Advertisement
ತುಂಬೆಯಲ್ಲಿ ನೇತ್ರಾವತಿ ನದಿಯ ಅಪಾಯದ ಮಟ್ಟ 8.5 ಮೀಟರ್ ಗಳಾಗಿದ್ದು ಬುಧವಾರ ಬೆಳಗ್ಗೆ ನದಿ ನೀರಿನ ಮಟ್ಟ 8.4 ಮೀಟರ್ ಇತ್ತು. ಆದರೆ ಬಳಿಕ ನೆರೆ ನೀರು ಇಳಿದ ಪರಿಣಾಮ ಹಾಗೂ ದಕ್ಷಿಣ ಕನ್ನಡ ಭಾಗದಲ್ಲಿ ಮಳೆ ಇಳಿಮುಖವಾದ ಕಾರಣ ಇದೀಗ ನೇತ್ರಾವತಿಯಲ್ಲಿ ಅಪಾಯದ ಮಟ್ಟ ಇಳಿಕೆಯಾಗಿದೆ. ಬುಧವಾರ ಮಧ್ಯಾಹ್ನದ ಹೊತ್ತಿಗೆ ನೇತ್ರಾವತಿ ನೀರಿನ ಮಟ್ಟ 8.2 ಮೀಟರ್ ಗಳಷ್ಟಿತ್ತು ಎಂದು ತಿಳಿದುಬಂದಿದೆ.ಆದರೆ ನೇತ್ರಾವತಿ ನದೀ ಪಾತ್ರಗಳು ಹಲವು ಕಡೆಗಳಲ್ಲಿ ಮುಳುಗಡೆಗೊಂಡಿದೆ. ಅಜಿಲಮೊಗರು, ಸರಪಾಡಿ ಮೊದಲಾದ ಕಡೆಗಳಲ್ಲಿ ತಗ್ಗುಪ್ರದೇಶಗಳಿಗೆ ನದಿ ನೀರಿ ನುಗ್ಗಿತ್ತು. ಇನ್ನು ಕುಮಾರಧಾರಾ ಹರಿಯುವ ಹಲವು ಕಡೆಗಳಲ್ಲಿ ತಗ್ಗು ಪ್ರದೇಶಗಳು ಮುಳುಗಡೆಯಾಗಿರುವ ಕುರಿತು ವರದಿ ಲಭ್ಯವಾಗಿದೆ.
ಸಂಗಮ ಕ್ಷೇತ್ರ ಉಪ್ಪಿನಂಗಡಿಯಲ್ಲಿ ಸಹಜ ಸ್ಥಿತಿ ಇದೆ. ಕುಮಾರಧಾರ ನದಿಯಲ್ಲಿ ನೀರಿನ ಹರಿವು ಹೆಚ್ಚಾಗಿದೆ. ಇನ್ನೊಂದು ಬದಿಯಿಂದ ಹರಿಯುವ ನೇತ್ರಾವತಿಯಲ್ಲಿ ಹರಿವು ಸಾಮಾನ್ಯವಾಗಿದೆ ಎಂದು ತಿಳಿದುಬಂದಿದೆ. ಸದ್ಯದ ಲೆಕ್ಕಾಚಾರದಂತೆ ಉಪ್ಪಿನಂಗಡಿಯಲ್ಲಿ ನದಿನೀರಿನ ಮಟ್ಟ 30 ಮೀಟರ್ ಗಳಷ್ಟಾದರೆ ‘ಸಂಗಮ’ವಾಗುತ್ತದೆ.
ದಕ್ಷಿಣಕನ್ನಡ ಜಿಲ್ಲಾಧಿಕಾರಿ ಸಸಿಕಾಂತ್ ಸೆಂಥಿಲ್, ಪುತ್ತೂರು ಸಹಾಯಕ ಕಮಿಷನರ್ ಕೃಷ್ಣಮೂರ್ತಿ, ತಾಲೂಕು ಕಂದಾಯ ನಿರೀಕ್ಷಕ ವಿಜಯ ವಿಕ್ರಮ ಅವರು ಸ್ಥಳೀಯ ಪೊಲೀಸ್ ಅಧಿಕಾರಿಗಳೊಂದಿಗೆ ಇಂದು ಉಪ್ಪಿನಂಗಡಿಗೆ ಭೇಟಿ ನೀಡಿ ನದಿ ನೀರಿನ ಮಟ್ಟ ಹಾಗೂ ಒಟ್ಟಾರೆ ಪರಿಸ್ಥಿತಿಯ ಅವಲೋಕನ ನಡೆಸಿದರು.
ಸುದ್ದಿ-ಚಿತ್ರ-ವಿಡಿಯೋ ಮಾಹಿತಿ: ಕಿರಣ್ ಸರಪಾಡಿ, ಎಂ.ಎಸ್. ಭಟ್, ಉಪ್ಪಿನಂಗಡಿ