ ಎಲ್ಲಾ ಪಂಪ್ ಶೆಡ್‌ಗಳು ಪೈಪೋಟಿಗೆ ಬಿದ್ದಂತೆ ಸದ್ದೆಬ್ಬಿಸುತ್ತವೆ. ಆದರೂ ತೇವವನ್ನು ಉಳಿಸಲು ವಿಫಲವಾಗುತ್ತಿವೆ. ಎಷ್ಟೋ ಬಾರಿ ನಾನು ಯೋಚಿಸಿದ್ದೆ, ಅದೆಷ್ಟು ಉಪಯೋಗಿಸಿದರೂ ಒಂದಿಂಚು ನೀರು ಕಡಿಮೆಯಾಗದೇ ಹರಿಯುವ ನದಿಯ ಕರುಣೆ ಅಪಾರ ಅಂತ. ಆದರೆ ಈಗ ನದಿಯ ಬದಿಯಲ್ಲಿ ಇಡುತ್ತಿದ್ದ ನೀರೆಳೆಯುವ ಪೈಪುಗಳು ನೀರಿನ ಗುಂಡಿ ಸಾಕಾಗದೆ ನದಿಯ ನಡುವನ್ನು ಆಕ್ರಮಿಸಿವೆ. ನಮ್ಮ ಊರಿನ ಕೆಲವು ಮನೆಗಳಲ್ಲಿ ತೋಟಕ್ಕೆ ಇಲ್ಲಿತನಕ ಹನಿ ನೀರಾವರಿ ಅಳವಡಿಸದೆ ಹೊಳೆ ನೀರನ್ನೇ ತಿರುಗಿಸಿ ಬೇಸಗೆಯಲ್ಲಿ ತೋಟವನ್ನು ತಂಪುಗೊಳಿಸುತ್ತಿದ್ದರು. ಈಗೀಗ ನೀರು ಆರಿ ತೋಟದವರೆಗೆ ತರಲಾಗದೆ, ಸಾಲಸೋಲ ಮಾಡಿ ಪಂಪು ಅಳವಡಿಸುತ್ತಿದ್ದೇವೆ ಅಂತ ಹೇಳುತ್ತಿದ್ದಾರೆ.
ಈಗ ಬೇಸಗೆಯಲ್ಲಿ ಕುಡಿಯಲು ಬಿಂದಿಗೆ ತುಂಬುವಷ್ಟು ನೀರೇ ಸಾಕಾಗುವುದಿಲ್ಲ ಅಂತನೂ ಹೇಳುತ್ತಿದ್ದಾರೆ. ನದಿಯನ್ನೇ ನಂಬಿಕೊಂಡವರ ಪಾಡೇನು? ನದಿಯ ಜುಳುಜುಳು ಕಿವಿಗೆ ತಾಕದೆ ಕಾಲವೇ ಸರಿಯಿತು. ತೊಳೆದ ವಾಹನದ ಜಿಡ್ಡಿನಂಶ ಶುಭ್ರ ನದಿಯ ಮೇಲ್ಪದರದಲ್ಲಿ ತೇಲಿ ಬರುವಾಗ ಎದೆಯೊಳಗೊಂದು ಸಂಕಟ. ಕಳೆದ ಸಲ ಬಿದ್ದ ಮಹಾಮಳೆಗೆ ಎಷ್ಟೋ ನದಿಗಳು ಹುಟ್ಟಿಕೊಂಡಿದ್ದವು. ಇದ್ದ ನದಿಗಳು ಪಾತ್ರ ಬದಲಿಸಿದ್ದವು. ಅದೆಷ್ಟು ನೀರು ಸೊಕ್ಕಿನಿಂದ ಹರಿಯುತ್ತಿತ್ತೆಂದರೆ ಈ ಬೇಸಗೆಯಲ್ಲಿ ನೀರಿನ ಅಭಾವ ಬರಲಾರದು ಅಂದುಕೊಂಡಿದ್ದೆವು. ಆದರೀಗ ಸೂರ್ಯನಿಗೇ ತೀವ್ರ ಬಾಯಾರಿಕೆಯೋ ಕಾಣೆ ಎಲ್ಲವನ್ನು ಆಪೋಷನ ತೆಗೆದುಕೊಂಡಂತೆ ಕುಡಿದ. ಈಗ ತನ್ನ ನಡಿಗೆಗೂ ಶಕ್ತಿಯಿಲ್ಲದಷ್ಟು ನದಿ ಬಡಕಲಾಗಿದೆ. ನಮ್ಮ ಮಕ್ಕಳೆಲ್ಲ ಯಾವುದೇ ಈಜು ತರಗತಿಗಳಿಗೆ ಹೋಗದೆ ನದಿಯೊಳಗಿನ ಬಂಡೆಕಲ್ಲು ಹಿಡಿದೇ ಈಜು ಕಲಿತವರು. ಈಗ ಈಜು ಕಲಿಸಿದ ಬಂಡೆಕಲ್ಲು ತಟುಕು ನೀರಿನ ಮೇಲೆ ನಿಂತು ತಪಸ್ಸು ಮಾಡುತ್ತಿರುವಂತೆ ಭಾಸವಾಗುತ್ತಿದೆ. ಕೆಲವು ಕಡೆ ಬರೇ ಮರಳು ಮಾತ್ರ. ಕಳೆದ ಸಲದ ಭಯಂಕರ ಮಳೆಗೆ ಬುಡ ಸಮೇತ ಉರುಳಿಕೊಂಡು ಬಂದ ಮರಗಳೆಲ್ಲ ಹಾಗೆ ನದಿಯ ದಡದಲ್ಲಿ ಒಣಗಿಕೊಳ್ಳುತ್ತಾ ಸ್ತಬ್ಧ ಚಿತ್ರದಂತೆ ಗೋಚರಿಸುತ್ತಿವೆ. ಇದು ಭವಿಷ್ಯಕ್ಕೆ ಎಚ್ಚರಿಕೆಯ ಚಿತ್ರಣವಾ? ಎದೆಯೊಳಗೆ ಆತಂಕದ ಬಡಿತ. ಬೇಸಗೆಯ ನನ್ನೂರಿನ ನದಿ ಈಗ ನಾ ಹಿಂದೆ ಬರೆದದ್ದೆಲ್ಲ ಸುಳ್ಳು ಸುಳ್ಳೇ ಅನ್ನುವಷ್ಟು ರೂಪ ಬದಲಾಯಿಸಿದೆ. ಕವಿತೆಯಾಗಿ ಗುನುಗಿ, ಕತೆಯಾಗಿ ಹರಿದು, ಲಹರಿಯಾಗಿ ನೇವರಿಸಿ, ಜೀವ ಸೆಲೆಯಾಗಿ ನನ್ನೊಳಗಿನ ಭಾವ ಬರಡಾಗದಂತೆ ಕಾಪಿಡುತ್ತಿದ್ದ ಜೀವದಾಯಿನಿ ಸೊರಗುವುದನ್ನು ನೋಡಲಾದೀತೇ? ನನ್ನೂರಿನ ನದಿ ಬೇಸಗೆಯಲ್ಲೂ ತುಂಬಿ ನಿನಾದಿಸಿ ಬಾಗಿ ಬಳುಕಿ ಹರಿಯುವುದನ್ನು ನಾನು ನೋಡಬೇಕು. ನದಿ ಮೊದಲಿನಂತಾಗುವುದು ಎಂಬ ಭರವಸೆ ನನ್ನದು.
ಸ್ಮಿತಾ ಅಮೃತರಾಜ್